ಬೆಂಗಳೂರು: ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ಮಂಗಳವಾರದಿಂದ ಮೆಟ್ರೋ ಸುರಕ್ಷತಾ ಆಯುಕ್ತರ ತಂಡ (ಸಿಎಂಆರ್‌ಎಸ್) ತಪಾಸಣೆ ಆರಂಭಿಸಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಸ್ವತಂತ್ರ ಸುರಕ್ಷತಾ ಮೌಲ್ಯಮಾಪನ (ISA) ವರದಿಯನ್ನು ಸ್ವೀಕರಿಸಿದ ನಂತರ ಮೆಟ್ರೋ ಸುರಕ್ಷತಾ ಆಯುಕ್ತರ ತಂಡದಿಂದ ತಪಾಸಣೆ ಆರಂಭವಾಗಿದೆ.
ನಮ್ಮ ಮೆಟ್ರೋದಲ್ಲಿ ಚಾಲಕ ರಹಿತ ರೈಲಿನ ಸಿಬಿಟಿಸಿ ತಂತ್ರಜ್ಞಾನ ಇದೇ ಮೊದಲ ಬಾರಿಗೆ ಬಳಕೆ ಆಗುತ್ತಿರುವುದರಿಂದ ಈ ಪ್ರಮುಖ ಮುಖ್ಯವಾಗಿದೆ.
ಮಂಗಳವಾರ ಮೋಟರ್ ಟ್ರಾಲಿ ಇನ್‌ಸ್ಪೆಕ್ಟನ್ ಕೈಗೊಂಡಿರುವ ಅಧಿಕಾರಿಗಳು ಟ್ರ್ಯಾಕ್ ಪರಿಶೀಲನೆ ಮಾಡಿದರು. ಇಂದು ರೈಲಿನ ವೇಗ, ತಿರುವುಗಳಲ್ಲಿ ಸಂಚಾರ, ನಿಲ್ದಾಣಗಳಲ್ಲಿ ನಿಲ್ಲುವ ರೀತಿ, ಸಿಗ್ನಲಿಂಗ್ ಸಿಸ್ಟಂ ಬಗ್ಗೆ ತಪಾಸಣೆ ನಡೆಯಲಿದೆ.
ಮುಂದಿನ 3-4 ದಿನಗಳಲ್ಲಿ ತಪಾಸಣೆ ಪೂರ್ಣಗೊಳ್ಳುತ್ತದೆ. ಬಳಿಕ ಪ್ರಯಾಣಿಕ ಸೇವೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು BMRCL ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚವಾಣ್ ಅವರು ಹೇಳಿದ್ದಾರೆ.
ಯಾವ ನಿಲ್ದಾಣಗಳು ಕಾರ್ಯಾರಂಭ ಮಾಡುತ್ತವೆ ಎಂಬ ಪ್ರಶ್ನೆಗೆ ಉತ್ತರಿಸಿ, ಅಧಿಕಾರಿಗಳ ವರದಿ ನಂತರ ಅದನ್ನು ನಿರ್ಧರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಆರ್‌ವಿ ರಸ್ತೆ - ಬೊಮ್ಮಸಂದ್ರ ನಡುವಿನ 18.8 ಕಿ.ಮೀ ಉದ್ದದ ಈ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳು ಬರಲಿವೆ. ಈ ಮಾರ್ಗ ದಕ್ಷಿಣ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ವ್ಯಾಪಿಸಿದೆ. ಜೊತೆಗೆ ಆರ್. ವಿ.ರಸ್ತೆ ಬಳಿ ಹಸಿರು ಮಾರ್ಗದ ಜತೆ ಸಂಪರ್ಕ ಹೊಂದಿರುವುದರಿಂದ ಈ ಮಾರ್ಗವು ದಕ್ಷಿಣ ಬೆಂಗಳೂರು ಜನರನ್ನು ನಗರ ಕೇಂದ್ರ ಭಾಗಕ್ಕೆ ಸಂಪರ್ಕ ಕಲ್ಪಿಸಲು ಸಹಕಾರಿಯಾಗಲಿದೆ.