ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಮೆಟಾ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ವಯಂ ಕನ್ನಡ ಅನುವಾದ ವ್ಯವಸ್ಥೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದು "ಸತ್ಯವನ್ನು ತಿರುಚುತ್ತದೆ ಮತ್ತು ಬಳಕೆದಾರರನ್ನು ದಾರಿ ತಪ್ಪಿಸುತ್ತಿದೆ" ಎಂದು ಹೇಳಿದ್ದಾರೆ.
ಈ ಸಂಬಂಧ ತಮ್ಮ ಮಾಧ್ಯಮ ಸಲಹೆಗಾರರು ಮೆಟಾ ಕಂಪನಿಗೆ ಪತ್ರ ಬರೆದಿದ್ದು, ತಕ್ಷಣವೇ ಇದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು, ವಿಶೇಷವಾಗಿ ಅಧಿಕೃತ ಸಂವಹನದೊಂದಿಗೆ ವ್ಯವಹರಿಸುವಾಗ ಮತ್ತು ಈ ವೇದಿಕೆಗಳಲ್ಲಿ ಪ್ರದರ್ಶಿಸಲಾದ ಅನುವಾದಗಳು ಹೆಚ್ಚಾಗಿ ತಪ್ಪಾಗಿರುತ್ತವೆ ಎಂದು ನಾಗರಿಕರು ತಿಳಿದಿರಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
"ಮೆಟಾ ಪ್ಲಾಟ್‌ಫಾರ್ಮ್‌ಗಳಲ್ಲಿ ಕನ್ನಡ ವಿಷಯದ ದೋಷಪೂರಿತ ಸ್ವಯಂ-ಅನುವಾದವು ಸತ್ಯವನ್ನು ತಿರುಚುತ್ತಿದೆ ಮತ್ತು ಬಳಕೆದಾರರನ್ನು ದಾರಿ ತಪ್ಪಿಸುತ್ತಿದೆ. ಅಧಿಕೃತ ಸಂವಹನಕ್ಕೆ ಬಂದಾಗ ಇದು ವಿಶೇಷವಾಗಿ ಅಪಾಯಕಾರಿ. ನನ್ನ ಮಾಧ್ಯಮ ಸಲಹೆಗಾರರು ಔಪಚಾರಿಕವಾಗಿ ಈ ಸಂಬಂಧ ಮೆಟಾಗೆ ಪತ್ರ ಬರೆದು ತಕ್ಷಣವೇ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ" ಎಂದು ಸಿಎಂ ಸಿದ್ದರಾಮಯ್ಯ ಅವರು 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಸಾಮಾಜಿಕ ಮಾಧ್ಯಮ ವೇದಿಕೆಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ತೋರಿಸಿರುವ ಅನುವಾದಗಳು ಹೆಚ್ಚಾಗಿ ತಪ್ಪಾಗಿರುತ್ತವೆ ಎಂದು ನಾಗರಿಕರು ತಿಳಿದಿರಬೇಕೆಂದು ನಾನು ಎಚ್ಚರಿಸುತ್ತೇನೆ. ತಂತ್ರಜ್ಞಾನ ದೈತ್ಯರ ಇಂತಹ ನಿರ್ಲಕ್ಷ್ಯವು ಸಾರ್ವಜನಿಕ ತಿಳುವಳಿಕೆ ಮತ್ತು ನಂಬಿಕೆಗೆ ಹಾನಿ ಮಾಡುತ್ತದೆ" ಎಂದು ಅವರು ಹೇಳಿದರು.
ಮೆಟಾದಲ್ಲಿ ಕನ್ನಡದಲ್ಲಿ ಪೋಸ್ಟ್ ಮಾಡಲಾಗಿರುವ ವಿಷಯವನ್ನು ಇತರೆ ಭಾಷೆಗಳಿಗೆ ತರ್ಜುಮೆ ಮಾಡಿದಾಗ ಮೆಟಾದ ಸ್ವಯಂ ಅನುವಾದ ವ್ಯವಸ್ಥೆಯೂ ತಪ್ಪು ಭಾಷಾಂತರವನ್ನು ಒದಗಿಸುತ್ತಿದೆ. ಇದರಿಂದಾಗಿ ಸಂದೇಶದ ಮೂಲ ಅರ್ಥವೇ ಬದಲಾಗಿ, ಜನರಲ್ಲಿ ಗೊಂದಲ ಮತ್ತು ತಪ್ಪು ತಿಳುವಳಿಕೆಗಳು ಉಂಟಾಗುತ್ತಿವೆ. ಹೀಗಾಗಿ ಕನ್ನಡ ವಿಷಯಕ್ಕಾಗಿ ಸ್ವಯಂ-ಅನುವಾದ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಮೆಟಾಗೆ ಪತ್ರ ಬರೆಯಲಾಗಿದೆ.
ಜುಲೈ 16 ರಂದು ಮೆಟಾಗೆ ಕಳುಹಿಸಲಾದ ಇಮೇಲ್‌ನಲ್ಲಿ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಕನ್ನಡ ವಿಷಯದ ಸ್ವಯಂಚಾಲಿತ ಅನುವಾದ ಬಗ್ಗೆ ಮುಖ್ಯಮಂತ್ರಿಯವರ ಪರವಾಗಿ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.
ಮೆಟಾ ವೇದಿಕೆಗಳಲ್ಲಿ ಹಂಚಿಕೊಂಡ ಕನ್ನಡ ವಿಷಯವನ್ನು ಸ್ವಯಂ ಅನುವಾದದ ಮೂಲಕ ದೋಷಪೂರಿತ ಭಾಷಾಂತರವನ್ನು ಒದಗಿಸುತ್ತಿದೆ. ಇದು ಮೂಲ ಅರ್ಥವನ್ನು ವಿರೂಪಗೊಳಿಸುತ್ತಿದೆ. ಆ ಮೂಲಕ ಬಳಕೆದಾರರನ್ನು ದಾರಿ ತಪ್ಪಿಸುತ್ತಿದೆ. ಇದು ಸಾರ್ವಜನಿಕರ ತಿಳುವಳಿಕೆ ಮತ್ತು ನಂಬಿಕೆಯನ್ನು ಹಾಳು ಮಾಡುತ್ತದೆ. ಹೀಗಾಗಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಕೆ.ವಿ. ಪ್ರಭಾಕರ್ ಒತ್ತಾಯಿಸಿದ್ದಾರೆ.