ಕೆಆರ್ ಪೇಟೆ: ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ (KPS) ನಲ್ಲಿ ಉಚಿತವಾಗಿ ಶಿಕ್ಷಣ ನೀಡಬೇಕಿದ್ದರೂ ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಪ್ರತಿ ವಿದ್ಯಾರ್ಥಿಗೆ ವಾರ್ಷಿಕ 2,500 ರಿಂದ 5,000 ರೂ.ವರೆಗೆ ಶುಲ್ಕ ವಿಧಿಸಲಾಗುತ್ತಿದೆ ಎಂದು ಪಾಲಕರು ಆರೋಪಿಸಿದ್ದಾರೆ.
ಈ ಬಗ್ಗೆ ಶಾಲೆಯನ್ನು ಪ್ರಶ್ನಿಸಿದಾಗ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ಕಾರಣ ಶುಲ್ಕವನ್ನು ಸಂಗ್ರಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಪೋಷಕರೊಬ್ಬರು ಹೇಳಿದರು.
ಕೆ.ಆರ್.ಪೇಟೆ ಶಾಲೆಯಲ್ಲಿ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಪಾಲಕರಷ್ಟೇ ಅಲ್ಲ, ಶಾಲಾಭಿವೃದ್ಧಿ ಮೇಲ್ವಿಚಾರಣಾ ಸಮಿತಿ ಸದಸ್ಯರೂ ಬ್ಲಾಕ್ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ. ಆದರೆ ಬಿಇಒ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮತ್ತೊಬ್ಬ ಪೋಷಕರು ಅಸಮಾಧಾನ ವ್ಯಕ್ತಪಡಿಸಿದರು.
ಕೆಆರ್ ಪೇಟೆಯಲ್ಲಿ ಆಂಗ್ಲ-ಮಾಧ್ಯಮ ತರಗತಿಗಳಿಗೆ ಹೆಚ್ಚಿನ ಬೇಡಿಕೆಯೊಂದಿಗೆ ಪೂರ್ವ ಪ್ರಾಥಮಿಕದಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಒಂದೇ ಸೂರಿನಡಿ ಶಿಕ್ಷಣ ನೀಡಲು 2018-19ರಲ್ಲಿ ಕೆಪಿಎಸ್ ಶಾಲೆ ಆರಂಭಿಸಲಾಯಿತು.
ಕೆಲವು ವಿದ್ಯಾರ್ಥಿಗಳಿಗೆ ಶಾಲೆಗೆ ಶುಲ್ಕ ಪಾವತಿಸಿದ ರಶೀದಿಗಳನ್ನು ಸಹ ನೀಡಲಾಗಿದೆ. ಖಾಸಗಿ ಕೋಚಿಂಗ್ ಇನ್ಸ್ಟಿಟ್ಯೂಟ್ ಹೆಸರಿನಲ್ಲಿ ಸಂಗ್ರಹಿಸಲಾಗಿದೆ. ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಶಾಲಾ ಮುಖ್ಯೋಪಾಧ್ಯಾಯರ ಹೆಸರಿನಲ್ಲಿ ನೋಂದಾಯಿಸಲಾದ ಜಂಟಿ ಬ್ಯಾಂಕ್ ಖಾತೆಗೆ ನೇರವಾಗಿ ಶುಲ್ಕ ಪಾವತಿಸಲು ಸೂಚಿಸಲಾಗಿದೆ ಎಂದು ಪೋಷಕರು ತಿಳಿಸಿದರು.
ಜುಲೈ 1ರಂದೇ ಕರ್ತವ್ಯಕ್ಕೆ ಹಾಜರಾಗಿದ್ದು, ಈ ವಿಚಾರ ತಿಳಿದಿಲ್ಲ. ಕೆಆರ್ ಪೇಟೆಯ ಶಾಲೆಯಲ್ಲಿ 2,384ಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದಾರೆ ಎಂದು ಎಂದು ಶಾಲೆಯ ಪ್ರಭಾರಿ ಪ್ರಾಂಶುಪಾಲ ಪುಲಿಗೇರಯ್ಯ ತಿಳಿಸಿದ್ದಾರೆ.
ಆರೋಪಗಳ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಮಂಡ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಂದ ವರದಿ ಕೇಳಿದೆ.