ಮೈಸೂರು: ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನವನ್ನು 10 ಸಾವಿರ ರೂ.ಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ಆಶಾ ಕಾರ್ಯಕರ್ತೆಯರ ಸಂಘಟನೆಯ ಮುಖಂಡರು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದ್ದು, ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಮುಷ್ಕರವನ್ನು ವಾಪಸ್ ಪಡೆಯಲಾಗಿದೆ.
ಆಶಾ ಕಾರ್ಯಕರ್ತೆಯರೊಂದಿಗೆ ನಮ್ಮ ಸಂಧಾನಸಭೆ ಯಶಸ್ವಿಯಾಗಿದೆ. ಅವರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರ ಕ್ರಮ ವಹಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ತಿಂಗಳಿಗೆ 15 ಸಾವಿರ ಗೌರವ ಧನ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆಶಾ ಕಾರ್ಯಕರ್ತೆಯರು ನಗರದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಸರ್ಕಾರ ಕೂಡಲೇ 12 ಸಾವಿರ ಗೌರವ ಧನ ನಿಗದಿ ಪಡಿಸಿ ಬಳಿಕ ಹಂತ ಹಂತವಾಗಿ ಮೂರು ಸಾವಿರ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದ್ದರು.
ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ
ಚಾಮರಾಜನಗರದಲ್ಲಿ ಫೆಬ್ರವರಿ 15 ರಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಚಾಮರಾಜನಗರ ಭಾಗದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಉದ್ದೇಶದಿಂದ ಸಂಪುಟ ಸಭೆ ನಡೆಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ರಸ್ತೆಗೆ ಹೆಸರಿಡಿ ಅಂತ ನಾನು ಯಾರಿಗೂ ಹೇಳಿಲ್ಲ
ಮೈಸೂರಿನ ರಸ್ತೆಯೊಂದಕ್ಕೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ಹೆಸರಿಡುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ನನ್ನ 45 ವರ್ಷದ ರಾಜಕೀಯದ ಅವಧಿಯಲ್ಲಿ ಎಂದಿಗೂ ನನ್ನ ಹೆಸರಿಡುವಂತೆ ಯಾರಿಗೂ ಹೇಳಿಲ್ಲ. ಹಿಂದೆ ಮೈಸೂರು ವಿಶ್ವವಿದ್ಯಾಲಯದವರು ನೀಡುವ ಡಾಕ್ಟರೇಟ್ ನ್ನು ನಾನು ನಿರಾಕರಿಸಿದ್ದೆ ಎಂದರು.
ಡಾಕ್ಟರೇಟ್ ತೆಗೆದುಕೊಳ್ಳುವಷ್ಟು ನನಗೆ ಯೋಗ್ಯತೆ ಇಲ್ಲ ಎಂದು ಹೇಳಿದ್ದೆ. ಆ ರಸ್ತೆಗೆ ಬೇರೆ ಹೆಸರಿದ್ದರೆ ಬದಲಾವಣೆ ಮಾಡುವುದು ಬೇಡ. ಹೆಸರಿಡುವ ವಿಚಾರವಾಗಿ ನಾನು ಯಾರ ಜೊತೆಯೂ ಚರ್ಚೆ ಮಾಡಿಲ್ಲ' ಎಂದು ಹೇಳಿದರು.