ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಷ್ಟೇ ಮೇಲ್ಸುತುವೆ, ಅಂಡರ್ ಪಾಸ್, ಮತ್ತಷ್ಟು ಮೇಟ್ರೋ ರೈಲು ಬಿಟ್ಟರೂ ಟ್ರಾಫಿಕ್ ಸಮಸ್ಯೆ ತಪ್ಪಲ್ಲ. ಗುರುವಾರ ಇದೇ ರೀತಿ ಟ್ರಾಫಿಕ್ ನಲ್ಲಿ ಸಿಲುಕಿಕೊಂಡು ಹೈರಣಾದ ಸ್ಥಳೀಯ ನಿವಾಸಿಯೊಬ್ಬರು ನೀಡಿರುವ ಸಲಹೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವೈರಲ್ ಆಗಿದೆ.
ಕುಂದಲಹಳ್ಳಿ ಸುತ್ತಮುತ್ತ ಇರುವವರು ವಾಹನಗಳನ್ನು ಮನೆಯಲ್ಲಿಯೇ ಬಿಟ್ಟು ಆಫೀಸ್ ಗೆ ನಡೆದು ಹೋಗಿ, ಹಾಗೆ ಮಾಡಿದ್ದರೆ, ಬೇಗ ತಲುಪುತ್ತೀರಾ ಅಲ್ಲದೇ, ವಾಕ್ ಗೆ ಹವಾಮಾನವೂ ಉತ್ತಮವಾಗಿದೆ. ಫುಟ್‌ಪಾತ್‌ನಲ್ಲಿನ ಅಂತರವನ್ನು ಗಮನಿಸಿ-ಸುರಕ್ಷಿತವಾಗಿರಿ! ಎಂದು ಉದ್ದನೆ ಸಾಲಿನಲ್ಲಿ ನಿಂತಿರುವ ವಾಹನಗಳ ಫೋಟೋದೊಂದಿಗೆ ಫೋಸ್ಟ್ ಮಾಡಿದ್ದಾರೆ.
ಈ ಪೋಟೋ ಆನ್ ಲೈನ್ ನಲ್ಲಿ ಸಖತ್ ವೈರಲ್ ಆಗಿದೆ. ಬೆಂಗಳೂರಿನ ಕೆಲವು ಭಾಗಗಳಲ್ಲಿ ಟ್ರಾಫಿಕ್ ಸಮಸ್ಯೆ ಎಷ್ಟೊಂದು ಕೆಟ್ಟದಾಗಿದೆ ಎಂಬುದನ್ನು ಈ ಪೋಟೋ ತೋರಿಸುತ್ತದೆ.
ಕುಂದಲಹಳ್ಳಿ ಪ್ರಮುಖ ಐಟಿ ಹಬ್ ಆಗಿದ್ದು, ವೈಟ್ ಫೀಲ್ಡ್, ಮಾರತ್ತಹಳ್ಳಿ ಮತ್ತು ಬ್ರೂಕ್ ಫೀಲ್ಡ್ ಸಂಪರ್ಕಿಸುತ್ತದೆ. ಕಿರಿದಾದ ರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿಯಿಂದಾಗಿ ಪ್ರತಿದಿನ ಫೀಕ್ ಅವರ್ ನಲ್ಲಿ ಇಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿರುತ್ತದೆ. ಪಾದಚಾರಿ ಮಾರ್ಗದಲ್ಲಿ ನಡೆಯುತ್ತಿರುವ ಕಾಮಗಾರಿ ಬಗ್ಗೆ ಬೇಸತ್ತು ಹಲವು ಎಕ್ಸ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ನಡೆಯಲು ಪಾದಚಾರಿ ಮಾರ್ಗ ಏಲ್ಲಿದೆ? ಎಂದು ಒಬ್ಬರು ಪ್ರಶ್ನಿಸಿದ್ದಾರೆ. ನಡೆಯಲು ಫುಟ್ ಪಾತ್ ಇಲ್ಲ, ಅದು ಎಲ್ಲಿದೆ. ಅವುಗಳನ್ನು ಬೀದಿ ವ್ಯಾಪಾರಿಗಳು ಅಕ್ರಮಿಸಿಕೊಂಡಿದ್ದಾರೆ ಎಂದು ಮತ್ತೋರ್ವರು ಪ್ರತಿಕ್ರಿಯಿಸಿದ್ದಾರೆ. ರಸ್ತೆ ದಟ್ಟಣೆ ಮಾತ್ರವಲ್ಲದೇ ಬಹು ನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗ ವಿಳಂಬ ವಾಗುತ್ತಿರುವುದು ಬೆಂಗಳೂರು ಜನತೆಯ ಹತಾಶೆಗೆ ಕಾರಣವಾಗಿದೆ.