ಬೆಂಗಳೂರು: ಸ್ವಚ್ಛಗೊಳಿಸಲು ಒಳಚರಂಡಿಗೆ ಇಳಿದ ವ್ಯಕ್ತಿಯೋರ್ವ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಆರ್‌ಎಂಸಿ ಯಾರ್ಡ್ ಠಾಣಾ ವ್ಯಾಪ್ತಿಯ ಆಶ್ರಯನಗರದಲ್ಲಿ ಭಾನುವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಆರ್ ಎಂ ಸಿ ಯಾರ್ಡ್ ನ ಪುಟ್ಟಸ್ವಾಮಿ (31) ಎಂದು ಗುರುತಿಸಲಾಗಿದೆ. ನಿಷೇಧದ ಹೊರತಾಗಿಯೂ ಪುಟ್ಟಸ್ವಾಮಿಯನ್ನು ಸ್ವಚ್ಛಗೊಳಿಸಲು ಒಳಚರಂಡಿಗೆ ಇಳಿಸಿದ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಆಶ್ರಯನಗರದ ಇಂದಿರಾ ಕ್ಯಾಂಟೀನ್ ಬಳಿಯ ಒಳಚರಂಡಿ ಶುಚಿಗೊಳಿಸಲು ಭಾನುವಾರ ಸಂಜೆ ಪುಟ್ಟ ಹಾಗೂ ಅಂಥೋಣಿ ಇಳಿದಿದ್ದರು. ಶುಚಿಗೊಳಿಸುವ ವೇಳೆ ಇಬ್ಬರೂ ಉಸಿರುಗಟ್ಟಿ ಅಸ್ವಸ್ಥರಾಗಿದ್ದರು. ಇಬ್ಬರನ್ನೂ ಹೊರಕ್ಕೆ ಕರೆತಂದು ಮಜ್ಜಿಗೆ ಹಾಗೂ ನೀರು ಕುಡಿಸಿ ಮನೆಗೆ ಕಳುಹಿಸಲಾಗಿತ್ತು. ಆದರೆ, ರಾತ್ರಿ ಮನೆಯಲ್ಲಿ ಮಲಗಿದ್ದ ಸ್ಥಳದಲ್ಲೇ ಪುಟ್ಟಸ್ವಾಮಿ ಮೃತಪಟ್ಟಿದ್ದಾರೆಂದು ಮೂಲಗಳು ತಿಳಿಸಿವೆ.
ಬಂಧಿತ ನಾಲ್ವರು ಆರೋಪಿಗಳಲ್ಲಿ ಒಬ್ಬನಾದ ನಾಗರಾಜು, ಅಕ್ಷಯ ನಗರದಲ್ಲಿ ಮುಚ್ಚಿಹೋಗಿರುವ ಒಳಚರಂಡಿಯನ್ನು ಸ್ವಚ್ಛಗೊಳಿಸಲು ಪುಟ್ಟಸ್ವಾಮಿ ಮತ್ತು ಆಂಥೋನಿ ಎಂಬ ದಿನಗೂಲಿ ಕಾರ್ಮಿಕರನ್ನು ನೇಮಿಸಿದ್ದಾನೆ.
ಇಬ್ಬರೂ ಸಂಜೆ 7 ಗಂಟೆ ಸುಮಾರಿಗೆ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಒಳಚರಂಡಿ ಸ್ವಚ್ಛಗೊಳಿಸಲು ಒಳಗೆ ಇಳಿದಿದ್ದಾರೆ. ಈ ವೇಳೆ ಮ್ಯಾನ್ ಹೋಲ್ ಒಳಗೆ ಇದ್ದ ವಿಷಕಾರಿ ಅನಿಲವನ್ನು ಉಸಿರಾಡಿದ ಪರಿಣಾಮ ಉಸಿರಾಟದ ಸಮಸ್ಯೆ ಎದುರಾಗಿದೆ. ಅಸ್ವಸ್ಥಗೊಂಡಿದ್ದ ಇಬ್ಬರಿಗೆ ಹೊರತಂದ ಬಳಿಕ ಯಾವುದೇ ವೈದ್ಯಕೀಯ ಚಿಕಿತ್ಸೆಗಳನ್ನುಕೊಡಿಸಿಲ್ಲ.
ಮನೆಗೆ ತೆರಳಿದ ಪುಟ್ಟಸ್ವಾಮಿಯವರು ವಿಶ್ರಾಂತಿ ಪಡೆದಿದ್ದು, ರಾತ್ರಿ ಮೃತುಪಟ್ಟಿದ್ದಾರೆ. ಶವವನ್ನು ಇದೀಗ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪುಟ್ಟಸ್ವಾಮಿ ಅವರ ತಂದೆ ನೀಡಿದ ದೂರಿನ ಆಧಾರದ ಮೇಲೆ, ಪುಟ್ಟಸ್ವಾಮಿಯನ್ನು ಒಳಚರಂಡಿ ಸ್ವಚ್ಛತೆಗಿಳಿಸಿದ ಆರೋಪದ ಮೇಲೆ ನಾಗರಾಜು, ಆಂಟನಿ, ಅನಂತಕುಮಾರ್ ಮತ್ತು ದೇವರಾಜು ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮ್ಯಾನ್‌ಹೋಲ್ ಸ್ವಚ್ಛಗೊಳಿಸಲು ಪುಟ್ಟಸ್ವಾಮಿಯನ್ನು ಕರೆದೊಯ್ದ ಆರೋಪದ ಮೇಲೆ ಆಂಟನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ನಾಲ್ವರ ವಿರುದ್ಧ ಮ್ಯಾನ್ಯುವಲ್ ಸ್ಕ್ಯಾವೆಂಜರ್‌ಗಳ ಉದ್ಯೋಗ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆ ಮತ್ತು ಬಿಎನ್‌ಎಸ್‌ನ ಸೆಕ್ಷನ್ 106 (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.