ಮಂಗಳೂರು: ಬೀದರ್ ಎಟಿಎಂ ದರೋಡೆ ಪ್ರಕರಣ ನಡೆದು ಇನ್ನೂ 3 ದಿನ ಕಳೆದಿಲ್ಲ.. ಅದಾಗಲೇ ಮಂಗಳೂರಿನಲ್ಲೂ ಅಂತಹುದೇ ಮತ್ತೊಂದು ದರೋಡೆ ಪ್ರಕರಣ ವರದಿಯಾಗಿದ್ದು, ಈ ಬಾರಿ ದುಷ್ಕರ್ಮಿಗಳು ಬರೊಬ್ಬರಿ 12 ಕೋಟಿ ರೂ ಮೌಲ್ಯದ ನಗದ ಹಾಗೂ ಚಿನ್ನಾಭರಣ ಹೊತ್ತು ಪರಾರಿಯಾಗಿದ್ದಾರೆ.
ನಿನ್ನೆ ಬೀದರ್ ನಲ್ಲಿ ಎಸ್ ಬಿಐ ಎಟಿಎಂ ಬಳಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ಇಬ್ಬರು ಆಗಂತುಕರು ಸಿಎಂಎಸ್ ಸಂಸ್ಥೆಯ ಸಿಬ್ಬಂದಿಗಳ ಮೇಲೆ ಗುಂಡು ಹಾರಿಸಿ ಸುಮಾರು 93 ಲಕ್ಷ ರೂ ಇದ್ದ ಹಣದ ಬಾಕ್ಸ್ ಅನ್ನು ಹೊತ್ತು ಪರಾರಿಯಾಗಿದ್ದರು. ಈ ಘಟನೆಯಲ್ಲಿ ಓರ್ವ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿ ಮತ್ತೋರ್ವ ಸಿಬ್ಬಂದಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಇನ್ನೂ ಹಸಿರಾಗಿರುವಂತೆಯೇ ಇತ್ತ ಮಂಗಳೂರಿನಲ್ಲೂ ಇಂತಹುದೇ ಮತ್ತೊಂದು ದರೋಡೆ ಪ್ರಕರಣ ವರದಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಕೆ.ಸಿ.ರೋಡಿನಲ್ಲಿ ಶುಕ್ರವಾರ ಮಧ್ಯಾಹ್ನ ಹಾಡಹಗಲೇ ಬ್ಯಾಂಕ್ ಗೆ ನುಗ್ಗಿದ ಖದೀಮರ ಗುಂಪು ಸುಮಾರು 12 ಕೋಟಿ ರೂ ಮೌಲ್ಯದ ನಗ-ನಗದು ದೋಚಿ ಪರಾರಿಯಾಗಿದ್ದಾರೆ. ಮೂಲಗಳ ಪ್ರಕಾರ ಒಟ್ಟು ಆರು ಜನರಿದ್ದ ದರೋಡೆಕೋರರ ತಂಡವು ಕೋಟೆಕಾರ್ ಬ್ಯಾಂಕ್ ಕೆ.ಸಿರೋಡು ಶಾಖೆಗೆ ನುಗ್ಗಿ, ಪಿಸ್ತೂಲು ಮತ್ತು ತಲವಾರು ತೋರಿಸಿ ಲೂಟಿ ಮಾಡಿದ್ದಾರೆ.
ಪೊಲೀಸರೆಲ್ಲ ಸಿಎಂ ಭದ್ರತೆಗೆ ತೆರಳಿದ್ದಾಗ ಘಟನೆ
ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದ ಕಾರಣ ಹೆಚ್ಚಿನ ಪೊಲೀಸರು ಅದರ ಭದ್ರತೆಗೆ ತೆರಳಿದ್ದರು. ಇದನ್ನೇ ಟಾರ್ಗೆಟ್ ಮಾಡಿಕೊಂಡು ದರೋಡೆಗೆ ಸಂಚು ರೂಪಿಸಿದ್ದ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಠಾಣೆ ಪೊಲೀಸರು, ಶ್ವಾನದಳ ಸಿಬ್ಬಂದಿ ಭೇಟಿ, ಪರಿಶೀಲನೆ ನಡೆಸಿದ್ದಾರೆ.
ನಮಾಜ್ ಸಮಯಕ್ಕಾಗಿ ಕಾದಿದ್ದ ದುಷ್ಕರ್ಮಿಗಳು
ಇಂದು ಶುಕ್ರವಾರವಾದ್ದರಿಂದ ಮುಸ್ಲಿಂ ಬಾಹುಳ್ಯದ ಪ್ರದೇಶವಾದ ಕೆ.ಸಿ.ರೋಡು ಜಂಕ್ಷನ್ ನಲ್ಲಿ ಶುಕ್ರವಾರ ಮಧ್ಯಾಹ್ನ ಪ್ರಾರ್ಥನೆ ಕಾರಣ ಜನಸಂಚಾರ ವಿರಳವಾಗಿತ್ತು. ಇದೇ ಸಮಯ ನೋಡಿಕೊಂಡು ದರೋಡೆಕೋರರ ಗುಂಪು ಬ್ಯಾಂಕ್ ಗೆ ದಾಳಿ ನಡೆಸಿದೆ. ಗ್ಯಾಂಗ್ ನಲ್ಲಿ ಆರು ಜನರಿದ್ದು, ಈ ಪೈಕಿ ಐವರು ಬ್ಯಾಂಕ್ ಗೆ ನುಗ್ಗಿದರೆ ಓರ್ವ ದುಷ್ಕರ್ಮಿ ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಅವರಿಗಾಗಿ ಕಾದಿದ್ದ. ಬ್ಯಾಂಕ್ ನೊಳಗೆ ನುಗ್ಗಿದ ದುಷ್ಕರ್ಮಿಗಳು ಪಿಸ್ತೂಲು ಮತ್ತು ತಲವಾರು ತೋರಿಸಿ ಬ್ಯಾಂಕ್ ನಿಂದ ಸುಮಾರು 12 ಕೋಟಿ ರೂ ಮೌಲ್ಯದ ಹಣ ಮತ್ತು ಚಿನ್ನದ ಆಭರಣಗಳನ್ನು ದೋಚಿದ್ದಾರೆ ಎಂದು ತಿಳಿದುಬಂದಿದೆ.
ಗಲಾಟೆ ಕೇಳಿ ಬ್ಯಾಂಕ್ ಗೆ ಓಡಿ ಬಂದ ವಿದ್ಯಾರ್ಥಿಗಳು
ಇನ್ನು ಕೋಟೆ ಕಾರು ಬ್ಯಾಂಕ್ ಮೊದಲ ಮಹಡಿಯಲ್ಲಿತ್ತು. ಕೆಳಗೆ ಬೇಕರಿ ಒಂದಿದ್ದು, ದರೋಡೆ ಸಮಯದಲ್ಲಿ ಬೇಕರಿಯಲ್ಲಿ ಕೆಲ ವಿದ್ಯಾರ್ಥಿಗಳು ತಿಂಡಿ ತಿನ್ನುತ್ತಿದ್ದರು. ಬ್ಯಾಂಕ್ ನಿಂದ ಕೇಳಿಬಂದ ಗಲಾಟೆ ಕೇಳಿ ವಿದ್ಯಾರ್ಥಿಗಳು ಬ್ಯಾಂಕ್ ನತ್ತ ಓಡಿದ್ದು, ಈ ವೇಳೆ ದುಷ್ಕರ್ಮಿಗಳು ಅವರಿಗೆ ಪಿಸ್ತುಲು-ತಲವಾರು ತೋರಿಸಿ ಬೆದರಿಸಿ ಓಡಿಸಿದ್ದಾರೆ. ಆಗ ಕೆಳಗೆ ಬಂದ ವಿದ್ಯಾರ್ಥಿಗಳು ಜೋರಾಗಿ ಕೂಗಿ ಸ್ಥಳೀಯರನ್ನು ಕರೆದಿದ್ದಾರೆ. ಆದರೆ ಇದಾವುದನ್ನೂ ಲೆಕ್ಕಿಸದ ದುಷ್ಕರ್ಮಿಗಳು ಹಣ-ಚಿನ್ನಾಭರಣ ಹೊತ್ತು ತಾವು ತಂದಿದ್ದ ಫಿಯಟ್ ಕಾರಿನಲ್ಲಿ ಪರಾರಿಯಾಗಿದ್ದಾರೆ. ದರೋಡೆಕೋರರ ಗ್ಯಾಂಗ್ ಮಂಗಳೂರಿನತ್ತ ಪರಾರಿಯಾಗಿದೆ ಮತ್ತು ದರೋಡೆಕೋರರು ಕನ್ನಡ ಮಾತನಾಡುತ್ತಿದ್ದರು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.
ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ: ಯುಟಿ ಖಾದರ್
ಇನ್ನು ದರೆೋಡೆ ವಿಚಾರ ತಿಳಿಯುತ್ತಲೇ ವಿಧಾನಸಭಾಧ್ಯಕ್ಷ ಹಾಗೂ ಸ್ಥಳೀಯ ಶಾಸಕ ಯು.ಟಿ.ಖಾದರ್ ಅವರು ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದಿದ್ದಾರೆ. ಸುದ್ದಿ ತಿಳಿದ ಉಲ್ಲಾಳ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬಳಿಕ ಮಾತನಾಡಿದ ಯುಟಿ ಖಾದರ್, 'ಬ್ಯಾಂಕ್ ದರೋಡೆ ವಿಚಾರವಾಗಿ ಮಂಗಳೂರಿನಲ್ಲಿ ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಪ್ರತಿಕ್ರಿಯಿಸಿದ್ದು, ಕೆಸಿ ರೋಡ್ನ ಕೋಟೆಕಾರು ಬ್ಯಾಂಕ್ನಲ್ಲಿ ಚಿನ್ನಾಭರಣ, ನಗದು ದರೋಡೆಯಾಗಿದೆ. ತಲ್ವಾರ್, ಗನ್ನಿಂದ ಬೆದರಿಸಿ ಬ್ಯಾಂಕ್ ದರೋಡೆ ಮಾಡಿದ ಮಾಹಿತಿ ದೊರೆತಿದೆ. ಜನಸಂದಣಿ ಕಡಿಮೆ ಇರುವ ಸಮಯದಲ್ಲೇ ದರೋಡೆ ನಡೆಸಿದ್ದಾರೆ. ಆರೋಪಿಗಳ ಬಂಧಿಸಲು ವಿಶೇಷ ತಂಡ ರಚನೆ ಮಾಡಲು ಸೂಚನೆ ನೀಡಲಾಗಿದೆ. ಜಿಲ್ಲಾಡಳಿತದಿಂದ ಪೊಲೀಸರಿಗೆ ಸಂಪೂರ್ಣ ಸಹಕಾರ ಕೊಡುತ್ತೇವೆ. ಪೊಲೀಸರು ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ' ಎಂದು ಹೇಳಿದ್ದಾರೆ.
ನಾಕಾಬಂದಿ
ಮಂಗಳೂರು ನಗರದಾದ್ಯಂತ ನಾಕಾಬಂದಿ ಮಾಡಿ ದರೋಡೆಕೋರರ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ದರೋಡೆಕೋರರು ಸುಮಾರು 20 ರಿಂದ 30 ವರ್ಷದ ವಯಸ್ಸಿನವರಾಗಿದ್ದು, ಹಿಂದಿಯಲ್ಲಿ ಪರಸ್ಪರ ಮಾತನಾಡುತ್ತಿದ್ದರೆಂದು ತಿಳಿದುಬಂದಿದೆ.
2ನೇ ಬಾರಿಗೆ ದರೋಡೆ
ಇನ್ನು ಇದೇ ಬ್ಯಾಂಕ್ ನಲ್ಲಿ ಈ ಹಿಂದೆಯೂ ದರೋಡೆ ಪ್ರಕರಣ ನಡೆದಿತ್ತು. ಕೆಲ ವರ್ಷಗಳ ಹಿಂದೆ ಇದೇ ಬ್ರ್ಯಾಂಚ್ ನಲ್ಲಿ ದರೋಡೆಯಾಗಿತ್ತು. ಆಗ ಬ್ಯಾಂಕ್ ಬೇರೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಬಳಿಕ ನಡೆದ ತನಿಖೆಯಲ್ಲಿ ಆಗಿನ ಬ್ಯಾಂಕ್ ನಿರ್ದೇಶಕರ ಪತಿಯೇ ದರೋಡೆಯಲ್ಲಿ ಶಾಮೀಲಾಗಿದ್ದ ವಿಚಾರ ಗೊತ್ತಾಗಿ ಆತನನ್ನು ಬಂಧಿಸಲಾಗಿತ್ತು.