ಬೆಂಗಳೂರು: ಧರ್ಮಸ್ಥಳಲ್ಲಿ ನಡೆದಿದೆ ಎನ್ನಲಾದ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡದಿಂದ (SIT) ಇಬ್ಬರು ಅಧಿಕಾರಿಗಳು ಹಿಂದೆ ಸರಿದಿರುವುದಾಗಿ ತಿಳಿದುಬಂದಿದೆ.
ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ತನಿಖೆಗೆ ಸಂಬಂಧಿಸಿದಂತೆ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
ಪೊಲೀಸ್ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್. ಅನುಚೇತ್, ಸಿಎಆರ್ ಕೇಂದ್ರದ ಡಿಸಿಪಿ ಸೌಮ್ಯಲತಾ, ಆಂತರಿಕ ಭದ್ರತಾ ವಿಭಾಗದ ಎಸ್ ಪಿ ಜಿತೇಂದ್ರ ಕುಮಾರ್ ದಯಾಮ ಸದಸ್ಯರಾಗಿದ್ದರು.
ಸದ್ಯ ಸಿಎಆರ್ ಕೇಂದ್ರಸ್ಥಾನದ ಉಪ ಪೊಲೀಸ್ ಆಯುಕ್ತರಾದ ಸೌಮ್ಯಲತಾ ಅವರು ವಯಕ್ತಿಕ ಕಾರಣಗಳಿಂದ ಹಿಂದೆ ಸರಿಯಲು ನಿರ್ಧರಿಸಿ ಪತ್ರ ಬರೆದಿದ್ದಾರೆ ಎನ್ನಲಾಗುತ್ತಿದೆ. ತನಿಖೆಯ ರೂಪುರೇಷೆ ಕುರಿತು ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ನಡೆದಿದ್ದ ಸಭೆಗೂ ಅವರು ಗೈರಾಗಿದ್ದರು. ಅವರ ಮನವಿಯನ್ನು ಪುರಸ್ಕರಿಸುವಂತೆ ಪ್ರಣವ್ ಮೊಹಾಂತಿ, ತಂಡದಿಂದ ಸೌಮ್ಯಲತಾ ಅವರ ಹೆಸರನ್ನು ಕೈ ಬಿಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿರುವುದಾಗಿ ತಿಳಿದುಬಂದಿದೆ.
ತನಿಖೆಗೆ ನಿಯೋಜಿಸಿದ್ದ 20 ಅಧಿಕಾರಿಗಳ ಪೈಕಿ, ಮತ್ತೋರ್ವ ಐಪಿಎಸ್ ಯೇತರ ಅಧಿಕಾರಿಯೊಬ್ಬರು ತಂಡದಿಂದ ಕೈ ಬಿಡುವಂತೆ ಪತ್ರ ಬರೆದಿದ್ದು, ಈ ವಿಚಾರವನ್ನು ಪ್ರಣವ್ ಮೊಹಾಂತಿ, ಸರ್ಕಾರದ ಗಮನಕ್ಕೆ ತಂದಿದ್ದು, ಹೊಸಬರ ನೇಮಕ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.