ಬೆಂಗಳೂರು: ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಈ ಹಿಂದೆ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿದ್ದರು. ಅವರ ಈ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿತ್ತು. ಈಗ ಅವರ ಮತ್ತೊಂದು ಹೇಳಿಕೆ ವೈರಲ್ ಆಗಿದೆ.
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ನಾರಾಯಣ ಮೂರ್ತಿ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ಅವರೊಂದಿಗೆ ಚರ್ಚಿಸಿದ ವಿಷಯಗಳನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
ನಾರಾಯಣ ಮೂರ್ತಿ ಅವರೊಂದಿಗಿನ ಸಂವಾದವನ್ನು "ಸ್ಪೂರ್ತಿದಾಯಕ ಸಂಭಾಷಣೆ" ಮತ್ತು ಕೃತಕ ಬುದ್ಧಿಮತ್ತೆ ಹಾಗೂ ಉತ್ಪಾದನೆಯಿಂದ ಹಿಡಿದು ಭಾರತದ ನಗರಗಳ ಸ್ಥಿತಿ, ಯುವ ಕೌಶಲ್ಯವರ್ಧನೆ, ನೀತಿಶಾಸ್ತ್ರ ಮತ್ತು ಭಾರತದ ಭವಿಷ್ಯ ಮತ್ತು ನಾಯಕತ್ವದ ಕುರಿತು “ಎರಡು ಗಂಟೆಗಳ ಮಾಸ್ಟರ್‌ಕ್ಲಾಸ್” ಎಂದು ಬಣ್ಣಿಸಿದ್ದಾರೆ.
"ಇಂದು ಮುಂಬೈನಿಂದ ಬೆಂಗಳೂರಿಗೆ ಹಿಂತಿರುಗುವಾಗ ದಂತಕಥೆಯಾಗಿರುವ NRN ಜೊತೆ ಸ್ಪೂರ್ತಿದಾಯಕ ಸಂಭಾಷಣೆ ನಡೆಸಿದೆ" ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ, ವಿಮಾನದಲ್ಲಿ ನಾರಾಯಣ ಮೂರ್ತಿ ಅವರೊಂದಿಗೆ ಸಂಭಾಷಣೆ ನಡೆಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
"NRN ಭಾರತದ ತಂತ್ರಜ್ಞಾನ ಭೂದೃಶ್ಯವನ್ನು ಪರಿವರ್ತಿಸಿದ ಮತ್ತು ಇನ್ಫೋಸಿಸ್ ಮೂಲಕ ಲಕ್ಷಾಂತರ ಮಧ್ಯಮ ವರ್ಗದ ಕುಟುಂಬಗಳಿಗೆ ಕೆಲಸವನ್ನು ಸೃಷ್ಟಿಸಿದರು" ಎಂದು ಬಿಜೆಪಿ ಸಂಸದ ಹೇಳಿದ್ದಾರೆ.
ಯುವ ಭಾರತೀಯರು ವಾರಕ್ಕೆ 70 ಗಂಟೆಗಳ ಕೆಲಸದ ಅವಧಿಗೆ ಬದ್ಧರಾಗಬೇಕೆಂಬ ನಾರಾಯಣ ಮೂರ್ತಿಯವರ ಬಹು ಚರ್ಚಿತ ಹೇಳಿಕೆಯನ್ನು ಉಲ್ಲೇಖಿಸುತ್ತಾ, ಆ ಮಾನದಂಡವನ್ನು ತಲುಪಲು ಸ್ವತಃ ನಾನು ಪ್ರಯತ್ನಿಸುತ್ತಿದ್ದೇನೆ ಎಂದು ತಮಾಷೆಯಾಗಿ ಹೇಳಿದೆ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
"ನಮ್ಮ ಸಂಭಾಷಣೆಯ ಕೊನೆಯಲ್ಲಿ ನಾನು ಅವರ ವಾರಕ್ಕೆ 70 ಗಂಟೆಗಳ ಗುರಿಯನ್ನು ತಲುಪಲು ಶ್ರಮಿಸುತ್ತೇನೆ ಎಂದು ಹಾಸ್ಯಮಯವಾಗಿ ಹೇಳಿದೆ" ಎಂದು ತೇಜಸ್ವಿ ಸೂರ್ಯ ಬರೆದಿದ್ದಾರೆ. "ಅದಕ್ಕೆ ಅವರು ನಕ್ಕರು ಮತ್ತು ನನಗೆ ತಿಳಿದಿರುವಂತೆ ವಾರಕ್ಕೆ 100 ಗಂಟೆ ಕೆಲಸ ಮಾಡುವ ಏಕೈಕ ವ್ಯಕ್ತಿ ಪ್ರಧಾನಿ ಮೋದಿ ಮಾತ್ರ!'" ಎಂದು ನಾರಾಯಣ ಮೂರ್ತಿ ಹೇಳಿದರು ಎಂದು ಬಿಜೆಪಿ ಸಂಸದ ಬರೆದುಕೊಂಡಿದ್ದಾರೆ.