ಬೆಂಗಳೂರು: ಆಡಳಿತಾತ್ಮಕ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಸಿದ್ಧ ಗಾಳಿ ಆಂಜನೇಯ ದೇವಸ್ಥಾನವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ವಹಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ಬುಧವಾರ ನಿರಾಕರಿಸಿದೆ.
ದೇವಾಲಯದ ಟ್ರಸ್ಟಿಗಳು ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ವಿಚಾರಣೆ ನಡೆಸಿದರು.
ದೇವಾಲಯದ ಟ್ರಸ್ಟ್ ಪರ ವಕೀಲ ಪಿ.ಪ್ರಸನ್ನ ಕುಮಾರ್ ಅವರು, ಸರ್ಕಾರವು ದೇವಾಲಯದ ಕಾರ್ಯವೈಖರಿಯ ಬಗ್ಗೆ ಸಮಗ್ರ ತನಿಖೆ ನಡೆಸದೆ ತರಾತುರಿಯಲ್ಲಿ ಕ್ರಮ ಕೈಗೊಂಡಿದೆ. ಟ್ರಸ್ಟ್ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿದೆ. ದೇವಾಲಯವನ್ನು ಸ್ವಾಧೀನಪಡಿಸಿಕೊಳ್ಳುವ ನಿರ್ಧಾರವು ಅಪೂರ್ಣ ಮಾಹಿತಿಯನ್ನು ಆಧರಿಸಿದೆ ಎಂದು ವಾದಿಸಿದರು.
ಸರ್ಕಾರದ ಪರ ವಕೀಲರು ಈ ಆರೋಪಗಳನ್ನು ನಿರಾಕರಿಸಿದ್ದು, ಟ್ರಸ್ಟ್ ತನ್ನ ಹಣಕಾಸು ಮತ್ತು ಒಟ್ಟಾರೆ ಆಡಳಿತದ ಬಗ್ಗೆ ವಿವರಗಳನ್ನು ಸಲ್ಲಿಸುವಲ್ಲಿ ವಿಫಲವಾಗಿದೆ. ಭ್ರಷ್ಟಾಚಾರ ಮತ್ತು ದುರುಪಯೋಗದ ಆರೋಪಗಳು ಟ್ರಸ್ಟ್‌ನ ಪದಾಧಿಕಾರಿಗಳ ವಿರುದ್ಧವೂ ಇದೆ. ಟ್ರಸ್ಟ್‌ನಿಂದ ಹಲವು ಬಾರಿ ಮಾಹಿತಿ ಕೇಳಲಾಗಿದೆ. ಆದರೆ ಯಾವುದೇ ಮಾಹಿತಿಯನ್ನು ಒದಗಿಸಲಾಗಿಲ್ಲ. ಕಳೆದ 19 ವರ್ಷಗಳಲ್ಲಿ ಬಂದ ಆದಾಯವನ್ನು ಖರ್ಚು ಎಂದು ತೋರಿಸಿದ್ದಾರೆ ಎಂದು ವಾದಿಸಿದರು.
ಭಕ್ತರು ದೇವಸ್ಥಾನವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ವಹಿಸುವ ನಿರ್ಧಾರವನ್ನು ಸ್ವಾಗತಿಸಿದ್ದಾರೆ ಎಂದು ಸರ್ಕಾರಿ ವಕೀಲರು ಹೇಳಿದರು.
ವಾದ, ಪ್ರತಿವಾದ ಆಲಿಸಿದ ಹೈಕೋರ್ಟ್, ಟ್ರಸ್ಟ್ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.