ನಟ ದರ್ಶನ್ ಅಭಿಮಾನಿಗಳು ತಮಗೆ ಅಶ್ಲೀಲವಾಗಿ ಕಮೆಂಟ್ ಮಾಡಿ, ಅಸಭ್ಯ ಸಂದೇಶಗಳನ್ನು ಕಳಿಸಿದ ಹಿನ್ನೆಲೆಯಲ್ಲಿ ನಟಿ ರಮ್ಯಾ ಬೆಂಗಳೂರು ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದಾರೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಹೇಳಿದ್ದ ರಮ್ಯಾ ವಿರುದ್ಧ ದರ್ಶನ್ ಅಭಿಮಾನಿಗಳು ಟ್ರೋಲ್ ಮಾಡಲು ಆರಂಭಿಸಿ ಸೋಶಿಯಲ್ ಮೀಡಿಯಾದಲ್ಲಿ ರಮ್ಯಾಗೆ ಅಶ್ಲೀಲವಾಗಿ ಕಮೆಂಟ್ ಮಾಡಿ, ಅಸಭ್ಯ ಸಂದೇಶಗಳನ್ನು ಕಳಿಸಿದ್ದರು. ‘ರೇಣುಕಾಸ್ವಾಮಿ ಮಾಡಿದ್ದ ಸಂದೇಶಕ್ಕೂ ದರ್ಶನ್ ಅಭಿಮಾನಿಗಳು ಮಾಡುವ ಸಂದೇಶಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ಇಂಥ ಸ್ತ್ರೀದ್ವೇಷಿ ಮನಸ್ಥಿತಿಯ ಕಾರಣದಿಂದಲೇ ಸಮಾಜದಲ್ಲಿ ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ’ ಕೆಟ್ಟ ಕಮೆಂಟ್ ಮಾಡುವವರಿಗೆ ಪಾಠ ಕಲಿಸಲು 43 ಖಾತೆಗಳ ವಿರುದ್ಧ ದೂರು ನೀಡಿದ್ದು, ನನ್ನ ದೂರನ್ನು ಕಮಿಷನರ್ ಸ್ವೀಕರಿಸಿದ್ದಾರೆ. ದರ್ಶನ್ ಸುಮ್ಮನೆ ಇದ್ದು ತಪ್ಪು ಮಾಡಿದ್ದಾರೆ, ಫ್ಯಾನ್ಸ್ ಗೆ ಇದು ತಪ್ಪು ಎಂದು ಹೇಳಬೇಕಲ್ವಾ? ಎಂದು ರಮ್ಯಾ ಹೇಳಿದ್ದಾರೆ. ಇದೇ ವೇಳೆ ರಮ್ಯಾ ನೆರವಿಗೆ ಧಾವಿಸಿರುವ ರಾಜ್ಯ ಮಹಿಳಾ ಆಯೋಗ ಅಶ್ಲೀಲ ಕಮೆಂಟ್ಗಳ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಕೂಡ ಪೊಲೀಸ್ ಆಯುಕ್ತರಿಗೆ ಸೂಚಿಸಿದೆ.
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ಅಮಾನತು ಆದೇಶವನ್ನು ಸರ್ಕಾರ ಹಿಂಪಡೆದಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್, ಡಿಸಿಪಿ ಶೇಖರ್, ಎಸಿಪಿ ಎಚ್.ಟಿ.ಬಾಲಕೃಷ್ಣ ಹಾಗೂ ಕಬ್ಬನ್ ಪಾರ್ಕ್ ಠಾಣೆಯ ಇನ್‌ಸ್ಪೆಕ್ಟರ್ ಗಿರೀಶ್ ಅವರ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆದುಕೊಂಡಿದೆ. ನಿಯಾಮವಳಿ ಪ್ರಕಾರ ಅಮಾನತು ಆದೇಶ ರದ್ದುಗೊಳಿಸಿ ನಾಲ್ವರ ವಿರುದ್ಧ ಇಲಾಖಾ ತನಿಖೆಗೆ ಆದೇಶ ಹೊರಡಿಸಿದೆ. ವಿಕಾಸ್ ಕುಮಾರ್ ವಿಕಾಸ್ ಅವರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ಈ ಹಿಂದೆಯೇ ರದ್ದುಗೊಳಿಸಿತ್ತು.
ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಎಸ್‌ಐಟಿ ತಂಡ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಸೋಮವಾರ ಭಾರಿ ಭದ್ರತೆಯ ನಡುವೆ ಸಾಕ್ಷಿ-ದೂರುದಾರರ ಸಮ್ಮುಖದಲ್ಲಿ ಮೃತದೇಹಗಳನ್ನು ಹೂತಿದ್ದ ಸ್ಥಳದ ಪರಿಶೀಲನೆ ನಡೆಸಿದೆ. ನಾವು ಇಂದು ಕ್ಷೇತ್ರ ಕಾರ್ಯವನ್ನು ಪ್ರಾರಂಭಿಸಿದ್ದೇವೆ ಮತ್ತು ಅವರು ಹೇಳಿರುವ ಎಲ್ಲ ಸಮಾಧಿ ಮಾಡಿರುವ ಕಡೆಗಳಲ್ಲಿ ಸ್ಥಳ ಮಹಜರು ನಡೆಸುತ್ತೇವೆ. ಮೂಲಗಳ ಪ್ರಕಾರ, ದೂರುದಾರರು ತೋರಿಸಿರುವ ಸಮಾಧಿ ಸ್ಥಳಗಳನ್ನು ಗುರುತಿಸಲಾಗುತ್ತದೆ ಮತ್ತು ಸುರಕ್ಷಿತಗೊಳಿಸಲಾಗುತ್ತದೆ. ಅಸ್ಥಿಪಂಜರದ ಅವಶೇಷಗಳನ್ನು ಹೊರತೆಗೆಯುವ ಮೊದಲು ಸಾಕ್ಷ್ಯಗಳನ್ನು ಹಾಳು ಮಾಡುವುದನ್ನು ತಪ್ಪಿಸಲು ಅಲ್ಲಿಗೆ ಪ್ರವೇಶವನ್ನು ನಿಷೇಧಿಸಲಾಗುತ್ತದೆ. ಎಂದು ತನಿಖಾ ತಂಡದ ಅಧಿಕೃತ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದೆ.
ಮೈಸೂರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗಿಂತಲೂ ಸಿದ್ದರಾಮಯ್ಯ ಕೊಡುಗೆ ಜಾಸ್ತಿ ಎಂಬ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು ಯಾವುದೇ ಕಾರಣಕ್ಕೂ ಕ್ಷಮೆ ಕೇಳೋದಿಲ್ಲ ಎಂದು ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ನಾಲ್ವಡಿ ಅವರ ಕೊಡುಗೆಗಳನ್ನ ಗೌಣ ಮಾಡಬೇಕು ಎಂದು ಹೇಳಿಲ್ಲ. ಮೈಸೂರು ಅಭಿವೃದ್ಧಿಗೆ ನಾಲ್ವಡಿ ಅವರನ್ನ ಬಿಟ್ರೆ ಹೆಚ್ಚು ಅನುದಾನ ಕೊಟ್ಟಿರುವುದು ಸಿಎಂ ಸಿದ್ದರಾಮಯ್ಯ ಅಂತ ಹೇಳಿದ್ದೇನೆ. ಬಹಿರಂಗವಾಗಿ ಕ್ಷಮೆ ಕೇಳುವುದಿಲ್ಲ ಎಂದು ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಸಿಂಥೆಟಿಕ್ ಡ್ರಗ್ಸ್ ಎಂಡಿಎಂಎ ತಯಾರಿಕಾ ಘಟಕ ಪತ್ತೆಯಾಗಿದ್ದು, ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಖಚಿತ ಮಾಹಿತಿ ಮೇರೆಗೆ ಮಹಾರಾಷ್ಟ್ರ ಪೊಲೀಸರು, ಮೈಸೂರು ಪೊಲೀಸರ ಸಹಯೋಗದಲ್ಲಿ ಮೈಸೂರಿನ ಹೊರವಲಯದ ರಿಂಗ್‌ರಸ್ತೆಯಲ್ಲಿರುವ ಎಂಡಿಎಂಎ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿ, ಆರು ಮಂದಿಯನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರ ಪೊಲೀಸರು ಡ್ರಗ್ಸ್ ತಯಾರಿಕಾ ಘಟಕದ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ ವೇಳೆ ಕೋಟ್ಯಂತರ ರೂ. ಮೌಲ್ಯದ ಎಂಡಿಎಂಎ ಹಾಗೂ ಅದರ ತಯಾರಿಕೆಗೆ ಬಳಕೆ ಮಾಡಲು ಸಂಗ್ರಹಿಸಿಟ್ಟಿದ್ದ ಕಚ್ಚಾ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಮೈಸೂರಿನಲ್ಲಿ ಪತ್ತೆಯಾದ ಮಾದಕ ವಸ್ತುವಿಗೆ ಮಹಾರಾಷ್ಟ್ರದ ನಂಟು ಇದ್ದು, ಮಹಾರಾಷ್ಟ್ರದಲ್ಲಿ ಸೆರೆಯಾದ ಡ್ರಗ್ ಪೆಡ್ಲರ್‌ನಿಂದ ಈ ಮಾಹಿತಿ ಬಹಿರಂಗವಾಗಿತ್ತು.