ಬೆಂಗಳೂರು: ಬೆಂಗಳೂರಿನಲ್ಲಿ ಚಿಟ್ ಫಂಡ್ ಕಂಪನಿ ನಡೆಸುತ್ತಿದ್ದ ಕೇರಳ ಮೂಲದ ದಂಪತಿಯೊಬ್ಬರು 1,300 ಕ್ಕೂ ಹೆಚ್ಚು ಹೂಡಿಕೆದಾರರಿಗೆ 50 ಕೋಟಿ ರೂ.ಗೂ ಹೆಚ್ಚು ವಂಚನೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಹೂಡಿಕೆ ಮಾಡಿದವರಲ್ಲಿ ಹೆಚ್ಚಿನವರು ಕೇರಳೀಯರು ಎಂದು ಪೊಲೀಸರು ಹೇಳಿದ್ದಾರೆ.
ಈ ಚಿಟ್ ಫಂಡ್ ಯೋಜನೆಯಲ್ಲಿ 70 ಲಕ್ಷ ರೂ. ಕಳೆದುಕೊಂಡಿರುವುದಾಗಿ ಹೇಳಿಕೊಂಡ ಹೂಡಿಕೆದಾರರಲ್ಲಿ ಒಬ್ಬರಾದ ಪಿಟಿ ಸವಿಯೊ ಅವರು, ಜುಲೈ 5 ರಂದು ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನ ಆಧಾರದ ಮೇಲೆ, ಬೆಂಗಳೂರಿನ ರಾಮಮೂರ್ತಿ ನಗರದ ಎ & ಎ ಚಿಟ್ ಫಂಡ್ಸ್ ಮತ್ತು ಫೈನಾನ್ಸ್‌ನ ಮಾಲೀಕರಾದ ಟಾಮಿ ಎ ಮತ್ತು ಅವರ ಪತ್ನಿ ಶಿನಿ ಟಾಮಿ ವಿರುದ್ಧ ಚಿಟ್ ಫಂಡ್ಸ್ ಕಾಯ್ದೆ, ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಸುಗ್ರೀವಾಜ್ಞೆ 2019 ರ ಸಂಬಂಧಿತ ಸೆಕ್ಷನ್ ಮತ್ತು ಭಾರತೀಯ ನ್ಯಾಯ ಸಂಹಿತಾದ ಸೆಕ್ಷನ್ 318(ವಂಚನೆ), 316 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರ ದೂರಿನ ನಂತರ, ಕಂಪನಿಯ ಕಚೇರಿ ಲಾಕ್ ಆಗಿದ್ದು, ದಂಪತಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಕಂಡುಕೊಂಡ ನಂತರ ಹಲವಾರು ಹೂಡಿಕೆದಾರರು ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರ ಪ್ರಕಾರ, ಇಲ್ಲಿಯವರೆಗೆ, ದೀರ್ಘಕಾಲದಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಈ ವಂಚಕ ದಂಪತಿಗಳ ವಿರುದ್ಧ 265 ದೂರುಗಳನ್ನು ಸ್ವೀಕರಿಸಲಾಗಿದೆ.
ಪ್ರಾಥಮಿಕ ತನಿಖೆಯನ್ನು ಉಲ್ಲೇಖಿಸಿ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದಂಪತಿಗಳು ತಮ್ಮ ಅಪಾರ್ಟ್ಮೆಂಟ್ ಅನ್ನು ಮಾರಾಟ ಮಾಡಿದ್ದಾರೆ ಮತ್ತು ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿ, ಪರಾರಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಕಳೆದ 25 ವರ್ಷಗಳಿಂದ ವಾಸಿಸುತ್ತಿದ್ದ ಕೇರಳ ಮೂಲದ ಎ.ವಿ. ಟಾಮಿ ದಂಪತಿಯು ರಾಮಮೂರ್ತಿ ನಗರದಲ್ಲಿ 2005ರಿಂದ ಎ ಆ್ಯಂಡ್ ಎ ಚಿಟ್‌ಫಂಡ್ ನಡೆಸುತ್ತಿದ್ದರು. ದಂಪತಿಯು ಅಧಿಕ ಬಡ್ಡಿಯ ಆಮಿಷವೊಡ್ಡಿ ಸಾಕಷ್ಟು ಜನರಿಂದ ಠೇವಣಿ ಹಾಗೂ ಚೀಟಿ ರೂಪದಲ್ಲಿ ಹಣ ಸಂಗ್ರಹಿಸಿದ್ದರು. ವರ್ಷಕ್ಕೆ ಶೇ. 15 ರಿಂದ ಶೇ. 20ರಷ್ಟು ಬಡ್ಡಿಯ ಆಸೆ ತೋರಿಸಿದ್ದರು ಎನ್ನಲಾಗಿದೆ.