ರಾಜ್ಯ

News Headlines 08-07-25 | ಲಾರಿ ಮಾಲೀಕರ ಮುಷ್ಕರಕ್ಕೆ ಮಣಿದ ಸರ್ಕಾರ: 244 ಕೋಟಿ ರೂ ಬಿಡುಗಡೆ; ಜನೌಷಧ ಕೇಂದ್ರಗಳನ್ನು ಮುಚ್ಚದಂತೆ ಹೈಕೋರ್ಟ್ ಆದೇಶ!

ಲಾರಿ ಮಾಲೀಕರ ಮುಷ್ಕರಕ್ಕೆ ಮಣಿದ ಸರ್ಕಾರ: 244 ಕೋಟಿ ಬಿಡುಗಡೆ

ಅನ್ನ ಭಾಗ್ಯ ಯೋಜನೆಯಡಿ ಉಚಿತ ವಿತರಣೆಗಾಗಿ ಕರ್ನಾಟಕದಾದ್ಯಂತ ಅಕ್ಕಿ ಸಾಗಿಸುವ ಟ್ರಕ್ ಮಾಲೀಕರು ತಮ್ಮ ಬಾಕಿ ಹಣವನ್ನು ಪಾವತಿಸುವಂತೆ ಒತ್ತಾಯಿಸಿ ಸೋಮವಾರ ಬೆಳಿಗ್ಗೆಯಿಂದ ಅನಿರ್ದಿಷ್ಟ ಮುಷ್ಕರ ಆರಂಭಿಸಿದ್ದರು. ಈಮಧ್ಯೆ, ರಾಜ್ಯ ಸರ್ಕಾರ ಮಂಗಳವಾರ ಬಾಕಿ ಹಣವನ್ನು ಪಾವತಿಸಲು ಆದೇಶ ಹೊರಡಿಸಿದೆ. ಜುಲೈ 8 ರ ಸರ್ಕಾರಿ ಆದೇಶದಲ್ಲಿ, ಫೆಬ್ರವರಿಯಿಂದ ಮೇ 2025 ರ ಅವಧಿಗೆ ಅನ್ನ ಭಾಗ್ಯ ಯೋಜನೆಯಡಿ ಸಾರಿಗೆ ಶುಲ್ಕ ಸೇರಿದಂತೆ ಆಕಸ್ಮಿಕ ವೆಚ್ಚಗಳಿಗಾಗಿ 244.10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟ್‌ಗಳ ಸಂಘ ಮತ್ತು ಚಿಲ್ಲರೆ ಸಾರಿಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ, "ಸರ್ಕಾರವು ಚರ್ಚೆ ನಡೆಸಿ ಟ್ರಕ್ ಚಾಲಕರಿಗೆ ಬಾಕಿ ಇರುವ 260 ಕೋಟಿ ರೂ.ಗಳನ್ನು ಪಾವತಿಸಲು ಹಣಕಾಸು ಇಲಾಖೆಗೆ ಪತ್ರ ಕಳುಹಿಸಿದೆ. ಅವರು 48 ಗಂಟೆಗಳಲ್ಲಿ ಎಲ್ಲಾ ಬಾಕಿಗಳನ್ನು ಪಾವತಿಸುವುದಾಗಿ ಭರವಸೆ ನೀಡಿದ್ದಾರೆ" ಎಂದು ಹೇಳಿದರು. "ಆದ್ದರಿಂದ, ಮುಷ್ಕರ ವಾಪಾಸ್ ಪಡೆದುಕೊಂಡಿರುವುದಾಗಿ ಷಣ್ಮುಗಪ್ಪ ತಿಳಿಸಿದರು.

ಎತ್ತಿನಹೊಳೆ ಯೋಜನೆ: ಕೇಂದ್ರ ಪರಿಸರ ಸಚಿವರನ್ನು ಭೇಟಿ ಮಾಡಿದ ಡಿಕೆ ಶಿವಕುಮಾರ್

ದಕ್ಷಿಣ ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಗುರಿಯನ್ನು ಹೊಂದಿರುವ ಎತ್ತಿನಹೊಳೆ ಯೋಜನೆಯಡಿಯಲ್ಲಿ ಪರಿಷ್ಕೃತ ಅರಣ್ಯ ಭೂಮಿ ತಿರುವು ಪ್ರಸ್ತಾವನೆಗೆ ಶೀಘ್ರ ತಾತ್ವಿಕ ಅನುಮತಿ ನೀಡುವಂತೆ ಡಿಸಿಎಂ ಶಿವಕುಮಾರ್ ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರಿಗೆ ಮನವಿ ಮಾಡಿದರು. ದೆಹಲಿ ಪ್ರವಾಸದಲ್ಲಿರುವ ಜಲಸಂಪನ್ಮೂಲ ಸಚಿವಾಲಯದ ಉಸ್ತುವಾರಿಯೂ ಆಗಿರುವ ಶಿವಕುಮಾರ್ ಮಾತನಾಡಿ, ತುಮಕೂರು ಮತ್ತು ಹಾಸನ ಜಿಲ್ಲೆಗಳಲ್ಲಿರುವ ಅರಣ್ಯ ಭೂಮಿಯನ್ನು ವಿಶ್ವೇಶ್ವರಯ್ಯ ಜಲ ನಿಗಮ ಲಿಮಿಟೆಡ್ ಪರವಾಗಿ ತಿರುಗಿಸಲು ಹಸಿರು ನಿಶಾನೆ ಕೋರಿ ಜೂನ್ 4ರಂದು ರಾಜ್ಯ ಸರ್ಕಾರವು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು ಎಂದು ಹೇಳಿದರು. ಮೇಕೆದಾಟು, ಕಳಸ-ಬಂಡೂರಿ ಯೋಜನೆಗಳಿಗೂ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯಲ್ಲಿ ನಿರಾಕ್ಷೇಪಣಾ ಪತ್ರ ಅಗತ್ಯವಿದ್ದು ಕೇಂದ್ರ ಸಚಿವರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದರು.

ರಾಜ್ಯದಲ್ಲಿ ಜನೌಷಧ ಕೇಂದ್ರಗಳನ್ನು ಮುಚ್ಚದಂತೆ ಹೈಕೋರ್ಟ್ ಆದೇಶ

ಕರ್ನಾಟಕದಲ್ಲಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿನ ಜನೌಷಧ ಕೇಂದ್ರಗಳನ್ನು ಸ್ಥಗಿತಗೊಳಿಸುವಂತೆ ರಾಜ್ಯ ಸರಕಾರ ಹೊರಡಿಸಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ಸರ್ಕಾರಿ ಆಸ್ಪತ್ರೆ ಆವರಣದಲ್ಲಿನ ಜನೌಷಧ ಕೇಂದ್ರಗಳನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಸರ್ಕಾರದ ಈ ಕ್ರಮ ಪ್ರಶ್ನಿಸಿ ಹಲವರು ಹೈಕೋರ್ಟ್ ಮೆಟ್ಟಿಲೇರಿದ್ದು, ಇಂದು ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಹೈಕೋರ್ಟ್ ಪೀಠ ,ಮುಂದಿನ ವಿಚಾರಣೆವರೆಗೂ ಜನೌಷಧ ಕೇಂದ್ರ ಸ್ಥಗಿತ ಬೇಡ ಎಂದು ಮಧ್ಯಂತರ ಆದೇಶ ಹೊರಡಿಸಿದೆ. ಜನೌಷಧ ಕೇಂದ್ರ ತೆರೆಯಲು ಮೂಲಸೌಕರ್ಯ ಕಲ್ಪಿಸಲು ವೆಚ್ಚವಾಗಿದೆ. ಜನರಿಗೆ ಶೇ.50ರಿಂದ ಶೇ.90ರ ರಿಯಾಯಿತಿ ದರದಲ್ಲಿ ಔಷಧ ನೀಡಲಾಗುತ್ತಿದೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದರು.

ಧರ್ಮಸ್ಥಳ: ಪತ್ರಕರ್ತರೊಬ್ಬರ ವಿರುದ್ಧ ಪ್ರಕರಣ ದಾಖಲು

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಕ್ರಿಮಿನಲ್ ಪ್ರಕರಣವೊಂದರ ಕುರಿತು ಸುಳ್ಳು ಮಾಹಿತಿ ಪ್ರಸಾರ ಮಾಡಿದ ಆರೋಪದ ಮೇಲೆ ಪತ್ರಕರ್ತರೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರ ಪ್ರಕಾರ, ಪತ್ರಕರ್ತ ಸುದರ್ಶನ್ ಬೆಳಲು 'ಹೊಸ ಕನ್ನಡ' ವೆಬ್‌ಸೈಟ್‌ನಲ್ಲಿ ವರದಿಯನ್ನು ಪ್ರಕಟಿಸಿದ್ದು, ಧರ್ಮಸ್ಥಳದಲ್ಲಿ ನಡೆದ ಹಿಂದಿನ ಅಪರಾಧ ಕೃತ್ಯಗಳ ಬಗ್ಗೆ ಮಾಹಿತಿ ಇದೆ ಎಂದು ಹೇಳಿದ್ದ ವ್ಯಕ್ತಿಯನ್ನು ಪ್ರತಿನಿಧಿಸುವ ಕಾನೂನು ತಂಡದ ಭೇಟಿಯನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ತಪ್ಪಿಸಿದ್ದಾರೆ ಎಂದಿದ್ದಾರೆ. ಈ ವರದಿಯನ್ನು ಸತ್ಯ ಅಥವಾ ಪುರಾವೆಗಳನ್ನು ಪರಿಶೀಲಿಸದೆ ಪ್ರಕಟಿಸಲಾಗಿದೆ ಎಂದು ದಕ್ಷಿಣ ಕನ್ನಡ ಪೊಲೀಸರು ತಿಳಿಸಿದ್ದಾರೆ.

ಹಣ ವರ್ಗಾವಣೆ ಪ್ರಕರಣ: ED ವಿಚಾರಣೆಗೆ DKSuresh ಹಾಜರು

ಐಶ್ವರ್ಯಾ ಗೌಡ ವಿರುದ್ಧ ದಾಖಲಾಗಿರುವ ಹಣ ವರ್ಗಾವಣೆ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಸಹೋದರ, ಮಾಜಿ ಸಂಸದ ಡಿ ಕೆ ಸುರೇಶ್ ಮಂಗಳವಾರ ಇಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಎರಡು ವಾರಗಳ ಅವಧಿಯಲ್ಲಿ ಸುರೇಶ್ ಇಡಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿರುವುದು ಇದು ಎರಡನೇ ಬಾರಿ. ಸುರೇಶ್ ಈ ಹಿಂದೆ ಜೂನ್ 23 ರಂದು ಹಾಜರಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT