ಬೆಂಗಳೂರು: ಬೆಂಗಳೂರಿನಲ್ಲಿ ಮಹಿಳೆಯರು ಮತ್ತು ಅಲ್ಪಸಂಖ್ಯಾತರಿಗೆ ಉಚಿತ ಆಟೋ ಚಾಲನಾ ತರಬೇತಿ ಕಾರ್ಯಕ್ರಮಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಶನಿವಾರ ಚಾಲನೆ ನೀಡಿದರು.
ಬಿ.ಪ್ಯಾಕ್ ಹಾಗೂ ಸಿಜಿಐ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಉಪಕ್ರಮವು ಕೌಶಲ್ಯ ಅಭಿವೃದ್ಧಿ, ಆರ್ಥಿಕ ಸಾಕ್ಷರತೆ ಮತ್ತು ಗೌರವಾನ್ವಿತ ಜೀವನೋಪಾಯ ಬೆಂಬಲದ ಮೂಲಕ 100 ಕ್ಕೂ ಹೆಚ್ಚು ವ್ಯಕ್ತಿಗಳನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವೆ ಶೋಭಾ ಕರಂದ್ಲಾಜೆಯವರು, ಭಾರತದ ಸುಮಾರು ಶೇ. 90 ರಷ್ಟು ಉದ್ಯೋಗಿಗಳನ್ನು ಒಳಗೊಂಡಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ವಿಸ್ತರಿಸುವ ಕೇಂದ್ರದ ಯೋಜನೆಗಳನ್ನು ಘೋಷಿಸಿದರು.
ಕೃಷಿ, ನಿರ್ಮಾಣ ಮತ್ತು ತ್ವರಿತ ವಾಣಿಜ್ಯದಂತಹ ಕ್ಷೇತ್ರಗಳಲ್ಲಿ ಅನೌಪಚಾರಿಕ ಕಾರ್ಮಿಕರಿಗೆ ಆರ್ಥಿಕ ಮತ್ತು ಸಾಮಾಜಿಕ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಸಾಮಾಜಿಕ ಭದ್ರತಾ ಸಂಹಿತೆ ಸೇರಿದಂತೆ 29 ಕಾರ್ಮಿಕ ಕಾಯ್ತೆಗಳಿದ್ದು, ಅವೆಲ್ಲವನ್ನೂ ಕೇಂದ್ರ ಸರ್ಕಾರ ಒಟ್ಟುಗೂಡಿಸಿ ನಾಲ್ಕು ಸಂಹಿತೆ ಮಾಡಲಿದೆ ಎಂದು ಹೇಳಿದರು.
ದೇಶದಲ್ಲಿ 90 ಕೋಟಿ ಜನರು ದುಡಿಯುವವರಾಗಿದ್ದಾರೆ. ಅದರಲ್ಲಿ ಶೇ 10ರಷ್ಟು ಮಾತ್ರ ಸರ್ಕಾರಿ ಅಥವಾ ಖಾಸಗಿ ಸಂಘಟಿತ ನೌಕರರು. ಉಳಿದವರು ಅಸಂಘಟಿತ ಕಾರ್ಮಿಕರಾಗಿದ್ದಾರೆ. ಈಗ ಮಹಾನಗರಗಳಲ್ಲಿ ಗಿಗ್ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿದಾಗ ಮನೆಗೆ ತಲುಪಿಸುವ ಕಾರ್ಮಿಕರು ಅವರು. ಇನ್ನು 10 ವರ್ಷದಲ್ಲಿ ಗಿಗ್ ಕಾರ್ಮಿಕರ ಸಂಖ್ಯೆ 25 ಕೋಟಿ ದಾಟಲಿದೆ. ಗಿಗ್ ಕಾರ್ಮಿಕರು, ಆಟೊ ಚಾಲಕರೂ ಸೇರಿದಂತೆ ಎಲ್ಲ ಅಸಂಘಟಿತ ಕಾರ್ಮಿಕರಿಗೂ ಸಂಘಟಿತ ನೌಕರರಿಗೆ ಸಿಗುವ ಸಾಮಾಜಿಕ ಭದ್ರತೆ ಸಿಗಬೇಕು ಎಂಬುದು ಕೇಂದ್ರ ಸರ್ಕಾರದ ಚಿಂತನೆ ಎಂದು ತಿಳಿಸಿದರು.
ಮಹಿಳೆಯರು ಆಟೊ ಚಾಲಕರಾದರೆ ಮಹಿಳಾ ಪ್ರಯಾಣಿಕರು ಧೈರ್ಯವಾಗಿ ರಾತ್ರಿಯೂ ಸಂಚರಿಸಲು ಸಾಧ್ಯ. ಈ ಉಪಕ್ರಮವು ಸರ್ಕಾರದ ನಾರಿ ಶಕ್ತಿ ಮತ್ತು ಸಮಗ್ರ ಬೆಳವಣಿಗೆಯ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಕೌಶಲ್ಯ ಅಭಿವೃದ್ಧಿಯ ಮೂಲಕ ಮಹಿಳೆಯರು ಮತ್ತು ಅಲ್ಪಸಂಖ್ಯಾತ ವ್ಯಕ್ತಿಗಳನ್ನು ಸಬಲೀಕರಣಗೊಳಿಸುವುದು ಅವರ ಆರ್ಥಿಕ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳಲು ನಿರ್ಣಾಯಕವಾಗಿದೆ ಎಂದು ಹೇಳಿದರು.