ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಬಿಸ್ಕಟ್ ತರಲು ಹೋಗಿದ್ದ ಪುಟ್ಟ ಬಾಲಕಿ ಮೇಲೆ ಬೀದಿನಾಯಿಗಳ ಹಿಂಡು ದಾಳಿ ಮಾಡಿರುವ ಭೀಕರ ವಿಡಿಯೋ ವ್ಯಾಪಕ ವೈರಲ್ ಆಗಿದೆ.
ಹುಬ್ಬಳ್ಳಿಯ (Hubballi) ಶಿಮ್ಲಾ ನಗರದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಬಾಲಕಿಯೊಬ್ಬಳ ಮೇಲೆ ಬೀದಿ ನಾಯಿಗಳು ಏಕಾಏಕಿ ಭೀಕರ ದಾಳಿ ನಡೆಸಿವೆ. ಈ ಘಟನೆಯ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಬಿಸ್ಕಟ್ ತರಲು ಹೋಗಿದ್ದ ಬಾಲಕಿ
ಶೀಮ್ಲಾ ನಗರದ ರಸ್ತೆಯೊಂದರಲ್ಲಿ ಬಾಲಕಿಯೊಬ್ಬಳು ಬಿಸ್ಕಟ್ ತರಲು ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ವೇಳೆ, ಎರಡು ಬೀದಿ ನಾಯಿಗಳು ಏಕಕಾಲಕ್ಕೆ ಆಕೆಯ ಮೇಲೆ ದಾಳಿ ಮಾಡಿವೆ. ನಾಯಿಗಳು ಬಾಲಕಿಯ ಕಾಲು ಮತ್ತು ದೇಹದ ಮೇಲೆ ಮನಬಂದಂತೆ ಕಚ್ಚಿದ್ದು, ಆಕೆಯನ್ನು ಹಿಡಿದು ಎಳೆದೊಯ್ದಿವೆ.
ಬಾಲಕಿಯು ಗಟ್ಟಿಯಾಗಿ ಕಿರುಚಿಕೊಂಡರೂ, ನಾಯಿಗಳು ಆಕೆಯನ್ನು ಬಿಟ್ಟಿರಲಿಲ್ಲ. ಆಕೆಯ ಕಿರುಚಾಟವು ತೀವ್ರವಾಗಿ ಮುಂದುವರಿದ ನಂತರವೇ ಅದೇ ಮಾರ್ಗದಲ್ಲಿ ದಾರಿಹೋಕರು ಹೋಗುತ್ತಿದ್ದನ್ನು ನೋಡಿದ ನಾಯಿಗಳು ಆಕೆಯನ್ನು ಬಿಟ್ಟು ಓಡಿಹೋಗಿವೆ.
ಸ್ಥಳೀಯರ ಆಕ್ರೋಶ
ಇನ್ನು ನಾಯಿಗಳ ದಾಳಿಯು ಅತ್ಯಂತ ಆಕ್ರಮಣಕಾರಿಯಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಭೀಕರ ದಾಳಿಯ ಸಂಪೂರ್ಣ ಘಟನೆಯು ರಸ್ತೆಯ ಬಳಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಾಯಿ ದಾಳಿ ವಿರುದ್ಧ ಸ್ಥಳೀಯರು ಹುಬ್ಬಳ್ಳಿ ಕಾರ್ಪೋರೇಷನ್ ಆಡಳಿತದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಯಿಂದ ಶೀಮ್ಲಾ ನಗರದ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. ಬೀದಿ ನಾಯಿಗಳ ಹಾವಳಿಯಿಂದ ಮಕ್ಕಳು ಮತ್ತು ವೃದ್ಧರು ರಸ್ತೆಯಲ್ಲಿ ಸಂಚರಿಸಲು ಭಯಪಡುವಂತಾಗಿದೆ. ಸ್ಥಳೀಯರು ಸ್ಥಳೀಯಾಡಳಿತ ಮತ್ತು ಪಾಲಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಬೀದಿ ನಾಯಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಬಾಲಕಿ ಸ್ಥಿತಿ ಗಂಭೀರ
ಇನ್ನು ನಾಯಿಗಳ ದಾಳಿಯಿಂದ ಬಾಲಕಿಯ ಕಾಲು ಮತ್ತು ದೇಹದ ಇತರ ಭಾಗಗಳಲ್ಲಿ ಗಂಭೀರ ಗಾಯಗಳಾಗಿವೆ. ಆಕೆಯನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ. ಆಕೆಯ ಆರೋಗ್ಯ ಸ್ಥಿತಿಯ ಬಗ್ಗೆ ಇನ್ನಷ್ಟೇ ವೈದ್ಯಕೀಯ ವರದಿಗಳು ಬರಬೇಕಾಗಿದೆ.