ಡಿ.ಕೆ.ಶಿವಕುಮಾರ್ 
ರಾಜ್ಯ

'ವ್ಯವಸಾಯವೂ ಒಂದು ವ್ಯಾಪಾರ, ರೈತರು ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶನ ಅವಶ್ಯಕ; ಶೋಭಾ ಕರಂದ್ಲಾಜೆ ಕೃಷಿ ಸಚಿವರಾಗಿದ್ದು ನಮ್ಮ ಭಾಗ್ಯ'

ಜೋಳವನು ತಿನ್ನುವವನು ತೋಳದಂತಾಗುವನು, ನವಣೆಯನ್ನು ತಿನ್ನುವವನು ಕವಣೆಯಂತಾಗುವನು, ರಾಗಿಯನ್ನು ತಿನ್ನುವವನು ನಿರೋಗಿಯಾಗುವನು ಎಂದು ಸರ್ವಜ್ಞ ಅವರು ತಮ್ಮ ವಚನದಲ್ಲಿ ಹೇಳಿದ್ದಾರೆ.

ಬೆಂಗಳೂರು: ಸಾವಯವ ಕೃಷಿ ಮತ್ತು ಸಿರಿಧಾನ್ಯ ಕೃಷಿಗೆ ಹೆಚ್ಚಿನ ಮಹತ್ವ ನೀಡಿದರೆ ರೈತರ ಬದುಕು ಹಾಗೂ ಜನರ ಆರೋಗ್ಯವನ್ನು ಕಾಪಾಡಬಹುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.

ನಗರದ ಅರಮನೆ ಮೈದಾನದಲ್ಲಿ ಗುರುವಾರ ನಡೆದ ಅಂತರರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ -2025 ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮೈಸೂರು ಫೀಡ್ಸ್ ಪಶು ಆಹಾರ ಕಂಪೆನಿಯೊಂದಿತ್ತು. ನಾನು ಸ್ವಲ್ಪದಿನಗಳ ಕಾಲ ಅದರ ಭಾಗವಾಗಿದ್ದೆ. ಅದರ ಮೂಲಕ ಸಿರಿಧಾನ್ಯಗಳನ್ನು ಪಶು ಆಹಾರವಾಗಿ ಬಳಸಲಾಗುತ್ತಿತ್ತು. ನಮ್ಮ ಹೊಲದಲ್ಲಿಯೂ ಹುರುಳಿ ಸೇರಿದಂತೆ ಒಂದಷ್ಟು ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿತ್ತು. ಇದನ್ನು ಹೆಚ್ಚು ದನಗಳು, ಕುದುರೆಗಳಿಗೆ ನೀಡುತ್ತಿದ್ದರು. ಈಗ ಎಲ್ಲಾ ಸಿರಿಧಾನ್ಯಗಳಿಗೆ ಬ್ರಾಂಡ್ ಮೌಲ್ಯ ಬಂದಿದೆ. ದೊಡ್ಡ, ದೊಡ್ಡ ಮಾಲ್ ಗಳಲ್ಲಿ ಇವು ಸ್ಥಾನ ಪಡೆದಿವೆ ಎಂದರು.

ಜೋಳವನು ತಿನ್ನುವವನು ತೋಳದಂತಾಗುವನು, ನವಣೆಯನ್ನು ತಿನ್ನುವವನು ಕವಣೆಯಂತಾಗುವನು, ರಾಗಿಯನ್ನು ತಿನ್ನುವವನು ನಿರೋಗಿಯಾಗುವನು ಎಂದು ಸರ್ವಜ್ಞ ಅವರು ತಮ್ಮ ವಚನದಲ್ಲಿ ಹೇಳಿದ್ದಾರೆ. ಸಿರಿಧಾನ್ಯಗಳ ಮಹತ್ವವನ್ನು ನಮ್ಮ ಹಿರಿಯರು ಅರಿತಿದ್ದರು. ನಾವು ಅದನ್ನು ಮರೆತಿದ್ದೇವೆ. ಆರೋಗ್ಯಯುತ ಆಹಾರ ಪದ್ದತಿಯನ್ನು ನಾವುಗಳು ಉಳಿಸಿ, ಬೆಳೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.

ಕೃಷ್ಣ ಬೈರೇಗೌಡರು ಕೃಷಿ ಸಚಿವರಾಗಿದ್ದಾಗ ಸಾವಯುವ ಕೃಷಿ ಮತ್ತು ಸಿರಿಧಾನ್ಯಕ್ಕೆ ಮಹತ್ವ ತಂದುಕೊಟ್ಟಿದ್ದರು. ಈಗ ಸಚಿವರಾದ ಚಲುವರಾಯಸ್ವಾಮಿ ಅವರು ಹೊಸ ರೂಪುರೇಷೆ ನೀಡುತ್ತಿದ್ದಾರೆ. ಕೃಷಿ ಇಲಾಖೆಗೆ ಹೊಸ ರೂಪವನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.

ಶೋಭಾ ಕರಂದ್ಲಾಜೆ ಅವರಿಗೆ ಕೇಂದ್ರದಲ್ಲಿ ಕೃಷಿ ಸಚಿವರಾಗುವ ಅವಕಾಶ ಸಿಕ್ಕಿದ್ದು ನಮ್ಮ ಭಾಗ್ಯ. ಅವರು ನಮ್ಮ ರಾಜ್ಯದ ಕೃಷಿ ಇಲಾಖೆಗೆ ಹೆಚ್ಚಿ ಒತ್ತು ನೀಡುತ್ತಾರೆ ಎಂದು ನಂಬಿದ್ದೇನೆ. ಕರ್ನಾಟಕ ಹಾಗೂ ಬೆಂಗಳೂರು ಕೇವಲ ಐಟಿ, ಬಿಟಿಗೆ ಮಾತ್ರ ಸೀಮಿತವಾಗಿಲ್ಲ ಕೃಷಿ ಉತ್ಪನ್ನಗಳು, ಹಾಲಿನ ಉತ್ಪಾದನೆ ಸೇರಿದಂತೆ ಎಲ್ಲಾ ರಂಗದಲ್ಲಿಯೂ ನಮ್ಮ ರಾಜ್ಯ ಮೊದಲ ಸಾಲಿನಲ್ಲಿ ನಿಲ್ಲುತ್ತದೆ ಎಂದು ತಿಳಿಸಿದರು.

ಸಿರಿಧಾನ್ಯಗಳಿಗೆ ಇಂದು ಹೆಚ್ಚಿನ ಮೌಲ್ಯ ಬರುತ್ತಿದೆ. ಇದನ್ನು ಬೆಳೆದು ರೈತರು ತಮ್ಮ ಬದುಕನ್ನು ಕಟ್ಟಿಕೊಳ್ಳುವ ರೀತಿಯಲ್ಲಿ ನಾವೆಲ್ಲರೂ ಅವರಿಗೆ ಮಾರ್ಗದರ್ಶನ ನೀಡಬೇಕು. ವ್ಯವಸಾಯವೂ ಒಂದು ವ್ಯಾಪಾರ ಎಂದು ಎಲ್ಲರೂ ಅರಿಯಬೇಕು. ಈ ರೀತಿಯ ಮನೋಭಾವ ಬೆಳೆದಾಗ ಮಾತ್ರ ರೈತರು ಉಳಿಯಲು ಸಾಧ್ಯ. ಕೃಷಿಯನ್ನು ಆಕರ್ಷಣೀಯ ವೃತ್ತಿಯನ್ನಾಗಿಸಬೇಕು. ಸರ್ಕಾರ ಎಂದೆಂದಿಗೂ ರೈತರ ಜೊತೆ ಇದ್ದೇ ಇರುತ್ತದೆ ಎಂದು ಭರವಸೆ ನೀಡಿದರು.

“ಸರ್ಕಾರದ ಕಾರ್ಯಕ್ರಮಗಳ ಬೆಲೆಯನ್ನು ಎಲ್ಲರೂ ಅರಿಯಬೇಕು. ರೈತರ ಪಂಪ್ ಸೆಟ್ ಗೆ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ. ಜೊತೆಗೆ ಸಹಾಯಧನದೊಟ್ಟಿಗೆ ಅನೇಕ ಸೌಲಭ್ಯಗಳನ್ನು ರೈತರಿಗೆ ನೀಡಲಾಗುತ್ತಿದೆ. ಈ ಉಚಿತ ವಿದ್ಯುತ್ತಿನ ಬೆಲೆಯನ್ನು ರೈತರು ಅರಿಯಬೇಕು. ಈ ಹಿಂದೆ ನೀರಿನ ಕರವನ್ನು ರೈತರಿಗೆ ಪೈಸೆಗಳ ಲೆಕ್ಕದಲ್ಲಿ ಹಾಕಲಾಗುತ್ತಿತ್ತು. ಈಗ ಈ ಪದ್ದತಿಯನ್ನೂ ಕೈ ಬಿಡಲಾಗಿದೆ” ಎಂದು ತಿಳಿಸಿದರು.

“ಮಹಾರಾಷ್ಟ್ರ ಮತ್ತು ಪಂಜಾಬ್ ರಾಜ್ಯಗಳು ನೀಡಿನ ಬಳಕೆ ಶುಲ್ಕದ ಮರು ಅನುಷ್ಠಾನದ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆದಿವೆ. ಈ ಬಗ್ಗೆ ಕಾಯ್ದೆಯನ್ನು ತರಲು ಮುಂದಾಗಿವೆ. ಹೀಗೆ ಮಾಡಿದಾಗ ನೀರಿನ ಬೆಲೆ ಎಲ್ಲರಿಗೂ ಅರ್ಥವಾಗುತ್ತದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರದ ರೈತರು ಅತ್ಯಂತ ಕಡಿಮೆ ನೀರಿನಲ್ಲಿ ಉತ್ಕೃಷ್ಟವಾದ ಬೆಳೆ ಬೆಳೆಯುತ್ತಿದ್ದಾರೆ. ಈ ಜಿಲ್ಲೆಗಳಲ್ಲಿ ರೈತರ ಆತ್ಮಹತ್ಯೆಯನ್ನು ನಾನು ಕಂಡಿಲ್ಲ” ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT