ಬೆಂಗಳೂರು ಕಾಲ್ತುಳಿತ  
ರಾಜ್ಯ

ಬೆಂಗಳೂರು ಕಾಲ್ತುಳಿತ ಪ್ರಕರಣ: ನ್ಯಾ. ಕುನ್ಹಾ ಆಯೋಗದ ವರದಿ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ DNA

ನ್ಯಾ.ಕುನ್ಹಾ ಅವರು ಆತುರದಿಂದ ತನಿಖೆ ನಡೆಸಿರುವುದನ್ನು ನೋಡಿದರೆ ಸರ್ಕಾರವು ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದು, ಸಾಮಾನ್ಯ ಜನರ ಕಣ್ಣೊರೆಸಲು ಆಯೋಗ ರಚನೆ ಮಾಡಿದಂತಿದೆ.

ಬೆಂಗಳೂರು: ಜೂನ್ 4 ರಂದು 11 ಜೀವಗಳನ್ನು ಬಲಿ ಪಡೆದ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಘಟನೆಯ ಕುರಿತು ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ'ಕುನ್ಹಾ ಆಯೋಗ ಸಲ್ಲಿಸಿರುವ ವರದಿಯನ್ನು ರದ್ದುಗೊಳಿಸುವಂತೆ ಕೋರಿ ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್ಸ್‌ ಪ್ರೈವೇಟ್‌ ಲಿಮಿಟೆಡ್‌ ಹೈಕೋರ್ಟ್‌ ಮೆಟ್ಟಿಲೇರಿದೆ.

ಆಯೋಗವು ಸತ್ಯ ಶೋಧನಾ ಆಯೋಗದಂತೆ ವರ್ತಿಸುವ ಬದಲು ತಪ್ಪು ಶೋಧನಾ ಆಯೋಗದಂತೆ ವರ್ತಿಸಿದೆ ಎಂದು ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್ಸ್‌ ಪ್ರೈವೇಟ್‌ ಲಿಮಿಟೆಡ್‌ ಅರ್ಜಿಯಲ್ಲಿ ತಿಳಿಸಿದೆ.

ವರದಿಯ ಆಧಾರದ ಮೇಲೆ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ರಾಜ್ಯಕ್ಕೆ ನಿರ್ದೇಶನಗಳನ್ನು ನೀಡಬೇಕೆಂದು ಕಂಪನಿಯು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಮೆಸರ್ಸ್‌ ಬಿ.ಕೆ.ಸಂಪತ್‌ ಕುಮಾರ್‌ ಅಂಡ್‌ ಅಸೋಸಿಯೇಟ್ಸ್‌ ಮೂಲಕ ಡಿಎನ್‌ಎ ಎಂಟರ್​ಟೈನ್‌ಮೆಂಟ್‌ನ ನಿರ್ದೇಶಕ ಸುನಿಲ್‌ ಮ್ಯಾಥ್ಯೂ ಅವರು ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ನ್ಯಾ.ಕುನ್ಹಾ ಅವರು ಆತುರದಿಂದ ತನಿಖೆ ನಡೆಸಿರುವುದನ್ನು ನೋಡಿದರೆ ಸರ್ಕಾರವು ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದು, ಸಾಮಾನ್ಯ ಜನರ ಕಣ್ಣೊರೆಸಲು ಆಯೋಗ ರಚನೆ ಮಾಡಿದಂತಿದೆ. ಪ್ರಕರಣದಿಂದ ನುಣುಚಿಕೊಂಡು ಅರ್ಜಿದಾರರಂಥ ಅಮಾಯಕರನ್ನು ಪ್ರಕರಣದಲ್ಲಿ ಸಿಲುಕಿಸುವ ಉದ್ದೇಶ ಹೊಂದಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಕಾಲ್ತುಳಿತ ಪ್ರಕರಣವು ಕ್ರೀಡಾಂಗಣದ ಹೊರಗೆ ನಡೆದಿದ್ದು, ತಾನು ಕಾರ್ಯಕ್ರಮದ ಜವಾಬ್ದಾರಿಯನ್ನು ಕ್ರೀಡಾಂಗಣದ ಒಳಗೆ ಒಪ್ಪಿಕೊಂಡಿದ್ದು ಎಂಬುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಆಯೋಗಕ್ಕೆ ಸಲ್ಲಿಸಲಾಗಿದೆ. ಘಟನೆ ನಡೆದಿರುವ ಪ್ರದೇಶವು ಸರ್ಕಾರ ಮತ್ತು ಪೊಲೀಸರ ವ್ಯಾಪ್ತಿಗೆ ಒಳಪಟ್ಟಿದೆ. ಈ ಸಂಬಂಧ ತಾನು ಸಲ್ಲಿಸಿರುವ ದಾಖಲೆಗಳನ್ನು ಆಯೋಗ ಗಮನಕ್ಕೆ ತೆಗೆದುಕೊಂಡಿಲ್ಲ ಎಂದು ಆರೋಪಿಸಲಾಗಿದೆ.

ಸರ್ಕಾರದ ಅನುಮತಿಯ ಮೇರೆಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಒಂದೊಮ್ಮೆ ಅನುಮತಿ ನಿರಾಕರಿಸಿದ್ದರೆ ಪೊಲೀಸರು ಕಾರ್ಯಕ್ರಮ ಆಯೋಜಿಸುವುದಕ್ಕೆ ತಡೆಯೊಡ್ಡಬೇಕಿತ್ತು. ಆದರೆ, ಬಂದೋಬಸ್ತ್‌ ಕಲ್ಪಿಸಿ, ಶುಲ್ಕ ಸಂಗ್ರಹಿಸುವುದು ಸೇರಿ ಹಲವು ಕ್ರಮಗಳನ್ನು ಅವರು ಕೈಗೊಂಡಿದ್ದರು. ಸರ್ಕಾರದ ಪ್ರಮುಖರ ಸಮ್ಮುಖದಲ್ಲಿ ವಿಧಾನಸೌಧದ ಮುಂಭಾಗದಲ್ಲಿ ಕಾರ್ಯಕ್ರಮ ನಡೆದಿದೆ. ಆ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆದಿದೆ. ಸರ್ಕಾರ, ಪೊಲೀಸರು ಮಾಡಿರುವ ಟ್ವೀಟ್‌, ಸಂಚಾರ ದಟ್ಟಣೆಯ ಸೂಚನೆಗಳು, ಅಗ್ನಿಶಾಮಕ ದಳ ಸಿಬ್ಬಂದಿಯ ಹಾಜರಿ ಸಾಕ್ಷಿಯಾಗಿದೆ.

ಅಂತಿಮ ವರದಿಯನ್ನು ನೀಡುವ ಮೊದಲು ಆಯೋಗವು ವೈಯಕ್ತಿಕ ವಿಚಾರಣೆಯನ್ನು ಸಹ ಕೋರಿತ್ತು. ಆದಾಗ್ಯೂ, 1952 ರ ವಿಚಾರಣಾ ಆಯೋಗ ಕಾಯ್ದೆಯಡಿಯಲ್ಲಿ ಯಾವುದೇ ಅವಕಾಶವನ್ನು ಒದಗಿಸದೆ ಮತ್ತು ವಿನಂತಿಗಳಿಗೆ ಸ್ಪಂದಿಸದೆ, ಆಯೋಗವು ಜುಲೈ 11 ರಂದು ಕಾಯ್ದೆಯಡಿಯಲ್ಲಿ ಉದ್ದೇಶಿಸಲಾದ ಕಾರ್ಯವಿಧಾನವನ್ನು ಅನುಸರಿಸದೆ ತನ್ನ ವರದಿಯನ್ನು ಸಲ್ಲಿಸಿದೆ. ಹೀಗಾಗಿ, ಆಯೋಗದ ವರದಿ ಆಧರಿಸಿ ತೆಗೆದುಕೊಳ್ಳುವ ಕ್ರಮಕ್ಕೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಈ ಅರ್ಜಿಯು ಶುಕ್ರವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಮತ್ತೊಂದು ಬೃಹತ್ ದರೋಡೆ: ವಿಜಯಪುರ SBI ಬ್ಯಾಂಕ್‌ ಸಿಬ್ಬಂದಿ ಕಟ್ಟಿಹಾಕಿ, 8 ಕೋಟಿ ಹಣ, 50 ಕೋಟಿ ಚಿನ್ನಾಭರಣ ಕಳವು?

ಕ್ರೈಸ್ತ ಬ್ರಾಹ್ಮಣ, ಕ್ರೈಸ್ತ ಒಕ್ಕಲಿಗ, ಕ್ರೈಸ್ತ ಕುರುಬ Hindu ಉಪಜಾತಿ ಸೇರ್ಪಡೆ ವಿರುದ್ಧ ರಾಜ್ಯಪಾಲರಿಗೆ BJP ದೂರು!

ಸು...ರ್ ಕುಮಾರ್: ಹಸ್ತ ಲಾಘವ ಕೊಡದ ಟೀಂ ಇಂಡಿಯಾ ನಾಯಕನಿಗೆ ಅವಹೇಳನಕಾರಿ ಶಬ್ದದಿಂದ ನಿಂದಿಸಿದ ಪಾಕ್ ಮಾಜಿ ಕ್ರಿಕೆಟಿಗ

75ರ ವಸಂತಕ್ಕೆ ಕಾಲಿಡುತ್ತಿರುವ ನರೇಂದ್ರ ಮೋದಿ: ಜನರ ಪ್ರಧಾನಿಯ ಏಳು ಬೀಳುಗಳ ಸ್ಮರಣೀಯ ಪ್ರಯಾಣ

ಹಿಮಾಚಲದಲ್ಲಿ ವಿನಾಶ: ಮೇಘಸ್ಫೋಟ-ಭೂಕುಸಿತ; 13 ಮಂದಿ ಸಾವು, 16ಕ್ಕೂ ಹೆಚ್ಚು ಮಂದಿ ನಾಪತ್ತೆ, SDRF ಕಾರ್ಯಾಚರಣೆ!

SCROLL FOR NEXT