ಬೆಂಗಳೂರು: ಜನರ ಗಮನ ಬೇರೆಡೆ ಸೆಳೆದು ನಗದು ಮತ್ತು ಚಿನ್ನಾಭರಣ ದೋಚುತ್ತಿದ್ದ ಐವರು ಸದಸ್ಯರ ತಂಡದ ಇಬ್ಬರನ್ನು ಕೆ.ಆರ್.ಪುರಂ ಪೊಲೀಸರು ಬಂಧಿಸಿದ್ದಾರೆ.
ದೇವಸಂದ್ರದ ನಿವಾಸಿಯೊಬ್ಬರು ನವೆಂಬರ್ 29ರಂದು ಬ್ಯಾಂಕ್‌ನಿಂದ 4 ಲಕ್ಷ ಹಣವನ್ನು ಡ್ರಾ ಮಾಡಿ ಕಾರಿನಲ್ಲಿ ತೆರಳುತ್ತಿದ್ದರು. ಟಿ.ಸಿ.ಪಾಳ್ಯದ ಬಳಿ ಎರಡು ದ್ವಿಚಕ್ರ ವಾಹನಗಳಲ್ಲಿ ಕಾರು ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿಗಳು, ಕಾರಿನ ಟೈಯರ್ ಪಂಕ್ಚರ್ ಆಗಿದೆ ಎಂದು ಹೇಳಿದ್ದರು. ಬಳಿಕ ಪಂಕ್ಚರ್ ಹಾಕಿಸಿ ಹಣ ಕೊಡಲು ಹೋದಾಗ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿದ್ದ ಹಣವನ್ನು ಕಳವು ಮಾಡಿಕೊಂಡು ಆರೋಪಿಗಳು ಪರಾರಿ ಆಗಿದ್ದರು.
ಕಳೆದ ವರ್ಷ ನವೆಂಬರ್ 29 ರಂದು ಟಿಸಿ ಪಾಳ್ಯ ಬಳಿ ಈ ಘಟನೆ ನಡೆದಿತ್ತು. ಡಿಸೆಂಬರ್ 11 ರಂದು ಬೂದಿಗೆರೆ ರಸ್ತೆಯ ಬೊಮ್ಮನಹಳ್ಳಿ ಗೇಟ್ ಬಳಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಬಳಿಯಿಂದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಮೇ 16 ರಂದು ಕೊತ್ತನೂರಿನಲ್ಲಿ ಇದೇ ಆರೋಪಿಗಳು ದರೋಡೆ ಮಾಡಿದ್ದರು. ಮಹಿಳೆಯೊಬ್ಬರು ಬ್ಯಾಂಕ್‌ನ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ತೆಗೆದುಕೊಂಡು ಬ್ಯಾಂಕ್ ಮುಂಭಾಗದಲ್ಲಿ ಹೋಗುವಾಗ ಬೈಕ್‌ನಲ್ಲಿ ಬಂದಿದ್ದ ಆರೋಪಿಗಳು ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳಿದ್ದ ಬ್ಯಾಗ್ ಕಸಿದುಕೊಂಡು ಪರಾರಿ ಆಗಿದ್ದರು. ಆ ಆರೋಪಿಗಳು ಇವರೇ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದರು. ಗ್ಯಾಂಗ್ ನ ಇತರ ಸದಸ್ಯರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.