ಬೆಂಗಳೂರು: ಮಹಾರಾಷ್ಟ್ರದಲ್ಲಿ ನೋಂದಾಯಿಸಲಾದ ಎರಡು ಐಷಾರಾಮಿ ಕಾರುಗಳನ್ನು ಕರ್ನಾಟಕದಲ್ಲಿ ಓಡಿಸುತ್ತಿದ್ದ ಉದ್ಯಮಿ ಮತ್ತು ರಾಜಕಾರಣಿ ಯೂಸುಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ಅವರಿಂದ ಸಾರಿಗೆ ಅಧಿಕಾರಿಗಳು ಸುಮಾರು 40 ಲಕ್ಷ ರೂ. ಬಾಕಿ ಇದ್ದ ರಸ್ತೆ ತೆರಿಗೆ ಸಂಗ್ರಹಿಸಿದ್ದಾರೆ.
ಕೆಜಿಎಫ್ ಬಾಬು ನಟ ಅಮಿತಾಬ್ ಬಚ್ಚನ್ ಮತ್ತು ಅಮೀರ್ ಖಾನ್ ಅವರಿಂದ ಖರೀದಿಸಿದ ರೋಲ್ಸ್ ರಾಯ್ಸ್ ಫ್ಯಾಂಟಮ್ ಮತ್ತು ರೋಲ್ಸ್ ರಾಯ್ಸ್ ಘೋಸ್ಟ್ ಕಾರುಗಳನ್ನು ಹೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಂಟಿ ಸಾರಿಗೆ ಆಯುಕ್ತೆ ಶೋಭಾ ನೇತೃತ್ವದ ತಂಡವು ಬುಧವಾರ ವಸಂತ ನಗರದಲ್ಲಿರುವ ಬಾಬು ಅವರ ಮನೆಗೆ ಹೋಗಿ, ಎರಡು ಕಾರುಗಳಿಗೆ ತಡವಾಗಿ ತೆರಿಗೆ ಪಾವತಿ ಮಾಡಿದ್ದಕ್ಕಾಗಿ ದಂಡ ಸೇರಿದಂತೆ ಸುಮಾರು 40 ಲಕ್ಷ ರೂ. ಪಾವತಿಸಬೇಕಾಗುತ್ತದೆ ಎಂದು ಹೇಳಿದರು.
ಕರ್ನಾಟಕದ ಹೊರಗೆ ನೋಂದಾಯಿಸಲಾದ ಯಾವುದೇ ವಾಹನಕ್ಕೆ, ಒಂದು ವರ್ಷಕ್ಕೂ ಹೆಚ್ಚು ಕಾಲ ವಾಹನವನ್ನು ನಿರ್ವಹಿಸುತ್ತಿರುವುದು ಕಂಡುಬಂದರೆ ಮಾಲೀಕರು ಇಲ್ಲಿ ರಸ್ತೆ ತೆರಿಗೆಯನ್ನು ಪಾವತಿಸಬೇಕು. ಬಾಬು ಸುಮಾರು ಎರಡು ವರ್ಷಗಳಿಂದ ವಾಹನಗಳನ್ನು ಬಳಸುತ್ತಿದ್ದಾರೆ. ಆರ್‌ಟಿಒ ಅಧಿಕಾರಿಗಳು ಬಾಬು ವಿರುದ್ಧ ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಿದ್ದಾರೆ"ಎಂದು ಶೋಭಾ ಹೇಳಿದರು.
ಬಾಬು ಆರಂಭದಲ್ಲಿ ಕರ್ನಾಟಕದಲ್ಲಿ ವಾಹನಗಳನ್ನು ಶಾಶ್ವತವಾಗಿ ಬಳಸುತ್ತಿಲ್ಲ ಎಂದು ಹೇಳಿಕೊಂಡಿದ್ದರು ಹಾಗೂ ಅವುಗಳನ್ನು ಮಹಾರಾಷ್ಟ್ರಕ್ಕೆ ಹಿಂತಿರುಗಿಸಲಾಗುವುದು ಎಂದು ತಿಳಿಸಿದ್ದರು. ಆದರೆ ಅವುಗಳನ್ನು ಹಿಂತಿರುಗಿಸಿರಲಿಲ್ಲ. ಒಂದು ಕಾರಿನ ಮೇಲೆ ₹19.73 ಲಕ್ಷ ತೆರಿಗೆ ಬಾಕಿ ಇತ್ತು, ಇನ್ನೊಂದು ಕಾರಿನ ಮೇಲೆ ₹18.53 ಲಕ್ಷ ತೆರಿಗೆ ಬಾಕಿ ಇತ್ತು. ಎರಡೂ ವಾಹನಗಳ ವಿಳಂಬ ಪಾವತಿಗೆ ಅವರು ಒಂದೇ ಬಾರಿಗೆ ತೆರಿಗೆ ಮತ್ತು ದಂಡ ಪಾವತಿಸಿದ್ದಾರೆ ಎಂದು ಆರ್ ಟಿ ಒ ಅಧಿಕಾರಿ ಶೋಭಾ ಹೇಳಿದರು.