ಬೆಂಗಳೂರು: ಜಿಎಸ್‌ಟಿ ನೋಂದಾಯಿಸದೆ ಯುಪಿಐ ಮೂಲಕ 40 ಲಕ್ಷ ರೂ. ಗಿಂತ ಹೆಚ್ಚು ಹಣ ವರ್ಗಾವಣೆ ಮಾಡಿರುವ ಬೆಂಗಳೂರಿನ ಸಣ್ಣ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದ್ದು, ದಂಡ ಪಾವತಿಸುವಂತೆ ಸೂಚಿಸಿದೆ. ಈ ವಿಚಾರ ಇದೀಗ ರಾಜಕೀಯ ತಿರುವು ಪಡೆದಿದ್ದು ನೋಟಿಸ್ ಪಡೆದಿರುವ ಸಣ್ಣ ವ್ಯಾಪಾರಿಗಳ ನೆರವಿಗೆ ಬಿಜೆಪಿ ಮುಂದಾಗಿದೆ.
ಬೇಕರಿ, ಕಾಂಡಿಮೆಂಟ್ಸ್, ಕಾಫಿ-ಟೀ ಅಂಗಡಿಗಳು, ಹೂವಿನ ವ್ಯಾಪಾರಿಗಳಿಗೆ ನೋಟಿಸ್ ಜಾರಿ ಮಾಡಿರುವುದರಿಂದ ವರ್ತಕರಲ್ಲಿ ಭಯ ಹಾಗೂ ಗೊಂದಲದ ವಾತಾವರಣ ಸೃಷ್ಟಿಯಾಗಿದ್ದು, ನಿಮ್ಮೊಂದಿಗೆ ನಾವಿದ್ದೇವೆ ಎಂದು ರಾಜ್ಯ ಬಿಜೆಪಿ ತಿಳಿಸಿದೆ. ಇದೇ ವೇಳೆ ಸಣ್ಣ ವ್ಯಾಪಾರಸ್ಥರ ಹಿತರಕ್ಷಣೆಗಾಗಿ ಸಹಾಯವಾಣಿ (88842 45123)ಸಂಖ್ಯೆಯನ್ನು ಆರಂಭಿಸಿದೆ
ಶನಿವಾರ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ಜಿಎಸ್‌ಟಿ ನೋಟಿಸ್ ವಿಚಾರದಲ್ಲಿ ಗೊಂದಲ ಶುರುವಾಗಿದ್ದು, ಬಡ ವ್ಯಾಪಾರಿಗಳಲ್ಲಿ ಆತಂಕದ ಛಾಯೆ ಮೂಡಿದೆ. ಇದರ ಪರಿಹಾರೋಪಾಯಗಳನ್ನು ಸರಕಾರ ಮಾಡಬೇಕಿತ್ತು. ಆದರೆ, ರಾಜ್ಯ ಸರಕಾರ ಎಲ್ಲಿಯೂ ನಿಜವಾದ ತೆರಿಗೆ ಮೊತ್ತ ಯಾವುದು ಮತ್ತು ವಿಧಿಸಲಾಗದ ತೆರಿಗೆ ಮೊತ್ತ ಯಾವುದು ಎಂದು ಕೂಲಂಕಶ ಚರ್ಚೆ ಮಾಡಿಲ್ಲ ಮತ್ತು ವ್ಯಾಪಾರಿಗಳಿಗೆ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದರು.
ಕೇಂದ್ರದ ಮೂಲಕ ರಾಜ್ಯ ಸರಕಾರಕ್ಕೆ ಇರುವ ಮಾಹಿತಿಯ ಪ್ರಕಾರ ವಾರ್ಷಿಕ ವಹಿವಾಟು 40 ಲಕ್ಷ ರೂ. ಮೀರಿದರೆ ಅವರು ಜಿಎಸ್‍ಟಿಯಡಿ ನೋಂದಾಯಿಸಿಕೊಳ್ಳಬೇಕು. ಜಿಎಸ್‍ಟಿ ವಾರ್ಷಿಕ ವಹಿವಾಟು 20 ಲಕ್ಷ ರೂ. ಮೀರಿರುವ ಸೇವಾ ಪೂರೈಕೆದಾರರು ತೆರಿಗೆ ಕಟ್ಟಬೇಕು ಎಂದು ವ್ಯಾಪಾರಿಗಳಿಗೆ ನೋಟಿಸ್ ಕಳುಹಿಸಿದ್ದಾರೆ. ಆದರೆ ಇದು ಸಲ್ಲದು ಎಂದು ಅವರು ಆಕ್ಷೇಪಿಸಿದರು.
ವ್ಯಾಪಾರಿಗಳು ಯಾವುದೇ ಕಾರಣಕ್ಕೂ ಕಳ್ಳರಲ್ಲ ಮತ್ತು ತೆರಿಗೆಯನ್ನು ವಂಚಿಸುವವರಲ್ಲ. ಆದರೆ ತೆರಿಗೆಯ ಪರಿಸ್ಥಿತಿ ಅವರಿಗೆ ಅರ್ಥವಾಗಿಲ್ಲ ಮತ್ತು ಸರಕಾರದವರು ಅವರಿಗೆ ಅರ್ಥ ಮಾಡಿಸಿಲ್ಲ. ಬಡ ವ್ಯಾಪಾರಿಗಳು ಗೊಂದಲದಲ್ಲಿದ್ದಾರೆ ಹಾಗೂ ಆತಂಕಗೊಂಡಿದ್ದಾರೆ. ಆದ್ದರಿಂದ ಸರಕಾರ ಇದನ್ನು ಗಮನಿಸಿ, ಬಡಜನರ ರಕ್ಷಣೆಗೆ ಧಾವಿಸಬೇಕು ಎಂದು ಅವರು ಆಗ್ರಹಿಸಿದರು.
ಶೇ.90ರಷ್ಟು ವರ್ತಕರಿಗೆ ರಾಜ್ಯ ಜಿಎಸ್‍ಟಿ ಘಟಕದ ವತಿಯಿಂದ ಯಾವುದೇ ಮಾಹಿತಿ ನೀಡದೆ ಮತ್ತು ತೆರಿಗೆ ಮಾಹಿತಿಯನ್ನು ಕೊಡದೆ ಸಣ್ಣ ವ್ಯಾಪಾರಿಗಳಲ್ಲಿ ಆತಂಕ ಸೃಷ್ಟಿಸಿದ್ದಾರೆ. ಆದ್ದರಿಂದ ಅಧಿಕಾರಿಗಳು ವ್ಯಾಪಾರಿಗಳಿಗೆ ನೀಡಿರುವ 14,000 ನೋಟಿಸ್ ಕಾನೂನಿಗೆ ವಿರುದ್ಧವಾಗಿದೆ ಮತ್ತು ಸಂವಿಧಾನ ವಿರುದ್ಧವಾಗಿದೆ ಎಂದು ಅವರು ಆಕ್ಷೇಪಿಸಿದರು.
ಈ ನಡುವೆ ನೋಟಿಸ್ ಕುರಿತು ಸ್ಪಷ್ಟನೆ ನೀಡಿರುವ ವಾಣಿಜ್ಯ ತೆರಿಗೆ ಇಲಾಖೆ, ಹಲವಾರು ಮಂದಿ ಜಿಎಸ್‌ಟಿ ನೋಂದಣಿ ಮಾಡಿಕೊಳ್ಳದೆ ಯುಪಿಐ ಮೂಲಕವೇ ಮಿತಿ ಮೀರಿ ಲಕ್ಷಾಂತರ ರೂಪಾಯಿ ಸ್ವೀಕರಿಸಿರುವುದು ಪರಿಶೀಲನೆ ವೇಳೆ ಕಂಡು ಬಂದಿದೆ. ಸ್ವೀಕರಿಸಿರುವ ಮೊತ್ತದ ಕುರಿತು ವ್ಯಾಪಾರಿಗಳು ಸೂಕ್ತ ವಿವರಣೆ ನೀಡಿದಲ್ಲಿ ಜಿಎಸ್‌ಟಿ ಮೊತ್ತ ಕಡಿಮೆಯಾಗಲಿದೆ ಎಂದು ಹೇಳಿದೆ.