ಬೆಂಗಳೂರು: ತೆರಿಗೆ ನೋಟಿಸ್‌ಗೆ ಗಾಬರಿಯಾಗಬೇಡಿ, ನಿಮ್ಮ (ವ್ಯಾಪಾರಿಗಳು) ಉತ್ತರ ಅವಲಂಬಿಸಿ ದಂಡ, ಜಿಎಸ್‌ಟಿ ನಿಗದಿಯಾಗಲಿದೆ. ನೋಟಿಸ್‌ನಲ್ಲಿ ಉಲ್ಲೇಖಿಸಿರುವಷ್ಟು ಜಿಎಸ್‌ಟಿ, ದಂಡ ಪಾವತಿ ಕಡ್ಡಾಯವಲ್ಲ ಎಂದು ಹೇಳುವ ಮೂಲಕ ಸಣ್ಣ ವ್ಯಾಪಾರಿಗಳ ಆತಂಕವನ್ನು ವಾಣಿಜ್ಯ ತೆರಿಗೆ ಇಲಾಖೆ ದೂರ ಮಾಡಿದೆ.
ಕೋರಮಂಗಲದಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆ ಕಚೇರಿಯಲ್ಲಿ ಮಂಗಳವಾರ 'ಜಿಎಸ್ಟಿ ತಿಳಿಯಿರಿ' ಸಭೆ ನಡೆಸಲಾಗಿದ್ದು, ಸಭೆಯಲ್ಲಿ ವ್ಯಾಪಾರಿಗಳ ಪ್ರಶ್ನೆಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಮೀರಾ ಪಂಡಿತ್ ಅವರು ಉತ್ತರ ನೀಡಿದರು.
ಮೊದಲ ಹಂತದಲ್ಲಿ ಕೋಟ್ಯಂತರ ರು. ಸ್ವೀಕರಿಸಿದ ವ್ಯಾಪಾರಿಗಳಿಗೆ ನೋಟಿಸ್ ನೀಡಲಾಗಿದೆ. ನಮ್ಮ ವ್ಯಾಪ್ತಿಯಲ್ಲಿ 850 ವ್ಯಾಪಾರಿಗಳಿಗೆ ನೋಟಿಸ್ ನೀಡಲಾಗಿದೆ. ಜಿಎಸ್ಟಿ ವಂಚನೆ ಕುರಿತು ಬೇರೆ ಬೇರೆ ಮೂಲಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಸಂಸ್ಥೆಗಳ ಮಾಹಿತಿ ರೇರಾದಿಂದ ಪಡೆದು ನೋಟಿಸ್ ನೀಡಲಾಗುವುದು ಎಂದು ಹೇಳಿದರು.
ಇದೇ ವೇಳೆ ನೋಟಿಸ್‌ನಲ್ಲಿ ಉಲ್ಲೇಖಿಸಿರುವಷ್ಟು ಸರಕು ಮತ್ತು ಸೇವಾ ತೆರಿಗೆ, (ಜಿಎಸ್ಟಿ) ದಂಡೆ ಮತ್ತು ಬಡ್ಡಿಯನ್ನು ಸಣ್ಣ ವ್ಯಾಪಾರಿಗಳು ಪಾವತಿಸುವುದು ಕಡ್ಡಾಯವಲ್ಲ. ನೋಟಿಸ್'ಗೆ ನೀವು ನೀಡುವ ಉತ್ತರದ ಆಧಾರದ ಮೇಲೆ ತೆರಿಗೆ ಪ್ರಮಾಣ ಗಣನೀಯ ಕಡಿಮೆಯಾಗಬಹುದು ಎಂದು ಸ್ಪಷ್ಟಪಡಿಸಿದ್ದಾರೆ.
ಜಿಎಸ್ಟಿ ಸಂಪೂರ್ಣ ವಿನಾಯಿತಿ ಇರುವ ಹಣ್ಣು, ತರಕಾರಿ, ಹಾಲು ಮುಂತಾದ ಉತ್ಪನ್ನಗಳೂ ಇವೆ. ಮತ್ತೊಂದೆಡೆ ಶೇ.28ರಷ್ಟು ಜಿಎಸ್ಟಿ ಇರುವ ಗುಟ್ಕಾ ಮತ್ತು ಸಿಗರೇಟು ಉತ್ಪನ್ನಗಳೂ ಇವೆ. ಹೀಗಾಗಿ, ವರ್ತಕರು ತಮ್ಮದು ಯಾವ ವ್ಯಾಪಾರ ಎಂದು ತಿಳಿಸಿದರೆ ತೆರಿಗೆ ಕಡಿಮೆಯಾಗುತ್ತದೆ ಎಂದರು.
2025ರ ಜನವರಿ ತಿಂಗಳಲ್ಲಿ ಪೋನ್ ಹಾಗೂ ಪೇಟಿಎಂನಿಂದ ವರ್ತಕರ ವಹಿವಾಟುಗಳ ಕುರಿತು ಡೇಟಾ ಸಿಕ್ಕಿದೆ. ಇದೇ ಆಧಾರದ ಮೇಲೆ ಜಿಎಸ್ಟಿ ಮಿತಿ ಮೀರಿ ವಹಿವಾಟು ನಡೆಸಿದವರನ್ನು ಗುರುತಿಸುತ್ತಿದ್ದೇವೆ. ಮೊದಲ ಹಂತದಲ್ಲಿ ಕೋಟ್ಯಂತರ ರೂ. ಹಣ ಸ್ವೀಕರಿಸಿದ ವ್ಯಾಪಾರಿಗಳಿಗೆ ನೋಟಿಸ್ ನೀಡಲಾಗಿದೆ.
ಬೇಕರಿ, ಕಾಂಡಿಮೆಂಟ್, ಹಣ್ಣು-ತರಕಾರಿ, ಹೂವು, ಡೈರಿ, ಮಾಂಸದ ಅಂಗಡಿ, ಸಣ್ಣ ಗಾತ್ರದ ಬಟ್ಟೆ ವ್ಯಾಪಾರಿಗಳು ಇದ್ದಾರೆ. ಜಿಎಸ್ಟಿ ವಂಚನೆ ಕುರಿತು ಬೇರೆ ಬೇರೆ ಮೂಲಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಸಂಸ್ಥೆಗಳ ಮಾಹಿತಿ ರೇರಾದಿಂದ ಪಡೆದುಕೊಂಡು ನೋಟಿಸ್ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಸೇವೆ (ಸರ್ವೀಸ್) ಸಂಬಂಧಿಸಿದ ವ್ಯಾಪಾರಕ್ಕೆ 20 ಲಕ್ಷ ರು. ಹಾಗೂ ಸಗಟು ವ್ಯಾಪಾರಕ್ಕೆ 40 ಲಕ್ಷ ರು. ಜಿಎಸ್ಟಿ ಮಿತಿಯನ್ನು 8 ವರ್ಷಗಳ ಹಿಂದೆ ನಿಗದಿಪಡಿಸಲಾಗಿದೆ. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ವ್ಯಾಪಾರದಲ್ಲಿ ಲಾಭಾಂಶ ಕಡಿಮೆಯಾಗಿದೆ. ಹೀಗಾಗಿ, ಜಿಎಸ್ಟಿ ಮಿತಿಯನ್ನು ಕ್ರಮವಾಗಿ 50 ಲಕ್ಷ ರು. ಮತ್ತು 1 ಕೋಟಿ ರು.ಗೆ ಹೆಚ್ಚಿಸಬೇಕು ಎಂದು ಅನೇಕ ವ್ಯಾಪಾರಿಗಳು ಮನವಿ ಮಾಡಿದರು. ಈ ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಬಹುದು ಎಂದು ಅಧಿಕಾರಿಗಳು ಸಲಹೆ ನೀಡಿದರು.
ಜಿಎಸ್ಟಿ ನೋಂದಣಿಯಿಲ್ಲದೆ ಮಿತಿ ಮೀರಿ ವ್ಯಾಪಾರಮಾಡಿರುವ ವರ್ತಕರಿಗೆ ಸಂಪೂರ್ಣ ವಿನಾಯಿತಿ ಸಿಗಬೇಕು ಎಂದರೆ ಜಿಎಸ್ಟಿ ಕೌನ್ಸಿಲ್‌ನಲ್ಲಿ ತೀರ್ಮಾನವಾಗಬೇಕು. ನಮ್ಮ ರಾಜ್ಯದಿಂದಲೂ ಜಿಎಸ್ಟಿ ಕೌನ್ಸಿಲ್‌ಗೆ ಪ್ರತಿನಿಧಿಗಳು ಇರುತ್ತಾರೆ. ನಿಯಮಿತವಾಗಿ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಬೇಕು. ಅದಕ್ಕಾಗಿ ವರ್ತಕರು ಸರ್ಕಾರಗಳಿಗೆ ಮನವಿ ಸಲ್ಲಿಸಬಹುದು ಎಂದು ಅಧಿಕಾರಿ ತಿಳಿಸಿದರು.
ಸಭೆಯಲ್ಲಿ ಜಿಎಸ್‌ಟಿ ನೋಂದಣಿ ನಿಯಮಗಳು ಬಿಗಿಯಾಗುತ್ತಿರುವ ಕುರಿತು ವರ್ತಕರು ಆತಂಕ ವ್ಯಕ್ತಪಡಿಸಿದರು. ನೋಂದಣಿ ಮಾಡಿಕೊಳ್ಳಬಹುದು, ಆದರೆ, ಅದಕ್ಕೆ ಲೆಕ್ಕಪತ್ರ, ಪುಸ್ತಕಗಳನ್ನು ನಿರ್ವಹಿಸಬೇಕಾಗುತ್ತದೆ. ಇದಕ್ಕಾಗಿ ಅಕೌಂಟೆಂಟ್ ಅನ್ನು ನೇಮಿಸಿಕೊಳ್ಳಬೇಕು. ಇದಕ್ಕಾಗುವ ಹೆಚ್ಚುವರಿ ವೆಚ್ಚವನ್ನು ನಾವೇ ಭರಿಸಬೇಕು. ಸರ್ಕಾರವು ಗ್ರಾಹಕರಿಂದ ತೆರಿಗೆಗಳನ್ನು ಸಂಗ್ರಹಿಸುತ್ತಿದೆ ಎಂದು ಹೇಳುತ್ತದೆ, ಆದರೆ, ಈ ರೀತಿಯ ವೆಚ್ಚವನ್ನು ಮರುಪಾವತಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ ಈ ಪ್ರಕ್ರಿಯೆಯಲ್ಲಿ ಅನಧಿಕೃತ ಅಡೆತಡೆಗಳ ಕುರಿತಂತೆಯೂ ಕಳವಳ ವ್ಯಕ್ತಪಡಿಸಿದರು.
ಜಿಎಸ್'ಟಿ ನೋಂದಣಿ ಉಚಿತ ಎಂದು ಹೇಳುತ್ತಾರೆ. ಆದರೆ, ಇದರಲ್ಲಿ ಹಲವಾರು ತೊಡಗಳಿರುತ್ತೇವೆ. ಲಂಚವಿಲ್ಲದೆ, ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲಾಗುವುದಿಲ್ಲ. ಹೆಚ್ಚಿನ ಅಧಿಕಾರಿಗಳು ನೋಂದಣಿಯನ್ನು ಅನುಮೋದಿಸುವ ಮೊದಲು ರೂ. 2,000 ರಿಂದ ರೂ. 5,000 ವರೆಗೆ ಹೆಚ್ಚುವರಿ ಹಣದ ಬೇಡಿಕೆ ಇಡುತ್ತಾರೆ. ವ್ಯಾಪಾರ ಸ್ಥಳ ಗುತ್ತಿಗೆಯಲ್ಲಿದ್ದಾರೆ, ಭೂಮಾಲೀಕರ ದಾಖಲೆಗಳನ್ನು ಕೇಳುತ್ತಾರೆ. ಆದರೆ, ಮಾಲೀಕರು ದಾಖಲೆ ನೀಡಲು ಹಿಂಜರಿಯುತ್ತಾರೆಂದು ಹೇಳಿದರು.