ರಾಜ್ಯ

News headlines 19-07-2025 | ಆ.11 ರಿಂದ ಮುಂಗಾರು ಅಧಿವೇಶನ; ಹವಾಮಾನ: ಕೊಡಗು, ಉತ್ತರ ಕನ್ನಡ ಜಿಲ್ಲೆಗಳಿಗೆ IMD ರೆಡ್ ಅಲರ್ಟ್; ಹಳದಿ ಮಾರ್ಗ ಕಾರ್ಯಾರಂಭ ತ್ವರಿತಗೊಳಿಸಲು ಕೇಂದ್ರಕ್ಕೆ ಸಂಸದ Tejasvi Surya ಮನವಿ

ಮೈಸೂರು: ವಿಪಕ್ಷಗಳಿಗೆ ಸಿಎಂ ಸವಾಲ್

ಜೆಡಿಎಸ್- ಬಿಜೆಪಿ ಸುಳ್ಳುಗಳಿಗೆ ನಮ್ಮ ಅಭಿವೃದ್ಧಿ ಕಾರ್ಯಗಳೇ ಉತ್ತರ. ಸರ್ಕಾರವನ್ನು ರಾಜ್ಯದ ಜನರ ಮನೆ ಬಾಗಿಲಿಗೆ ತಲುಪಿಸಿದ್ದೇವೆ. ಜನರ ದಿಕ್ಕು ತಪ್ಪಿಸುವುದನ್ನು ನಿಲ್ಲಿಸಬೇಕಾದರೆ ನೀವು ಒಂದೇ ವೇದಿಕೆಗೆ ಚರ್ಚೆಗೆ ಬನ್ನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಮೈಸೂರಿನಲ್ಲಿ ಇಂದು ನಡೆದ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶ ಹಾಗೂ 2578 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಿಎಂ, ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕಾಗಿ ಸಾಧನಾ ಸಮಾವೇಶ ಆಯೋಜನೆ ಮಾಡಿದ್ದಾರೆಂದು ಬಿಜೆಪಿ, ಜೆಡಿಎಸ್ ನವರು ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಜೆಡಿಎಸ್ ನವರು ನಮ್ಮ ಸಾಧನೆಯನ್ನು ಸಹಿಸಿಕೊಳ್ಳಲಾಗದೇ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಎಂದೂ ಸಹ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ‌ ಮೂಲಕವೇ ಬಿಜೆಪಿ ಅಧಿಕಾರಕ್ಕೆ ಬಂತು ಎಂದು ವಾಗ್ದಾಳಿ ನಡೆಸಿದ್ದಾರೆ. ಈಮಧ್ಯೆ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮೈಸೂರಿನಲ್ಲಿ ಸರ್ಕಾರದ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡು ವಾಪಸ್‌ ಬೆಂಗಳೂರಿಗೆ ಬರುತ್ತಿದ್ದ ವೇಳೆ ಅವರ ಬೆಂಗಾವಲು ಪೊಲೀಸ್ ವಾಹನ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಟಿಎಂ ಹೊಸೂರು ಗೇಟ್ ಬಳಿ ಬೆಂಗಾವಲು ಪೊಲೀಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಬೆಂಗಾವಲು ವಾಹನದಲ್ಲಿದ್ದ ಬೆಂಗಳೂರಿನ ದಿನೇಶ್, ಮಹೇಶ್, ಜಯಲಿಂಗು ಮತ್ತು ಕಾರ್ತಿಕ್ ಎಂಬುವವರು ಗಾಯಗೊಂಡಿದ್ದು, ಅವರನ್ನು ಶ್ರೀರಂಗಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕರ್ನಾಟಕ ಹೈಕೋರ್ಟ್ ಗೆ ನೂತನ CJ

ನ್ಯಾಯಮೂರ್ತಿ ವಿಭು ಬಖ್ರು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರು ನೂತನ ಸಿಜೆಗೆ ಪ್ರಮಾಣ ವಚನ ಬೋಧಿಸಿದರು. ಇದಕ್ಕೂ ಮೊದಲು, 59 ವರ್ಷದ ನ್ಯಾಯಮೂರ್ತಿ ಬಖ್ರು ದೆಹಲಿ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅವರನ್ನು ಬಡ್ತಿ ನೀಡಲಾಗಿದ್ದು, ಸುಪ್ರೀಂ ಕೋರ್ಟ್ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಮಾಡಿದ ಶಿಫಾರಸುಗಳನ್ನು ಆಧರಿಸಿದೆ.

ರಾಜ್ಯದಲ್ಲಿ ಮುಂಗಾರು ಚುರುಕು, ಹವಾಮಾನ: ಕೊಡಗು, ಉತ್ತರ ಕನ್ನಡ ಜಿಲ್ಲೆಗಳಿಗೆ IMD ರೆಡ್ ಅಲರ್ಟ್

ದಕ್ಷಿಣ ಒಳನಾಡಿನಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಮಡಿಕೇರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಕೊಡಗು ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವು ನದಿಗಳು ಉಕ್ಕಿ ಹರಿಯುತ್ತಿವೆ. ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕೆಲ ತಾಲೂಕಿನಾದ್ಯಂತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈಗಾಗಲೇ ಹವಾಮಾನ ಇಲಾಖೆ ಮುಂದಿನ 7 ದಿನಗಳ ಕಾಲ ರಾಜ್ಯಾದ್ಯಂತ ವ್ಯಾಪಕ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ಇನ್ನುಳಿದ ಎಲ್ಲಾ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಹಿನ್ನಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಹಳದಿ ಮಾರ್ಗ ಕಾರ್ಯಾರಂಭ ತ್ವರಿತಗೊಳಿಸಲು ಕೇಂದ್ರ ಸಚಿವರಿಗೆ ಸಂಸದ Tejasvi Surya ಮನವಿ

ನಮ್ಮ ಮೆಟ್ರೋದ ಹಳದಿ ಮಾರ್ಗದ ಕಾರ್ಯಾರಂಭವನ್ನು ತ್ವರಿತಗೊಳಿಸಲು ಮಧ್ಯಪ್ರವೇಶಿಸುವಂತೆ ಕೇಂದ್ರ ಸರ್ಕಾರಕ್ಕೆ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದ್ದಾರೆ. ನವದೆಹಲಿಯಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿದ ಸಂಸದ ತೇಜಸ್ವಿ ಸೂರ್ಯ, ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಂದ ಶೀಘ್ರವೇ ಹಳದಿ ಮಾರ್ಗಕ್ಕೆ ಅನುಮೋದನೆ ಕೊಡಿಸಬೇಕೆಂದು ಒತ್ತಾಯಿಸಿದ್ದಾರೆ. ಈಮಧ್ಯೆ, ಬಹುನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗದ ರೈಲು ಮತ್ತು ಸಿಗ್ನಿಲಿಂಗ್ ವ್ಯವಸ್ಥೆಗಳಿಗೆ ಅಗತ್ಯವಾದ ಸ್ವತಂತ್ರ ಸುರಕ್ಷತಾ ಮೌಲ್ಯಮಾಪನದ ಪ್ರಮಾಣೀಕರಣ ದೊರೆತಿದೆ.

ಆ.11 ರಿಂದ ಮುಂಗಾರು ಅಧಿವೇಶನ

ಆಗಸ್ಟ್ 11 ರಿಂದ 22ರವರೆಗೆ 9 ದಿನಗಳ ಕಾಲ ರಾಜ್ಯ ಮುಂಗಾರು ಅಧಿವೇಶನ ನಡೆಯಲಿದೆ. ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದ್ದು, ಆಗಸ್ಟ್ 11 ರಂದು ಬೆಳಗ್ಗೆ 11 ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿಧಾನಸಭೆ ಹಾಗೂ ವಿಧಾನಪರಿಷತ್ ನ ಜಂಟಿ ಅಧಿವೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಕರ್ನಾಟಕ ರೋಹಿತ್ ವೇಮುಲಾ ಮಸೂದೆ, ಕರ್ನಾಟಕ ತಪ್ಪು ಮಾಹಿತಿ, ಸುಳ್ಳು ಸುದ್ದಿ ನಿಷೇಧ ಮಸೂದೆ, ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ತಡೆ ಮಸೂದೆ ಸೇರಿದಂತೆ ಹಲವು ಮಸೂದೆಗಳು ಅಧಿವೇಶನದಲ್ಲಿ ಮಂಡನೆಯಾಗುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸೌದಿಯಲ್ಲಿ ಬಸ್–ಡೀಸೆಲ್ ಟ್ಯಾಂಕರ್ ಡಿಕ್ಕಿಯಾಗಿ ಘೋರ ದುರಂತ: 42 ಮಂದಿ ಭಾರತೀಯ ಯಾತ್ರಿಕರು ದುರ್ಮರಣ, ಸಹಾಯವಾಣಿ ಆರಂಭ

ಬಿಹಾರ: ನ. 20ಕ್ಕೆ ನೂತನ ಸಿಎಂ ಪದ ಗ್ರಹಣ, ಪ್ರಧಾನಿ ಮೋದಿ ಸಮಾರಂಭದಲ್ಲಿ ಭಾಗಿ!

ಸಂಪುಟ ವಿಸ್ತರಣೆಗೆ ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್: ಸಿಎಂ ಸಿದ್ದರಾಮಯ್ಯ ಓಟಕ್ಕೆ 'ಬಂಡೆ' ಬ್ರೇಕ್! KN ರಾಜಣ್ಣ ಕಮ್ ಬ್ಯಾಕ್?

ವಾರ ಭವಿಷ್ಯ: ದ್ವಾದಶ ರಾಶಿಗಳ ಫಲಾಫಲ

ಮೊಹಮ್ಮದ್ ಶಮಿ ವಾಪಸ್ ಕರೆ ತನ್ನಿ: ಕೋಲ್ಕತ್ತಾ ಟೆಸ್ಟ್ ಸೋಲಿನ ನಂತರ ಗೌತಮ್ ಗಂಭೀರ್‌ಗೆ ಗಂಗೂಲಿ!

SCROLL FOR NEXT