ಬೆಂಗಳೂರು: ಚನ್ನಪಟ್ಟಣ ಕಾಂಗ್ರೆಸ್ ಶಾಸಕ ಸಿಪಿ ಯೋಗೇಶ್ವರ್ ಹಾಗೂ ಪುತ್ರಿ ನಿಶಾ ಯೋಗೇಶ್ವರ್ ನಡುವಿನ ಅಂತಃಕಲಹ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಹೌದು... ಸಮಸ್ಯೆಗಳು ನನ್ನ ಬೆನ್ನು ಬಿಡುತ್ತಿಲ್ಲ. ನನ್ನ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ ಎಂದು ಶಾಸಕ ಸಿಪಿ ಯೋಗೇಶ್ವರ್ ಪುತ್ರಿ ನಿಶಾ ಹೇಳಿದ್ದಾರೆ. ಸಿಪಿ ಯೋಗೇಶ್ವರ್ ವಿರುದ್ಧ ಕಾಂಗ್ರೆಸ್ ಗೆ ಮೊದಲ ಪತ್ನಿ ಮಾಳವಿಕಾ ಸೋಲಂಕಿ ಹಾಗೂ ಮಗಳು ನಿಶಾ ಯೋಗೇಶ್ವರ್ ದೂರು ನೀಡಿದ್ದಾರೆ.
KPCC ಕಚೇರಿಗೆ ಆಗಮಿಸಿ AICC ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾರನ್ನು ಭೇಟಿ ಮಾಡಿದ ಪತ್ನಿ ಹಾಗೂ ಪುತ್ರಿ ಯೋಗೇಶ್ವರ್ ವಿರುದ್ಧ ದೂರು ನೀಡಿದ್ದಾರೆ. ನಮ್ಮ ತಂದೆ ಪ್ರಭಾವಶಾಲಿ. ಒಬ್ಬ ಹೆಣ್ಣುಮಗಳಾಗಿ ಕಷ್ಟಗಳನ್ನು ಎದುರಿಸಲು ಆಗುತ್ತಿಲ್ಲ. ಕೋರ್ಟ್ ಹೋರಾಟ ನಡೆಯುತ್ತಿದೆ. ಸಮಸ್ಯೆ ಬಗೆಹರಿಸಿಕೊಡುವಂತೆ ಮನವಿ ಮಾಡಿದ್ದೇವೆ. ಸುರ್ಜೇವಾಲಾ ಸಮಯ ಕೊಟ್ಟು, ಮಾತಾಡಿ ಭರವಸೆ ಕೊಟ್ಟಿದ್ದಾರೆ ಎಂದು ನಿಶಾ ಹೇಳಿದ್ದಾರೆ.