ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ನಿಗೂಢ ಸರಣಿ ಸಾವುಗಳ ತನಿಖೆಗಾಗಿ ಕರ್ನಾಟಕ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಬೆಳ್ತಂಗಡಿಯಿಂದ ಕಾರ್ಯನಿರ್ವಹಿಸಲು ಆರಂಭಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಧರ್ಮಸ್ಥಳ ಪಟ್ಟಣದ ನಿವಾಸಿಯೊಬ್ಬರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸಲ್ಲಿಸಿದ ದೂರಿನ ಮೇರೆಗೆ ಎಸ್‌ಐಟಿ ರಚಿಸಲಾಗಿದ್ದು, ನಿಗೂಢ ಸರಣಿ ಸಾವು, ಅಕ್ರಮ ಬಂಧನ, ಕಸ್ಟಡಿ ಚಿತ್ರಹಿಂಸೆ, ಸುಲಿಗೆ ಮತ್ತು ಆಸ್ತಿ ಸಂಬಂಧಿತ ಅಕ್ರಮಗಳು ಸೇರಿದಂತೆ ಗಂಭೀರ ಅಪರಾಧಗಳ ಬಗ್ಗೆ ತನಿಖೆ ನಡೆಸಲಿದೆ.
ದೂರುದಾರರ ಸುರಕ್ಷತೆ ಮತ್ತು ಸುಗಮ ತನಿಖೆಯನ್ನು ಖಚಿತಪಡಿಸಿಕೊಳ್ಳಲು, ಎಸ್ಐಟಿ ತನ್ನ ಕಚೇರಿಯನ್ನು ಧರ್ಮಸ್ಥಳದ ಬದಲಿಗೆ ಬೆಳ್ತಂಗಡಿಯಲ್ಲಿ ಆರಂಭಿಸಿದೆ.
ಬೆಳ್ತಂಗಡಿ ಪೊಲೀಸ್ ಠಾಣೆಯ ಸಮೀಪವೇ ನೂತನವಾಗಿ ನಿರ್ಮಾಣಗೊಂಡಿರುವ ಪೊಲೀಸ್ ವಸತಿ ಗೃಹವನ್ನೇ ಎಸ್ಐಟಿ ಕೇಂದ್ರವಾಗಿ ಮಾಡಲಾಗುತ್ತಿದೆ. ಇಂದೇ ಬೆಳ್ತಂಗಡಿಯಲ್ಲಿ ಎಸ್ಐಟಿ ಕಚೇರಿ ಆರಂಭವಾಗಿದೆ.
ಈ ಕಚೇರಿಯಿಂದಲೇ ಎಸ್‌ಐಟಿ ತನಿಖೆ ಆರಂಭಿಸಲಿದ್ದು, ಶವಗಳನ್ನು ಹೂತಿರುವ ಪ್ರಕರಣದೊಂದಿಗೆ ಇನ್ನಷ್ಟು ದೂರುಗಳು ಎಸ್‌ಐಟಿ ಕಚೇರಿಯಲ್ಲಿ ದಾಖಲಾಗುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ, ಎಸ್‌ಐಟಿ ಮುಖ್ಯಸ್ಥ ಡಿಜಿಪಿ ಪ್ರಣವ್ ಮೊಹಾಂತಿ ನೇತೃತ್ವದ ಅಧಿಕಾರಿಗಳ ತಂಡ ಈಗಾಗಲೇ ಔಪಚಾರಿಕ ಪ್ರಕ್ರಿಯೆಗಳನ್ನು ಪ್ರಾರಂಭಿಸಿದೆ, ಆರೋಪಗಳಿಗೆ ಸಂಬಂಧಿಸಿದ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸುತ್ತಿದೆ ಮತ್ತು ಶೀಘ್ರದಲ್ಲೇ ಹೇಳಿಕೆಗಳನ್ನು ದಾಖಲಿಸಲು ಯೋಜಿಸಿದೆ.