ಸಂಗ್ರಹ ಚಿತ್ರ 
ರಾಜ್ಯ

ಗಾಂಧಿ ಬಜಾರ್‌ ಮಾರುಕಟ್ಟೆ ಮರು ವಿನ್ಯಾಸದಿಂದ ಮಾರಾಟಗಾರರು, ಗ್ರಾಹಕರಿಗೆ ಅನುಕೂಲವಾಗಲಿದೆ: ಹೈಕೋರ್ಟ್

ಯೋಜನೆಯ ಅನುಷ್ಠಾನ 2022ರ ಡಿಸೆಂಬರ್‌ನಲ್ಲೇ ಆರಂಭವಾಗಿದೆ. ಈಗಾಗಲೇ ಶೇ 95ರಷ್ಟು ಪೂರ್ಣಗೊಂಡಿದೆ. ಇದಕ್ಕಾಗಿ 24.88 ಕೋಟಿ ರೂ. ವ್ಯಯಿಸಲಾಗಿದೆ.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಗಾಂಧಿ ಬಜಾರ್ ಮಾರುಕಟ್ಟೆ ಮರುವಿನ್ಯಾಸ ಯೋಜನೆಯು ಪ್ರದೇಶದ ನಿರ್ವಹಣೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದು, ಯೋಜನೆಯಿಂದ ಮಾರಾಟಗಾರರು ಹಾಗೂ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ಹೈಕೋರ್ಟ್ ಹೇಳಿದೆ.

ಬೆಂಗಳೂರಿನ ಹೆರಿಟೇಜ್‌ ಬಸವನಗುಡಿ ರೆಸಿಡೆಂಟ್ಸ್‌ ವೆಲ್ಫೇರ್‌ ಫೋರಂ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ನೇತೃತ್ವದ ವಿಭಾಗೀಯ ಪೀಠ, ಈ ಕುರಿತಂತೆ ಆದೇಶಿಸಿದೆ.

ಉದ್ದೇಶಿತ ಯೋಜನೆಯಿಂದ 90 ಅಡಿ ಅಗಲದ ಗಾಂಧಿ ಬಜಾರ್‌ ಮುಖ್ಯ ರಸ್ತೆಯು 23 ಅಡಿಗೆ ಕುಂಠಿತಗೊಳ್ಳಲಿದೆ. ಪಾದಚಾರಿ ಮಾರ್ಗ ವಿಸ್ತೃತಗೊಂಡು, ವಾಹನ ಮತ್ತು ಜನರ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗಲಿದೆ. ರಸ್ತೆಯ ವೈಟ್‌ ಟಾಪಿಂಗ್‌ ಮತ್ತು ಆಧುನೀಕರಣವೂ ವೈಜ್ಞಾನಿಕವಾಗಿಲ್ಲ. ಆಧುನೀಕರಣದ ಹೆಸರಿನಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾದ ತಪ್ಪಾದ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ. ಆದ್ದರಿಂದ, ಈ ಯೋಜನೆಯನ್ನು ಅವೈಜ್ಞಾನಿಕ ಎಂದು ಘೋಷಿಸಬೇಕು. ಯೋಜನೆ ಜಾರಿ ಮಾಡದಂತೆ ರಾಜ್ಯ ಸರ್ಕಾರ ಮತ್ತು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಗಾಂಧಿ ಬಜಾರ್‌ ಜನಸಂದಣಿ ಪ್ರದೇಶವಾಗಿದೆ. ದೊಡ್ಡ ಸಂಖ್ಯೆಯಲ್ಲಿ ಬೀದಿ ವ್ಯಾಪಾರಿಗಳು ರಸ್ತೆಯಲ್ಲಿ ಕೂತು ವ್ಯಾಪಾರ ಮಾಡುತ್ತಿರುತ್ತಾರೆ. ಬೆಳಗ್ಗೆ ಮತ್ತು ಸಂಜೆ ವಾಹನ ಮತ್ತು ಜನ ದಟ್ಟಣೆ ಹೆಚ್ಚಿರುತ್ತದೆ. ಇದರಿಂದ ವಿವಿಧ ಜಂಕ್ಷನ್‌ಗಳಲ್ಲಿ ಪಾದಚಾರಿಗಳು ಸುರಕ್ಷತೆಯಿಂದ ರಸ್ತೆ ದಾಟಲು, ಬೀದಿ ವ್ಯಾಪಾರಿಗೆ ಸೂಕ್ತ ಸ್ಥಳಾವಕಾಶ ಒದಗಿಸಲು, ವಾಹನಗಳ ಸುಗಮ ಸಂಚಾರ ಹಾಗೂ ನಿಲುಗಡೆಗೆ, ತಂಗುದಾಣದೊಂದಿಗೆ ಬಸ್‌ ನಿಲ್ದಾಣ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ 'ಗಾಂಧಿ ಬಜಾರ್‌ ಮಾರುಕಟ್ಟೆ ಬೀದಿ ಮರು ವಿನ್ಯಾಸ ಯೋಜನೆ' ಜಾರಿ ಮಾಡಲಾಗುತ್ತಿದೆ. ಇಡೀ ಗಾಂಧಿ ಬಜಾರ್‌ ರಸ್ತೆಯ ಉತ್ತಮ ನಿರ್ವಹಣೆ ಪ್ರಸ್ತಾವನೆಯನ್ನು ಈ ಯೋಜನೆ ಒಳಗೊಂಡಿದೆ.

ಯೋಜನೆಯ ಅನುಷ್ಠಾನ 2022ರ ಡಿಸೆಂಬರ್‌ನಲ್ಲೇ ಆರಂಭವಾಗಿದೆ. ಈಗಾಗಲೇ ಶೇ 95ರಷ್ಟು ಪೂರ್ಣಗೊಂಡಿದೆ. ಇದಕ್ಕಾಗಿ 24.88 ಕೋಟಿ ರೂ. ವ್ಯಯಿಸಲಾಗಿದೆ. ಬಾಕಿ ಉಳಿದಿರುವ ಶೇ 5ರಷ್ಟು ಕಾಮಗಾರಿ 2025ರ ಜನವರಿಯಲ್ಲಿ ಪೂರ್ಣಗೊಳ್ಳಲಿದೆ. ಈ ಹಂತದಲ್ಲಿ ಯೋಜನೆಗೆ ಯಾವುದೇ ಮಾರ್ಪಾಡು ಮಾಡಲು ನಿರ್ದೇಶಿಸಿದರೆ ಅದರಿಂದ ತೊಂದರೆ ಉಂಟಾಗಲಿದೆ ಎಂದು ಪೀಠ ಅಭಿಪ್ರಾಯಪಟ್ಟಿತು.

ಅಲ್ಲದೆ, ಸಾರ್ವಜನಿಕರ ಹಿತಾಸಕ್ತಿ ಹಾಗೂ ಅನುಕೂಲಕ್ಕಾಗಿಯೇ ಈ ಯೋಜನೆ ಜಾರಿಗೊಳಿಸುತ್ತಿರುವ ಕಾರಣ ಯೋಜನೆ ಜಾರಿ ಮಾಡದಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂಬ ಅರ್ಜಿದಾರರ ಮನವಿಯನ್ನು ಪುರಸ್ಕರಿಸಲಾಗದು ಎಂದು ಪೀಠ ತಿಳಿಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

SCROLL FOR NEXT