ಬೆಂಗಳೂರು: ಕಾಲೇಜಿನಲ್ಲಿ ರ‍್ಯಾಗಿಂಗ್ ನಿಂದ ಬೇಸತ್ತು 22 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವಿಡಿಯೋ ರೆಕಾರ್ಡ್ ಮಾಡಿಟ್ಟಿದ್ದ. ನಗರದ ಹೊರವಲಯದಲ್ಲಿರುವ ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ನಂದರಾಮಯ್ಯನ ಪಾಳ್ಯದಲ್ಲಿ ಜುಲೈ 11 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಪೊಲೀಸರು ಅಸ್ವಾಭಾವಿಕ ಸಾವಿನ ವರದಿ (UDR) ದಾಖಲಿಸಿದ್ದಾರೆ. ಮೃತ ವಿದ್ಯಾರ್ಥಿಯ ಪೋಷಕರು ಇಂದು ಔಪಚಾರಿಕ ದೂರು ದಾಖಲಿಸುವ ನಿರೀಕ್ಷೆಯಿದೆ. ಅವರು ದೂರು ನೀಡಿದ ನಂತರ ನಾವು ಎಫ್‌ಐಆರ್ ದಾಖಲಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ವಾಸ್ತುಶಿಲ್ಪ ವಿಭಾಗದ ವಿದ್ಯಾರ್ಥಿಯಾಗಿದ್ದ ಮೃತ ಅರುಣ್ (22ವ) ಹಾಸನ ಮೂಲದವರು.
ಅರುಣ್ ಅವರ ಪೋಷಕರು ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಅವರ ಆರ್ಥಿಕ ಮಟ್ಟ ತೀರಾ ಕೆಳಮಟ್ಟದಲ್ಲಿದ್ದರೂ ಅರುಣ್ ಒಬ್ಬ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಸಂಸ್ಥೆಯಲ್ಲಿ ಉಚಿತ ಸೀಟು ಪಡೆದಿದ್ದರು. ಆತ ಚಿತ್ರ ಕಲಾವಿದ ಕೂಡ ಆಗಿದ್ದರು.
ಊರಿಗೆ ಬಂದಿದ್ದ ಅರುಣ್ ಪೋಷಕರು ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಸ್ನೇಹಿತರಿಂದ ರ‍್ಯಾಗಿಂಗ್ ಗೆ ಒಳಗಾಗಿದ್ದು ತೀವ್ರ ಹಿಂಸೆ ಅನುಭವಿಸುತ್ತಿದ್ದರು. ಅದನ್ನು ತಾಳಲಾರದೆ ವೀಡಿಯೊವನ್ನು ರೆಕಾರ್ಡ್ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಡಿಯೊದಲ್ಲಿ ಕಾಲೇಜಿನಲ್ಲಿ ಸಹಪಾಠಿಗಳು, ಸೀನಿಯರ್ಸ್ ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿಕೊಳ್ಳುತ್ತಾರೆ ಎಂದು ಹೇಳಿಕೊಂಡಿದ್ದಾರೆ. ನಂತರ ವಿಡಿಯೋವನ್ನು ತನ್ನ ಕಾಲೇಜು ವಾಟ್ಸಾಪ್ ಗ್ರೂಪ್ ನಲ್ಲಿ ಹಂಚಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯೋ ವೈರಲ್ ಆದ ನಂತರ, ಕಾಲೇಜು ಅಧಿಕಾರಿಗಳು ಅರುಣ್ ಅವರ ಪೋಷಕರಿಗೆ ಮಾಹಿತಿ ನೀಡಿದಾಗ, ಅವರು ಮನೆಗೆ ಧಾವಿಸಿ ನೋಡಿದಾಗ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಹಾಯವಾಣಿ
ಆತ್ಮಹತ್ಯಾ ಆಲೋಚನೆಗಳು ಬಂದರೆ ಅಥವಾ ನಿಮ್ಮ ಸ್ನೇಹಿತರು, ಪರಿಚಯಸ್ಥರಿಗೆ ಸಮಸ್ಯೆಗಳಿದ್ದರೆ ಭಾವನಾತ್ಮಕ ಬೆಂಬಲ ಬೇಕಾದರೆ, ಸ್ನೇಹ ಫೌಂಡೇಶನ್- 04424640050, ಟೆಲಿ ಮಾನಸ್- 14416 (24x7) ಅಥವಾ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್-02225521111 ಗೆ ಕರೆ ಮಾಡಿ, (ಸೋಮವಾರ-ಶನಿವಾರ; ಬೆಳಗ್ಗೆ 8-ರಾತ್ರಿ 10 ಗಂಟೆಯವರೆಗೆ)