ಮೈಸೂರು: ಶರಣಾದ ಆರು ಮಂದಿ ನಕ್ಸಲರು ಏಲ್ಲಿ ಶಸ್ತ್ರಾಸ್ತ್ರಗಳನ್ನು ಇಟ್ಟಿದ್ದಾರೆ ಎಂಬುದು ಪೊಲೀಸರಿಗೆ ಗೊತ್ತಿದೆ. ಮಹಜರಿಗೆ ಒಳಪಡಿಸಿ ಅವುಗಳನ್ನು ವಶಕ್ಕೆ ತೆಗೆದುಕೊಳ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ನಕ್ಸಲೀಯರ ಶರಣಾಗತಿ ಬಗ್ಗೆ ಪ್ರತಿಪಕ್ಷ ಬಿಜೆಪಿ ಟೀಕೆ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ನಕ್ಸಲ್ ಚಳವಳಿ ಅಂತ್ಯಗೊಳಿಸುವುದು ಮತ್ತು ಇಂತಹ ಚಟುವಟಿಕೆಗಳಲ್ಲಿ ತೊಡಗಿರುವವರು ಶಸ್ತ್ರ ತ್ಯಜಿಸಿ ಸಮಾಜದ ಮುಖ್ಯ ವಾಹಿಗೆ ಬರುವಂತೆ ಸಂದೇಶ ರವಾನಿಸುವುದು ಆಡಳಿತದ ಉದ್ದೇಶವಾಗಿತ್ತು ಎಂದು ಸಮರ್ಥಿಸಿಕೊಂಡರು.
ಶರಣಾದ ನಕ್ಸಲೀಯರು ಶಸ್ತ್ರಾಸ್ತ್ರಗಳನ್ನು ಎಲ್ಲಿಟ್ಟಿದ್ದಾರೆ ಎಂಬುದು ಗೊತ್ತಿದೆ. ಪೊಲೀಸರು ಮಹಜರು ನಡೆಸಿ ಅವುಗಳನ್ನು ವಶಕ್ಕೆ ಪಡೆಯಲಿದ್ದಾರೆ. ನಕ್ಸಲಿಸಂ ಇರಬಾರದು ಎಂಬುದು ಸರ್ಕಾರದ ಉದ್ದೇಶವಾಗಿದೆ ಮತ್ತು ಯಾವುದೇ ಹೋರಾಟ ಶಾಂತಿಯುತವಾಗಿರಲು ಬಯಸುತ್ತದೆ. ಸಶಸ್ತ್ರ ಹೋರಾಟ ಇರಬಾರದು ಎಂದು ಹೇಳಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಕೂಡ ಹೋರಾಟಕ್ಕೆ ಸಾಂವಿಧಾನಿಕ ವಿಧಾನಗಳನ್ನು ಬಳಸಬೇಕು ಎಂದು ಹೇಳಿದ್ದಾರೆ. ಸಂವಿಧಾನ ಬಾಹಿರ ಕ್ರಮಗಳನ್ನು ಅನುಸರಿಸಬಾರದು. ಪ್ರತಿಭಟನೆ ಅಥವಾ ಹೋರಾಟದ ಹೆಸರಿನಲ್ಲಿ ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ತಿಳಿಸಿದರು.
ಓರ್ವ ನಕ್ಸಲ್ ಇನ್ನೂ ತಲೆಮರೆಸಿಕೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಇನ್ನೋರ್ವ ನಕ್ಸಲ್ ಬಗ್ಗೆ ಖಚಿತತೆ ಇಲ್ಲ.ಹಾಗೆ ಇದ್ದರೇ ಆತನೂ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮನವಿ ಮಾಡುತ್ತೇನೆ ಎಂದರು.
ಕನಿಷ್ಠ ಬೆಂಬಲ ಬೆಲೆಯನ್ನು ಶಾಸನಬದ್ದಗೊಳಿಸಬೇಕು ಎಂಬ ಬೇಡಿಕೆಯೊಂದಿಗೆ ಕೇಂದ್ರ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಕೇಂದ್ರ ಸರ್ಕಾರ ರೈತ ಪರವಾಗಿಲ್ಲ. ಕನಿಷ್ಠ ಬೆಂಬಲ ಬೆಲೆಯನ್ನು ಶಾಸನಬದ್ಧಗೊಳಿಸುವಂತೆ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಹಾಗೆ ಮಾಡಲು ಕೇಂದ್ರ ಸರ್ಕಾರ ಸಿದ್ಧವಿಲ್ಲ. ರೈತರ ಬೇಡಿಕೆಗಳನ್ನು ಅವರು ಒಪ್ಪುತ್ತಿಲ್ಲ. ಇದು ಅಮಾನವೀಯ ಮತ್ತು ರೈತ ವಿರೋಧಿ ಸರ್ಕಾರವಾಗಿದೆ ಎಂದು ಟೀಕಿಸಿದರು.
ಬಿಜೆಪಿಯ 'ಭೀಮಾ ಸಂಗಮ' ಪ್ರತಿಭಟನೆಯನ್ನು ಜೋಕ್ ಎಂದು ಕರೆದ ಮುಖ್ಯಮಂತ್ರಿ, ಅಂಬೇಡ್ಕರ್ ಕುರಿತು ಬಿಜೆಪಿಯ ಭಾವನೆ ಮತ್ತು ಗೌರವ ಅಮಿತ್ ಶಾ ಹೇಳಿಕೆಯಿಂದ ತಿಳಿದುಬಂದಿದೆ. ಸಂವಿಧಾನ ಬದಲಾವಣೆ ಕುರಿತು ಬಿಜೆಪಿ ಮತ್ತು ಅದರ ನಾಯಕರು ಮಾತನಾಡುತ್ತಾರೆ. ಆರ್ ಎಸ್ ಎಸ್ ಸಂವಿಧಾನ ವಿರೋಧಿಯಾಗಿದ್ದರೆ ಕಾಂಗ್ರೆಸ್ ಸಂವಿಧಾನಕ್ಕೆ ಬದ್ಧವಾಗಿದೆ. ಸಂವಿಧಾನ ಮತ್ತು ಅದರ ಉದ್ದೇಶಗಳನ್ನು ನಾವು ರಕ್ಷಿಸುತ್ತೇವೆ ಎಂದರು.