ರಾಜ್ಯ

News Headlines 07-07-25 | ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ: ದಿನೇಶ್ ಗುಂಡೂರಾವ್; ರಾಜ್ಯ ಸರ್ಕಾರ, BMRCL ವಿರುದ್ಧ BJP ಸಂಸದ ತೇಜಸ್ವಿ ಸೂರ್ಯ ಕೋರ್ಟ್ ಮೊರೆ; ರೇಣುಕಾಸ್ವಾಮಿ ಕೊಲೆ ಪ್ರಕರಣದಂತಹ ಮತ್ತೊಂದು ಘಟನೆ!

ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ: ದಿನೇಶ್

ರಾಜ್ಯದಲ್ಲಿ, ವಿಶೇಷವಾಗಿ ಹಾಸನ ಜಿಲ್ಲೆಯಲ್ಲಿ ಸರಣಿ ಹೃದಯಾಘಾತ ಪ್ರಕರಗಳ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಸೋಮವಾರ ಹಠಾತ್ ಸಾವುಗಳನ್ನು "ಅಧಿಸೂಚಿತ ರೋಗ" ಎಂದು ಪರಿಗಣಿಸಲು ಮತ್ತು ಅಂತಹ ಪ್ರಕರಣಗಳಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ನಿರ್ಧರಿಸಿದೆ. ರಾಜ್ಯದಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟ ಜನರನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಕರ್ನಾಟಕದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಸರಣಿ ಸಾವುಗಳ ಹಿನ್ನೆಲೆಯಲ್ಲಿ ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಜ್ಞರ ಜತೆ ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಅವರು, ಕೊರೊನಾ ಲಸಿಕೆಯಿಂದ ಹೃದಯಘಾತ ಸಂಭವಿಸಿಲ್ಲ ಎಂದು ಹೇಳಿದರು. ಆದರೆ ವರದಿಯಲ್ಲಿ ಕೊರೊನಾದಿಂದ ಗುಣಮುಖರಾದವರಿಗೆ ಹೃದಯಾಘಾತವಾಗಿದೆ ಅಂತ ಇದೆ ಎಂದು ಹೇಳಿದರು. ಕೊರೊನಾ ರೋಗದಿಂದ ಸ್ವಲ್ಪ ಮಟ್ಟಿಗೆ ಹೃದಯಾಘಾತ ಹೆಚ್ಚಾಗಿದೆ. ಕೊರೊನಾ ಬಂದ ಒಂದು ವರ್ಷದೊಳಗೆ ರಕ್ತನಾಳ ಬ್ಲಾಕೇಜ್ ಆಗುವ ಸಾಧ್ಯತೆ ಇದೆ. ಆದರೆ, ಮೂರು ವರ್ಷದ ನಂತರ ಅದರ ಪರಿಣಾಮ ಅಷ್ಟರ ಮಟ್ಟಿಗೆ ಇಲ್ಲ. ಹೃದಯಾಘಾತಕ್ಕೆ ಲಸಿಕೆ ಕಾರಣವಲ್ಲ ಎಂದರು.

ಕಲುಷಿತ ನೀರು ಕುಡಿದು ಮೂವರು ಸಾವು

ಯಾದಗಿರಿಯ ತಿಪ್ಪನಡಗಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಮೂವರು ಸಾವನ್ನಪ್ಪಿದ್ದಾರೆ. ಅತಿಸಾರ ಮತ್ತು ವಾಂತಿಯ ಲಕ್ಷಣಗಳಿಂದಾಗಿ ಕಳೆದ ಒಂದು ವಾರದಲ್ಲಿ ಮೂವರು ಸಾವನ್ನಪ್ಪಿದ್ದು ಸುಮಾರು ಐದು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತರು ಇತರ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದು ಅವರ ಸಾವುಗಳು ನೀರಿನ ಮಾಲಿನ್ಯಕ್ಕೆ ನೇರವಾಗಿ ಸಂಬಂಧಿಸಿಲ್ಲ ಎಂದು ಯಾದಗಿರಿಯ ಆರೋಗ್ಯ ಅಧಿಕಾರಿ ಹೇಳಿದ್ದಾರೆ. ಅತಿಸಾರ ಮತ್ತು ವಾಂತಿಯ ಲಕ್ಷಣಗಳಿರುವ ಐದು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Darshan ಆರೋಪಿಯಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಂತಹ ಮತ್ತೊಂದು ಘಟನೆ

ನಟ ದರ್ಶನ್ ಆರೋಪಿಯಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಂತಹ ಮತ್ತೊಂದು ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು, ಪ್ರಿಯತಮೆಗೆ ಅಶ್ಲೀಲ ಸಂದೇಶ ರವಾನಿಸಿದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನ ಅಪಹರಣ ಮಾಡಿ ಭೀಕರವಾಗಿ ಹಲ್ಲೆ ಮಾಡಲಾಗಿದೆ. ಹೆಸರುಘಟ್ಟದಲ್ಲಿ ಈ ಘಟನೆ ನಡೆದಿದ್ದು ಕುಶಾಲ್ ಎಂಬಾತನನ್ನು ತಮ್ಮ ಜಾಗಕ್ಕೆ ಕರೆಸಿಕೊಂಡ 10 ಜನರ ಗುಂಪು ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ಆತನನ್ನು ವಿವಸ್ತ್ರಗೊಳಿಸಿ ಆತನ ಖಾಸಗಿ ಭಾಗಗಳಿಗೆ ಹೊಡೆಯಲಾಗಿದೆ. ಇದನ್ನು ಆರೋಪಿಯೊಬ್ಬ ವಿಡಿಯೋ ಮಾಡಿದ್ದಾನೆ. ಕುಶಾಲ್ ಎರಡು ವರ್ಷಗಳಿಂದ ಕಾಲೇಜು ವಿದ್ಯಾರ್ಥಿನಿ ಜೊತೆ ಸ್ನೇಹ ಸಂಬಂಧ ಹೊಂದಿದ್ದು ಇತ್ತೀಚೆಗಷ್ಟೇ ಬೇರ್ಪಟ್ಟಿದ್ದರು. ತನ್ನ ಗೆಳತಿ ಮತ್ತೊಬ್ಬನೊಂದಿಗೆ ಸಂಬಂಧ ಇಟ್ಟುಕೊಂಡಿದ್ದರಿಂದ ಕೋಪಗೊಂಡ ಕುಶಾಲ್ ಆಕೆಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದನು. ಪ್ರಕರಣ ಸಂಬಂಧ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಾಜ್ಯ ಸರ್ಕಾರ, BMRCL ವಿರುದ್ಧ bjp ಸಂಸದ ತೇಜಸ್ವಿ ಸೂರ್ಯ ಕೋರ್ಟ್ ಮೊರೆ

ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರ ಮತ್ತು ಬಿಎಂಆರ್‌ಸಿಎಲ್ ವಿರುದ್ಧ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಾನೂನು ಸಮರ ಆರಂಭಿಸಿದ್ದಾರೆ. ದರ ಏರಿಕೆ ಪರಿಷ್ಕರಣೆ ಸಮಿತಿ ವರದಿ ಬಿಡುಗಡೆ ಆಗ್ರಹಿಸಿ ತೇಜಸ್ವಿ ಸೂರ್ಯ ಕೋರ್ಟ್ ಮೆಟ್ಟಿಲೇರಿದ್ದು ಈ ರಿಟ್ ಅರ್ಜಿ ವಿಚಾರಣೆ ನಡೆಯಲಿದೆ ಎಂದು ತೇಜಸ್ವಿ ಸೂರ್ಯ ಮಾಹಿತಿ ನೀಡಿದ್ದಾರೆ. ಸರ್ಕಾರ ಹಾಗೂ ಬಿಎಂಆರ್‌ಸಿಎಲ್ ಕ್ರಮವನ್ನು ಅಪಾರದರ್ಶಕ ಎಂದು ಕರೆದಿರುವ ತೇಜಸ್ವಿ ಸೂರ್ಯ, ಮೆಟ್ರೋ ಶುಲ್ಕ ಸಮಿತಿ ವರದಿಯನ್ನೇಕೆ ಗೌಪ್ಯವಾಗಿಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ತೆರಿಗೆದಾರರಿಂದ ಹಣಕಾಸು ನೆರವು ಪಡೆದು ಅಧ್ಯಯನಕ್ಕಾಗಿ ಅಂತರಾಷ್ಟ್ರೀಯ ಪ್ರವಾಸ ಕೈಗೊಂಡಿದ್ದಿರಿ. ಆದರೆ, ಅಧ್ಯಯನದ ವರದಿಯನ್ನೇಕ್ಕೆ ಬಹಿರಂಗಪಡಿಸುತ್ತಿಲ್ಲ. ದೆಹಲಿ ಸೇರಿದಂತೆ ದೇಶದ ಇತರ ಎಲ್ಲಾ ಮೆಟ್ರೋ ವ್ಯವಸ್ಥೆಗಳನ್ನು ಹೊಂದಿರುವ ನಗರಗಳು ಎಫ್‌ಎಫ್‌ಸಿ ವರದಿಗಳನ್ನು ಸಾರ್ವಜನಿಕಗೊಳಿಸಿವೆ. ಬೆಂಗಳೂರಿನಲ್ಲೇಕೆ ಬಿಡುಗಡೆ ಮಾಡುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಮೂವರು ನೈಜಿರಿಯನ್ ಪ್ರಜೆಗಳ ಬಂಧನ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮೂವರು ನೈಜೀರಿಯನ್ ಪ್ರಜೆಗಳನ್ನು ಬಂಧಿಸಿ ಅವರಿಂದ 2.8 ಕೆಜಿ ಸಿಂಥೆಟಿಕ್ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿದೇಶಿ ಪ್ರಜೆಗಳು ವೈದ್ಯಕೀಯ ವೀಸಾದಲ್ಲಿ ಭಾರತಕ್ಕೆ ಬಂದಿದ್ದು ಅವಧಿ ಮೀರಿ ನೆಲೆಸಿರುವುದು ಕಂಡುಬಂದಿತ್ತು. ಹೀಗಾಗಿ ಬಂಧಿರು ನೆಲೆಸಿದ್ದ ರಾಜನುಕುಂಟೆಯಲ್ಲಿರುವ ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ ಸುಮಾರು 400 ಕೆಜಿ ಹೈಡ್ರೋ ಗಾಂಜಾ, 2 ಲಕ್ಷ ರೂ.ಗೂ ಹೆಚ್ಚು ನಗದು, ಏಳು ಮೊಬೈಲ್ ಫೋನ್‌ಗಳು, ಪ್ಯಾಕೇಜಿಂಗ್ ಸಾಮಗ್ರಿಗಳು ಮತ್ತು ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ವಶಪಡಿಸಿಕೊಂಡಿರುವ ಮಾದಕ ವಸ್ತುಗಳು 4 ಕೋಟಿ ಮೌಲ್ಯ ಎಂದು ಅಂದಾಜಿಸಲಾಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ. ಹರಿಪ್ರಸಾದ್

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

SCROLL FOR NEXT