ಬೆಂಗಳೂರು: ಹೆಬ್ಬಾಳ ವಿಧಾನಸಭೆ ಕ್ಷೇತ್ರದಲ್ಲಿ 50 ಸಾವಿರ ಇ–ಖಾತಾ ವಿತರಿಸುವ ಗುರಿ ಹೊಂದಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಮಂಗಳವಾರ ಹೇಳಿದರು.
ಹೆಬ್ಬಾಳದ ಎಚ್ಎಂಟಿ ಮೈದಾನದಲ್ಲಿ ಆಯೋಜಿಸಿರುವ ಎರಡು ದಿನಗಳ ಇ–ಖಾತಾ ಮೇಳಕ್ಕೆ ಮಂಗಳವಾರ ಚಾಲನೆ ನೀಡಿ ಸಚಿವರು ಮಾತನಾಡಿದರು.
ಆಸ್ತಿ ಮತ್ತು ಭೂಮಿಯ ಮಾಲೀಕತ್ವಕ್ಕೆ ಇ-ಖಾತಾ ಅಧಿಕೃತ ದಾಖಲೆಯಾಗಿದೆ. "ಈಗಾಗಲೇ, ಹೆಬ್ಬಾಳ ವಿಧಾನಸಭೆಯಲ್ಲಿರುವ 50,000 ಆಸ್ತಿಗಳ ಪೈಕಿ 13,000 ಆಸ್ತಿಗಳಿಗೆ ಅಂತಿಮ ಇ-ಖಾತಾ ನೀಡಲಾಗಿದೆ ಎಂದು ಹೇಳಿದರು.
ನಾಗರಿಕರ ಮನೆ ಬಾಗಿಲಿಗೆ ಇ-ಖಾತಾ ನೀಡಬೇಕೆಂಬ ಉದ್ದೇಶದಿಂದ ಇ-ಖಾತಾ ಮೇಳಗಳನ್ನು ಆಯೋಜಿಸಲಾಗುತ್ತಿದೆ. ರಾಜ್ಯದಾದ್ಯಂತ 55 ಲಕ್ಷಕ್ಕೂ ಅಧಿಕ ಆಸ್ತಿಗಳಿಗೆ ಇ-ಖಾತೆಗಳನ್ನು ವಿತರಿಸುವ ಗುರಿಯನ್ನು ಹೊಂದಲಾಗಿದೆ. ಹೆಬ್ಬಾಳ ಕ್ಷೇತ್ರದಲ್ಲಿರುವ 50 ಸಾವಿರಕ್ಕೂ ಹೆಚ್ಚು ಸ್ವತ್ತುಗಳಲ್ಲಿ 13 ಸಾವಿರ ಆಸ್ತಿಗಳಿಗೆ ಇ–ಖಾತಾ ವಿತರಿಸಲಾಗಿದೆ. ಈ ಮೇಳದಲ್ಲಿ ನಾಲ್ಕು ಸಾವಿರ ಇ–ಖಾತಾ ವಿತರಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಹೆಬ್ಬಾಳ ಕ್ಷೇತ್ರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ 200 ಕೋಟಿ ರೂ. ಅನುದಾನಕ್ಕೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ಕೃಷಿ ವಿಶ್ವ ವಿದ್ಯಾಲಯದ ಬಳಿ ಆಸ್ಪತ್ರೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದರು.
ಬಿಬಿಎಂಪಿ ಪೂರ್ವ ವಲಯ ಆಯುಕ್ತೆ ಸ್ನೇಹಲ್ ಆರ್ ಅವರು ಮಾತನಾಡಿ, ಈ ಮೇಳವನ್ನು ಆಯೋಜಿಸುವ ಮೂಲಕ ಪೂರ್ವ ವಲಯದಲ್ಲಿ ಸುಲಭವಾಗಿ ಇ-ಖಾತಾ ವಿತರಿಸಲು ವ್ಯವಸ್ಥೆ ಮಾಡಲಾಗಿದೆ ಪೂರ್ವ ವಲಯದಲ್ಲಿರುವ ಒಟ್ಟು 3,45,858 ಆಸ್ತಿಗಳ ಪೈಕಿ 55,917 ಆಸ್ತಿಗಳಿಗೆ ಅಂತಿಮ ಇ-ಖಾತಾ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಹೆಚ್ಚಿನ ಜನರಿಗೆ ಈ ಸೌಲಭ್ಯ ಲಭ್ಯವಾಗುವಂತೆ ಮಾಡಲು, ಈ ಮೇಳ ಬುಧವಾರವೂ ಮುಂದುವರಿಯಲಿದೆ. ಇ-ಖಾತಾ ಪಡೆಯಲು ಬಯಸುವ ನಾಗರಿಕರು ತಮ್ಮ ಅಗತ್ಯ ದಾಖಲೆಗಳೊಂದಿಗೆ ಬರಬೇಕೆಂದು ತಿಳಿಸಿದರು.
ಈ ನಡುವೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಕೂಡ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಎರಡು ವಾರಗಳ ಇ-ಖಾತಾ ಅಭಿಯಾನವನ್ನು ಆಯೋಜಿಸಿದ್ದು, ಆಸ್ತಿ ಮಾಲೀಕರಿಗೆ ಸೇವೆ ದೊರೆಯುವಂತೆ ಮಾಡಲು ಪ್ರತಿದಿನ ಕನಿಷ್ಠ 100 ಖಾತಾಗಳನ್ನು ನೀಡುವ ಗುರಿಯನ್ನು ಹೊಂದಿದ್ದಾರೆ.
ಬಿಬಿಎಂಪಿ ಕಂದಾಯ ಆಯುಕ್ತ ಮುನೀಶ್ ಮೌಗ್ದಿಲ್ ಅವರು, ಪ್ರತಿದಿನ ಸುಮಾರು 4,000 ಇ-ಖಾತಾಗಳನ್ನು ತಲುಪಿಸಲಾಗುತ್ತಿದ್ದು, ಮಾಸಿಕವಾಗಿ ಪುರಸಭೆಯು ಸುಮಾರು 1 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಇಲ್ಲಿಯವರೆಗೆ ಪಾಲಿಕೆಯು 6.2 ಲಕ್ಷ ಇ-ಖಾತಾಗಳನ್ನು ತಲುಪಿಸಿದೆ ಎಂದು ಮಾಹಿತಿ ನೀಡಿದರು.