ಮೈಸೂರು: ದೇವನಹಳ್ಳಿ ರೈತರ ಹೋರಾಟ ವಿಚಾರದಲ್ಲಿ ಜುಲೈ 15ರವರೆಗೆ ಸಮಯ ಕೇಳಿದ ರಾಜ್ಯ ಸರ್ಕಾರ ಈಗ ಡಿಪೆನ್ಸ್ ಕಾರಿಡಾರ್ ಸ್ಥಾಪನೆಗೆ ಕೇಂದ್ರದಿಂದ ಅನುಮತಿ ಕೇಳುವ ಮೂಲಕ ರೈತರಿಗೆ ದ್ರೋಹ ಬಗೆಯುತ್ತಿದೆ ಎಂದು ನಟ ಪ್ರಕಾಶ್ ರಾಜ್ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಕಾಶ್ ರಾಜ್, ಸರಕಾರದ ಪ್ರತಿನಿಧಿಗಳು ನಿನ್ನೆಯಿಂದ ಹೊಸ ನಾಟಕ ಮಾಡುತ್ತಿದ್ದಾರೆ. ಕಾಲಾವಕಾಶ ಕೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗುವ ಮೂಲಕ ದೇವನಹಳ್ಳಿಯಲ್ಲಿ ರೈತರ ಜಮೀನು ಕಿತ್ತುಕೊಂಡು ಅಲ್ಲಿ 1,700 ಎಕರೆಯಲ್ಲಿ ಡಿಪೆನ್ಸ್ ಕಾರಿಡಾರ್ ಸ್ಥಾಪನೆಗೆ ಅನುಮತಿ ಕೇಳಿದ್ದಾರೆ. ಕಾರಿಡಾರ್ ಗೆ ಯಾಕೆ ಇಷ್ಟೊಂದು ಜಾಗ ಬೇಕು ಎಂಬುದನ್ನು ಅವರು ನಕ್ಷೆ ಸಮೇತ ವಿವರಿಸಲಿ ಎಂದು ಸವಾಲು ಹಾಕಿದರು.
ಕಾರಿಡಾರ್ ಗೆ ಕೇವಲ 100 ಎಕರೆ ಬಳಸಿ ಉಳಿಸಿದ ಜಮೀನಿನಲ್ಲಿ ಐಷಾರಾಮಿ ಹೋಟೆಲ್ ಕಟ್ಟುತ್ತಾರೆ. ಅಲ್ಲಿ ನಮ್ಮ ರೈತರು ಕೂಲಿಯಾಳುಗಳಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಿದ್ದರಾಮಯ್ಯ ಅವರು ಪ್ರತಿಪಕ್ಷದ ನಾಯಕರಾಗಿದ್ದಾಗ ದೇವನಹಳ್ಳಿಯ ಭೂಸ್ವಾಧೀನ ಸಂಬಂಧಪಟ್ಟಂತೆ ಬಿಜೆಪಿ ಸರಕಾರವು ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಆಗ ಸಿದ್ದರಾಮಯ್ಯನವರು ರೈತರ ಪರವಾಗಿ ಹೋರಾಟ ಮಾಡಿದ್ದರು. ಆದರೆ, ಅವರು ಮುಖ್ಯಮಂತ್ರಿಯಾದ ಮೇಲೆ ಮಂತ್ರಿಗಳ ಪ್ರಭಾವಕ್ಕೆ ಮಣಿದಿದ್ದಾರೆ. ಇದು ಮುಖ್ಯಮಂತ್ರಿಯಿಂದ ರೈತ ವಿರೋಧಿ ನಿಲುವುವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಚಳವಳಿ ಒಡೆಯುವ ಪ್ರಯತ್ನ: ಸರ್ಕಾರ ಯಾರೋ ಮೂವರು ರೈತರನ್ನು ಕರೆತಂದು ಚಳವಳಿ ಒಡೆಯುವ ಪ್ರಯತ್ನ ಮಾಡುತ್ತಿದೆ. ಹಳ್ಳಿಗಳಿಗೆ ಪುಡಾರಿಗಳನ್ನು ಕಳುಹಿಸಿ ಹೆದರಿಸುತ್ತಿದೆ. ಹಸಿರು ವಲಯ ಮಾಡುತ್ತೇವೆ ಎಂಬ ನಾಟಕ ಆಡಿ ಜನರನ್ನು ಹೆದರಿಸುತ್ತಿದೆ. ಆ ಭೂಮಿ ಈಗಾಗಲೇ ಹಸಿರು ವಲಯವಾಗಿದೆ. 1,500 ಎಕರೆ ಭೂಮಿಯಲ್ಲಿ ಭೂರಹಿತರಿದ್ದಾರೆ, ಅವರಿಗೆ ಏನು ಪರಿಹಾರ ನೀಡುತ್ತೀರಿ?” ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಣ್ಣ, ಎಂ.ಬಿ.ಪಾಟೀಲ್ ಅವರೇ, ನಿಮ್ಮ ನಾಟಕ ಗೊತ್ತಾಗುತ್ತಿದೆ. 15 ರಂದು ರೈತ ಪರ ನಿರ್ಧಾರ ಪ್ರಕಟಿಸದೇ ಇದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು. ಜುಲೈ 15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುವುದಾಗಿ ತಿಳಿಸಿದ್ದು, ಮುಖ್ಯಮಂತ್ರಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಮುಂದಿನ ಹೋರಾಟದ ಸ್ವರೂಪ ನಿರ್ಣಯಿಸಲಾಗುವುದು ಎಂದಿದ್ದಾರೆ.
'ನಾನು ಕನ್ನಡಿಗ, ಕರ್ನಾಟಕದ ಮಗ’:ಎಂ.ಬಿ.ಪಾಟೀಲ್‌ಗೆ ಸವಾಲು: ಇದೇ ವೇಳೆ ಆಂಧ್ರ, ಗುಜರಾತ್‌ನಲ್ಲಿ ಹೋರಾಟ ಮಾಡಿ ಎಂದು ಹೇಳಲು ಎಂ.ಬಿ.ಪಾಟೀಲ್ ಯಾರು? ಎಂದು ಸಚಿವ ಎಂ.ಬಿ.ಪಾಟೀಲ್ ಅವರನ್ನು ಪ್ರಶ್ನಿಸಿದ ಪ್ರಕಾಶ್ ರಾಜ್, ನಾನು ಕನ್ನಡಿಗ, ಕರ್ನಾಟಕದ ಮಗ, ರಾಜ್ಯದ ರೈತರ ಪರ ಹೋರಾಟ ಮಾಡುತ್ತೇನೆ ಎಂದು ಹೇಳುವ ಮೂಲಕ ಹೋರಾಟದ ಬದ್ಧತೆಯನ್ನು ಪುನರುಚ್ಚರಿಸಿದರು.