ಕೋಲಾರ : ಅಂಗನವಾಡಿ ಕಟ್ಟಡದ ಮೇಲ್ಚಾವಣಿಯ ಗಾರೆ ಕುಸಿದು ಬಿದ್ದು ನಾಲ್ವರು ಮಕ್ಕಳು ಗಾಯಗೊಂಡಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ಬಂಗಾರಪೇಟೆಯ ದಾಸರಹೊಸಹಳ್ಳಿಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಅಂಗನವಾಡಿಯಲ್ಲಿ ಒಟ್ಟು 13 ಮಕ್ಕಳು ಇದ್ದರು. ಘಟನೆ ವೇಳೆ ನಾಲ್ಕು ಮಕ್ಕಳ ತಲೆಗೆ, ಕೈ-ಕಾಲುಗಳಿಗೆ ಗಾಯಗಳಾಗಿದ್ದು, ಕೂಡಲೇ ಮಕ್ಕಳನ್ನು ಬಂಗಾರಪೇಟೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಗಾಯಗೊಂಡ ಮಕ್ಕಳನ್ನು ಲಿಖಿತ, ಜಾನವಿ, ಲಾಸ್ಯ ಮತ್ತು ಪರಿಣಿತಾ ಎಂದು ಗುರುತಿಸಲಾಗಿದೆ. ಲಿಕಿತಾ ಮತ್ತು ಜಾನವಿ ಎಂಬ ಮಕ್ಕಳಿಗೆ ತಲೆಗೆ ಗಾಯವಾಗಿದ್ದು, ಲಾಸ್ಯ ಮತ್ತು ಪರಿಣಿತಾ ಕಾಲುಗಳ ಮೂಳೆ ಮುರಿತವಾಗಿದೆ ಎಂದು ತಿಳಿದುಬಂದಿದೆ.
ಘಟನೆ ಬೆನ್ನಲ್ಲೇ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆಸ್ಪತ್ರೆಗೆ ಧಾವಿಸಿ ಮಕ್ಕಳ ಆರೋಗ್ಯ ವಿಚಾರಿಸಿದರು. ಮಕ್ಕಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು.
ದಿ ನ್ಯೂ ಸಂಡೆ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕ ನಾರಾಯಣಸ್ವಾಮಿ ಅವರು, ಮೇಲ್ಛಾವಣಿಯಲ್ಲಿ ಬಿರುಕು ಉಂಟಾಗಿದ್ದರಿಂದ ಕುಸಿದು ಬಿದ್ದಿದೆ. ಸೋಮವಾರದಿಂದ ವಿದ್ಯಾರ್ಥಿಗಳನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದು ಹೇಳಿದರು.
ಮೇಲ್ಚಾವಣಿಯಲ್ಲಿ ನೀರು ನಿಂತಿರುವುದು ಘಟನೆಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಆತಂಕಕ್ಕೊಳಗಾದ ಪೋಷಕರು ಕಟ್ಟಡವನ್ನು ನಿರ್ವಹಿಸದ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.