ಮೈಸೂರು: ಮೈಸೂರಿಗೆ ನಾಲ್ವಡಿಗಿಂತಲೂ ಸಿದ್ದರಾಮಯ್ಯ ಕೊಡುಗೆ ಜಾಸ್ತಿ ಎಂಬ ಹೇಳಿಕೆಗೆ ಸಿಎಂ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು ಯಾವುದೇ ಕಾರಣಕ್ಕೂ ಕ್ಷಮೆ ಕೇಳೋದಿಲ್ಲ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ನಾಲ್ವಡಿ ಅವರ ಕೊಡುಗೆಗಳನ್ನ ಗೌಣ ಮಾಡಬೇಕು ಅಂತ ಹೇಳಿಲ್ಲ. ಮೈಸೂರು ಅಭಿವೃದ್ಧಿಗೆ ನಾಲ್ವಡಿ ಅವರನ್ನ ಬಿಟ್ರೆ ಹೆಚ್ಚು ಅನುದಾನ ಕೊಟ್ಟಿರುವುದು ಸಿಎಂ ಸಿದ್ದರಾಮಯ್ಯ ಅಂತ ಹೇಳಿದ್ದೇನೆ.
ನಮ್ಮಪ್ಪ ಮುಖ್ಯಮಂತ್ರಿಯಾದ ಮೇಲೆ ಕೊಟ್ಟಷ್ಟು ಅನುದಾನವನ್ನ ಬೇರೆ ಯಾವ ಮುಖ್ಯಮಂತ್ರಿಗಳೂ ಕೊಟ್ಟಿಲ್ಲ. ಅದನ್ನ ಮಾತ್ರ ನಾನು ಹೇಳಿದ್ದು. ಬಹಿರಂಗವಾಗಿ ಕ್ಷಮೆ ಕೇಳುವುದಿಲ್ಲ ಎಂದು ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಯತೀಂದ್ರ ಹೇಳಿಕೆಗೆ ಬಿಜೆಪಿ, ಜೆಡಿಎಸ್ ನಾಯಕರು ಅಷ್ಟೇ ಅಲ್ಲದೇ, ಜನಸಾಮಾನ್ಯರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯತೀಂದ್ರ ಹೇಳಿಕೆ ಎಲ್ಲಾ ಮಾಧ್ಯಮಗಳಲ್ಲೂ ಪ್ರಸಾರವಾಗಿದ್ದು, ಸೋಶಿಯಲ್ ಮೀಡಿಯಾಗಳಲ್ಲೂ ವೈರಲ್ ಆಗಿತ್ತು. ಇಷ್ಟೆಲ್ಲಾ ಆದ ಮೇಲೆ ರಾಜಕಾರಣಿಗಳ ಹಳೆ ಸ್ಟೈಲ್‌ನಲ್ಲೇ ಯತೀಂದ್ರ ಉಲ್ಟಾ ಹೊಡೆದಿದ್ದಾರೆ. ನನ್ನ ಹೇಳಿಕೆ ತಿರುಚಲಾಗಿದೆ ಹಾಗಾಗಿ ಬಹಿರಂಗ ಕ್ಷಮೆ ಕೇಳುವ ಅಗತ್ಯವೂ ಇಲ್ಲ ಎಂದಿದ್ದಾರೆ.
ಇದನ್ನು ದೊಡ್ಡ ವಿಷಯ ಮಾಡುವ ಅವಶ್ಯಕತೆ ಇಲ್ಲ. ಸಣ್ಣ ವಿಚಾರವನ್ನ ತೆಗೆದುಕೊಂಡು ಎಲ್ಲರೂ ಚರ್ಚೆ ಮಾಡುತ್ತಿದ್ದಾರೆ. ನಾನು ಯಾವುದೇ ದುರುದ್ದೇಶ ಇಟ್ಟುಕೊಂಡು ಹೇಳಿದ ಹೇಳಿಕೆಯಲ್ಲ. ನಾಲ್ವಡಿಯವರ ಬಗ್ಗೆ ಸಾಕಷ್ಟು ಗೌರವ ಇದೆ. ಅವರ ಆಡಳಿತ ಎಲ್ಲರಿಗೂ ಸ್ಫೂರ್ತಿ ಎಂದರು.
ನನ್ನ ಹೇಳಿಕೆಗೆ ಏನೇ ಆಕ್ಷೇಪಗಳು ಬಂದ್ರು ಬರಲಿ. ನನ್ನ ಹೇಳಿಕೆಯನ್ನ ತಪ್ಪಾಗಿ ಗ್ರಹಿಸಿದ್ದಾರೆ. ನಾಲ್ವಡಿ ಅವರಿಗೆ ಅವಮಾನ ಮಾಡುವ ದೃಷ್ಟಿಯಿಂದ ಹೇಳಿಕೆ ಕೊಟ್ಟಿಲ್ಲ. ನಾಲ್ವಡಿ ಅವರು ಕೊಟ್ಟಂತಹ ಕೊಡುಗೆಗಳು ಮೈಸೂರು ಹಾಗೂ ಕರ್ನಾಟಕಕ್ಕೆ ಸಾಕಷ್ಟು ಇದೆ ಎಂದು ಸ್ಪಷ್ಟ ಪಡಿಸಿದ್ದಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಿದ್ದರಾಮಯ್ಯರನ್ನು ಹೋಲಿಸಿ, ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಮಾತನಾಡಿದ್ದರು. ಮೈಸೂರಿಗೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಕೊಟ್ಟಂತ ಅನುದಾನ ಬಿಟ್ರೆ ಇನ್ಯಾವ ಅನುದಾನ ಕೂಡ ಬಂದಿಲ್ಲ. ಸೋ ನಾಲ್ವಡಿ ಕೃಷ್ಣರಾಜ ಮಹಾರಾಜರು ಮೈಸೂರಿಗೆ ಎಷ್ಟು ಡೆವಲಪ್‌ಮೆಂಟ್ ಮಾಡಿದ್ದಾರೆ ಅದಕ್ಕಿಂತ ಹೆಚ್ಚು ಅಥವಾ ಅದರಷ್ಟೇ ಅನುದಾನವನ್ನು ಸಿದ್ದರಾಮಯ್ಯ ಸರ್ಕಾರ ನೀಡಿದೆ ಎಂದು ಹೇಳಿದ್ದರು.