ಬೀದರ್: ಮೇಲ್ವರ್ಗದ ಯುವತಿಯನ್ನು ಪ್ರೀತಿಸಿದ ದಲಿತ ಯುವಕನಿಗೆ ಮನಬಂದಂತೆ ಥಳಿಸಿ ಹತ್ಯೆ ಮಾಡಿರುವ ಘಟನೆಯೊಂದು ಬೀದರ್ ನಲ್ಲಿ ಸೋಮವಾರ ವರದಿಯಾಗಿದೆ.
ಮೃತ ಯುವಕನನ್ನು ಕುಶನೂರು ಗ್ರಾಮದ ನಿವಾಸಿ ಸುಮಿತ್ ಕುಮಾರ್ (18) ಎಂದು ಗುರ್ತಿಸಲಾಗಿದೆ. ಯುವಕ ಕಮಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎಸ್ಸಿ ವಿದ್ಯಾರ್ಥಿಯಾಗಿದ್ದ. ಇದೇ ಗ್ರಾಮದ ಯುವತಿಯನ್ನು ಸುಮಿತ್ ಪ್ರೀತಿಸುತ್ತಿದ್ದ,
ಈ ವಿಚಾರ ತಿಳಿದ ಯುವತಿಯ ತಂದೆ ಹಾಗೂ ಸಹೋದರ ಜನವರಿ.5ರಂದು ಸುಮಿತ್ ಮೇಲೆ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಸುಮಿತ್ ನನ್ನು ಮಹಾರಾಷ್ಟ್ರದ ಲಾತೂರ್‌ನಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಾವನ್ನಪ್ಪಿದ್ದಾನೆ.
ಘಟನೆ ಸಂಬಂಧ ಕಿಶನ್ ಗಾವ್ಲಿ (55) ಮತ್ತು ರಾಹುಲ್ ಗಾವ್ಲಿ (24) ಎಂಬುವವರನ್ನು ಕುಶನೂರು ಪೊಲೀಸರು ವಶಕ್ಕೆ ಪಡೆದಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ಬಂಧನಕ್ಕೊಳಪಡಿಸಿದ್ದಾರೆ.