ಬೆಂಗಳೂರು: ಆರ್‌ಸಿಬಿ ಗೆಲುವಿನ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದ ಘಟನೆಯ ತನಿಖೆಗೆ ರಚಿಸಿದ್ದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಆಯೋಗ ಎರಡು ಸಂಪುಟಗಳನ್ನು ಒಳಗೊಂಡ ವರದಿಯನ್ನು ಶುಕ್ರವಾರ ಮುಖ್ಯಮಂತ್ರಿಗೆ ಸಲ್ಲಿಸಿತು.
ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಯೋಜನೆ, ಸಮನ್ವಯ ಮತ್ತು ಜನಸಂದಣಿ ನಿರ್ವಹಣೆಯಲ್ಲಿನ ಲೋಪಗಳ ತನಿಖೆಗಾಗಿ ರಚಿಸಲಾದ ಆಯೋಗವು ಒಂದು ತಿಂಗಳ ಕಾಲ ನಡೆದ ತನಿಖೆಯ ನಂತರ ವರದಿಯನ್ನು ಸಲ್ಲಿಸಿತು.
ವರದಿ ಸ್ವೀಕರಿಸಿದ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಯೋಗ ನೀಡಿದ ವರದಿಯನ್ನು ಜುಲೈ 17ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು ಚರ್ಚಿಸಿದ ನಂತರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ವರದಿಯನ್ನು ವಿವರವಾಗಿ ಓದಿಲ್ಲ. ನ್ಯಾಯಮೂರ್ತಿಗಳು ಮಾಡಿರುವ ಶಿಫಾರಸುಗಳ ಬಗ್ಗೆ ಚರ್ಚಿಸಿದ ನಂತರ ಸಂಪುಟವೇ ಅಂತಿಮ ನಿರ್ಧಾರ ಮಾಡಲಿದೆ ಎಂದರು. ಕ್ರೀಡಾಂಗಣದ ಕಾಲ್ತುಳಿತದ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆ ಇನ್ನೂ ಮುಂದುವರೆದಿದೆ.
ಕಾಲ್ತುಳಿತದ ನಂತರ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣವನ್ನು ಈಗ ಕೇಂದ್ರ ತನಿಖಾ ಇಲಾಖೆಯ (ಸಿಐಡಿ) ಎಸ್‌ಐಟಿ ತನಿಖೆ ನಡೆಸುತ್ತಿದೆ. ನ್ಯಾಯಾಂಗ ಆಯೋಗದ ಜೊತೆಗೆ, ಮುಖ್ಯಮಂತ್ರಿಗಳು ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿದ್ದರು, ಆ ವರದಿಯನ್ನು ಇನ್ನೂ ಸಲ್ಲಿಸಲಾಗಿಲ್ಲ.
ಘಟನೆಯ ನಂತರ, ಪೊಲೀಸರು ಆರ್‌ಸಿಬಿಯ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಮತ್ತು ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ನ ಮೂವರು ಕಾರ್ಯನಿರ್ವಾಹಕರನ್ನು ಬಂಧಿಸಿದರು, ಅವರೆಲ್ಲರೂ ಸದ್ಯ ಮಧ್ಯಂತರ ಜಾಮೀನಿನ ಮೇಲೆ ಹೊರಗಿದ್ದಾರೆ.
ಕರ್ತವ್ಯ ಲೋಪಕ್ಕಾಗಿ ಆಗಿನ ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ ಸೇರಿದಂತೆ ಐದು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲು ಸಿಎಂ ಆದೇಶಿಸಿದ್ದರು. ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ 11 ಜನರು ಮೃತಪಟ್ಟ ದಾರುಣ ಘಟನೆ ನಡೆದ ಬೆನ್ನಲ್ಲೇ, ಮಾಜಿಸ್ಟ್ರೀಯಲ್ ವಿಚಾರಣೆಗೆ ಆದೇಶಿಸಲಾಗಿತ್ತು.