ಕಾರವಾರ: ದಿವಾಳಿಯಾಗಿರುವ ಕಾರವಾರ ಅರ್ಬನ್ ಸಹಕಾರ ಬ್ಯಾಂಕ್ ನ ಪರವಾನಗಿಯನ್ನು ರದ್ದುಗೊಳಿಸಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಗುರುವಾರ ಹೇಳಿದೆ. ಪರಿಣಾಮ ಇಂದಿನಿಂದ ಜಾರಿಗೆ ಬರುವಂತೆ ಬ್ಯಾಂಕಿಂಗ್ ವ್ಯವಹಾರವನ್ನು ಮುಕ್ತಾಯಗೊಳಿಸಲಾಗಿದೆ.
ಬ್ಯಾಂಕ್ ಅನ್ನು ಬಂದ್ ಮಾಡಲು ಮತ್ತು ಬ್ಯಾಂಕ್‌ಗೆ ಲಿಕ್ವಿಡೇಟರ್ (ಒಂದು ಕಂಪನಿಯ ದಿವಾಳಿತನ ಅಥವಾ ಮುಚ್ಚುವಿಕೆ ಪ್ರಕ್ರಿಯೆಯಲ್ಲಿ ತೊಡಗಿರುವ ವ್ಯಕ್ತಿ ಅಥವಾ ಸಂಸ್ಥೆ) ನೇಮಿಸಲು ಆದೇಶ ನೀಡುವಂತೆ ಕರ್ನಾಟಕ ಸಹಕಾರ ಸಂಘಗಳ ರಿಜಿಸ್ಟ್ರಾರ್‌ಗೆ ಕೋರಲಾಗಿದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
ದಿವಾಳಿಯಾದ ಮೇಲೆ ಪ್ರತಿಯೊಬ್ಬ ಠೇವಣಿದಾರರು, ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್‌ನಿಂದ ರೂ. 5 ಲಕ್ಷದವರೆಗೆ ಠೇವಣಿ ವಿಮೆ ಹಣ ಪಡೆಯಲು ಅರ್ಹರಾಗಿರುತ್ತಾರೆ.
ಬ್ಯಾಂಕ್ ಸಲ್ಲಿಸಿದ ಮಾಹಿತಿಯ ಪ್ರಕಾರ ಶೇ.92. 9 ರಷ್ಟು ಠೇವಣಿದಾರರು DICGC ನಿಂದ ತಮ್ಮ ಸಂಪೂರ್ಣ ಠೇವಣಿ ಹಣ ಪಡೆಯಲು ಅರ್ಹರಾಗಿದ್ದಾರೆ ಎಂದು ಆರ್‌ಬಿಐ ತಿಳಿಸಿದೆ.
ಜೂನ್ 30, 2025 ರಂತೆ, DICGC ಈಗಾಗಲೇ ಒಟ್ಟು ವಿಮೆ ಠೇವಣಿಗಳಲ್ಲಿ ರೂ. 37.79 ಕೋಟಿ ಪಾವತಿಸಿರುವ ವಿವರ ನೀಡಿರುವ ಆರ್ ಬಿಐ, ಈ ಸಹಕಾರ ಬ್ಯಾಂಕ್ ಸಾಕಷ್ಟು ಬಂಡವಾಳ, ಗಳಿಕೆಯ ನಿರೀಕ್ಷೆಯೂ ಹೊಂದಿಲ್ಲ. ಅದರ ಪ್ರಸ್ತುತ ಹಣಕಾಸಿನ ಸ್ಥಿತಿಯೊಂದಿಗೆ ಬ್ಯಾಂಕ್ ತನ್ನ ಪ್ರಸ್ತುತ ಠೇವಣಿದಾರರಿಗೆ ಸಂಪೂರ್ಣ ಹಣ ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು RBI ಹೇಳಿದೆ.