ಸಾಲ್ಕೋಡು (ಉತ್ತರ ಕನ್ನಡ ಜಿಲ್ಲೆ): ಬೆಂಗಳೂರಿನಲ್ಲಿ ಮೂರು ಹಸುಗಳ ಕೆಚ್ಚಲು ಕಡಿದ ಘಟನೆ ಬೆನ್ನಲ್ಲೇ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಗರ್ಭಿಣಿ ಹಸುವಿನ ತಲೆ-ಕಾಲು ಕಡಿದು, ಹೊಟ್ಟೆ ಸೀಳಿ ಕರುವನ್ನೂ ಹತ್ಯೆ ಮಾಡಿದ ಘೋರ ಘಟನೆಯೊಂದು ವರದಿಯಾಗಿದೆ.
ಕೊಂಡಾಕುಳಿಯ ಕೃಷ್ಣ ಆಚಾರಿ ಎಂಬುವವರು ಶನಿವಾರ ಹಸುವನ್ನು ಮೇಯಲು ಬಿಟ್ಟಿದ್ದರು. ರಾತ್ರಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಹುಡುಕಾಡಿದರೂ ಸಿಕ್ಕಿರಲಿಲ್ಲ. ಭಾನುವಾರ ಬೆಳಗ್ಗೆ ಹಸು ಹತ್ಯೆ ಮಾಡಿರುವ ಕುರುಹು ಪತ್ತೆಯಾಗಿದೆ.
ಹತ್ಯೆ ಮಾಡಿದ ಸ್ಥಳದಲ್ಲಿ ಹಸುವಿನ ತಲೆ ಒಂದು ಕಡೆ, ಕಾಲುಗಳು ಮತ್ತೊಂದು ಕಡೆ ಪತ್ತೆಯಾಗಿದೆ. ಜೊತೆಗೆ ಗರ್ಭ ಧರಿಸಿದ್ದ ಹಸುವಿನ ಹೊಟ್ಟೆಯಲ್ಲಿದ್ದ ಕರುವನ್ನು ಕೂಡಾ ದಾರುಣವಾಗಿ ಹತ್ಯೆ ಮಾಡಿ ಅದನ್ನೂ ಅಲ್ಲೇ ಎಸೆದು ದನದ ಮಾಂಸವನ್ನು ಕೊಂಡೊಯ್ದಿದ್ದಾರೆ.
ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೃಷ್ಣ ಆಚಾರಿ ಅವರು, ಹೊನ್ನಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳೆದ 10 ವರ್ಷಗಳಿಂದ ನಾನು ಸಾಕಿದ್ದ ಕಪ್ಪು ಬಣ್ಣದ ಆಕಳನ್ನು ಜ. 18 ರಿಂದ 19ರ ನಡುವಿನ ಅವಧಿಯಲ್ಲಿ ಕಳವು ಮಾಡಿ ಅದನ್ನು ಸಾಯಿಸಿ ಗರ್ಭದಲ್ಲಿದ್ದ ಕರು ಸ್ಥಳದಲ್ಲಿ ಬಿಟ್ಟು ಆಕಳಿನ ಮಾಂಸ ತೆಗೆದುಕೊಂಡು ಹೋಗಿದ್ದಾರೆ ಎಂದು ಕೃಷ್ಣ ಆಚಾರಿ ದೂರಿನಲ್ಲಿ ತಿಳಿಸಿದ್ದಾರೆ.
ಹೊನ್ನಾವರದಲ್ಲಿ ಇತ್ತೀಚಿನ ದಿನಗಳಲ್ಲಿ ಜಾನುವಾರು ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಆರಂಭದಲ್ಲಿ ಚಿರತೆಗಳು ಜಾನುವಾರುಗಳನ್ನು ಕೊಲ್ಲುತ್ತಿದ್ದವು. ಆದರೆ, ಇದೀಗ ಮಾಂಸಕ್ಕಾಗಿ ಹಸುವನ್ನು ಹತ್ಯೆ ಮಾಡಿರುವುದು ಕಂಡು ಬಂದಿದೆ. ಪೊಲೀಸರು ನಮ್ಮ ಜಾನುವಾರುಗಳಿಗೆ ರಕ್ಷಣೆ ನೀಡಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಈ ನಡುವೆ ವಿಷಯ ತಿಳಿದು ಘಟನಾ ಸ್ಥಳಕ್ಕೆ ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿ, ಆಕಳ ಮಾಲೀಕರು ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದರು. ಬಳಿಕ ಪದೇ ಪದೇ ಗೋವುಗಳ ಮೇಲೆ ನಡೆಯುತ್ತಿರುವ ದಾಳಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಲ್ಲೋಲ-ಕಲ್ಲೋಲ ವಾತಾವರಣ ನಿರ್ಮಾಣವಾಗುತ್ತಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ರಾಮುಲ್ಲ ಖಾನ್ ಆಗಿದ್ದಾರೆ. ಗೃಹ ಇಲಾಖೆ ನಾಚಿಕೆಗೇಡಿಯಾಗಿದೆ. ಹಿಂದೂಗಳ ಸಂಸ್ಕೃತಿಗೆ ಪದೇ ಪದೆ ಧಕ್ಕೆ ತರುವ ಕೆಲಸ ಆಗುತ್ತಿದೆ ಎಂದು ಆರೋಪಿಸಿದರು.
ಬೆಂಗಳೂರಿನಲ್ಲಿ ಗೋವಿನ ಕೆಚ್ಚಲು ಕಡಿದ ಆರೋಪಿ ಮಾನಸಿಕ ಅಸ್ವಸ್ಥ ಎಂದು ಗೃಹಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಹಿಂದೂಗಳ ಭಾವನೆ ಧಕ್ಕೆ ತರುವ ಕೆಲಸ ಮಾಡಬೇಡಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ. ಈ ಕೃತ್ಯವನ್ನು ಖಂಡಿಸುತ್ತೇವೆ. ಬೆಂಗಳೂರಿನಲ್ಲಿ ಗೋವಿನ ಅಮಾನುಷ ಕೃತ್ಯ ನಡೆದ ನಂತರ ಸಚಿವ ಜಮೀರ್ ಅಹಮದ್ 3 ಲಕ್ಷ ಹಣ ನೀಡಿ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ಮಾಡಿದರು. ಇಲ್ಲಿಯೂ ಅಂತಹ ಘಟನೆ ನಡೆಯುವುದು ಬೇಡ. ಆ ಕುಟುಂಬಕ್ಕೆ ನಾವೆಲ್ಲರೂ ಸೇರಿ ಆರ್ಥಿಕ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.