ಬೆಂಗಳೂರು: ನಗರದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರ ದರ್ಪಕ್ಕೆ ಬಾಡಿಗೆದಾರ ವ್ಯಕ್ತಿಯೋರ್ವ ಶಾಶ್ವತವಾಗಿ ಕಿವುಡನಾಗಿರುವ ಆರೋಪ ಕೇಳಿಬಂದಿದೆ.
ಬೇಗೂರಿನಲ್ಲಿ ಈ ಘಟನೆ ನಡೆದಿದ್ದು, PSI ಪುನೀತ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಮನೆ ಖಾಲಿ ಮಾಡುವ ವಿಚಾರಕ್ಕೆ ಬಾಡಿಗೆದಾರ ಉದಯ್ ಮೇಲೆ ಪುನೀತ್ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಪಿಎಸ್‌ಐ ಕಪಾಳ ಮೋಕ್ಷಕ್ಕೆ ಉದಯ್‌ಗೆ ಕಿವಿ ಕೇಳಿಸದೆ ಶ್ರವಣ ದೋಷವಾಗಿದೆ ಎಂಬುದು ವೈದ್ಯಕೀಯ ವರದಿಯಲ್ಲಿ ದೃಢವಾಗಿದೆ. ಉದಯ್ ಪರ ವಕೀಲರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಸಿವಿಲ್ ವ್ಯಾಜ್ಯದಲ್ಲಿ ಪೊಲೀಸರು ಮದ್ಯ ಪ್ರವೇಶ ಮಾಡಿದ್ದು, ಉದಯ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ. ವೈದ್ಯಕೀಯ ಪರೀಕ್ಷೆ ವೇಳೆ ಎಡಕಿವಿ ಸಂಪೂರ್ಣ ಶ್ರವಣ ದೋಷವಾಗಿರುವ ವರದಿ ಕೂಡ ದೂರಿನ ಜೊತೆ ಸಲ್ಲಿಸಲಾಗಿದೆ.
ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಪಿಎಸ್‌ಐ ಮೇಲೆ ಕ್ರಮ ಆಗದ ಹಿನ್ನೆಲೆಯಲ್ಲಿ ಉದಯ್ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ.