ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಮಹಿಳೆಯರ ಸುರಕ್ಷತೆ ಕುರಿತು ಪ್ರಶ್ನೆ ಎದ್ದಿದ್ದು, ಮೂವರು ಪುಂಡರ ಗ್ಯಾಂಗ್ ವೊಂದು ಯುವತಿಯರನ್ನು ಹಿಂಬಾಲಿಸುತ್ತಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಮೂರು ಮಂದಿ ಪುಂಡರ ಗ್ಯಾಂಗ್ ವೊಂದು ಹೊಟೆಲ್ ನಲ್ಲಿ ತಿಂಡಿ ಸೇವಿಸುತ್ತಿದ್ದ ಯುವತಿಯರನ್ನು ಹಿಂಬಾಲಿಸುತ್ತಿದ್ದು, ಈ ಕುರಿತು ಯುವತಿಯರೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು suha_hana88 ಎಂಬ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಯುವತಿ ತಮ್ಮ ಕರಾಳ ಅನುಭವವನ್ನು ಹಂಚಿಕೊಂಡಿದ್ದು ಮಾತ್ರವಲ್ಲದೇ ಹಿಂಬಾಲಿಸುತ್ತಿರುವ ದುಷ್ಕರ್ಮಿಗಳನ್ನೂ ಕ್ಯಾಮೆರಾದಲ್ಲಿ ಸೆರೆಹಿಡಿದ್ದಾರೆ. ಅಲ್ಲದೆ ನಗರದಲ್ಲಿ ಹೆಣ್ಣುಮಕ್ಕಳು ಧೈರ್ಯವಾಗಿ ಹೊರಗೆ ಓಡಾಡುವುದೇ ಕಷ್ಟಕರವಾಗಿದೆ ಎಂದು ಆಕ್ರೋಶ ವ್ಚಕ್ತಪಡಿಸಿದ್ದಾರೆ.
ಇಷ್ಟಕ್ಕೂ ಆಗಿದ್ದೇನು?
ಬೆಂಗಳೂರಿನ ರಾಮೇಶ್ವರಂ ಕೆಫೆ ಬಳಿ ಮೂವರು ಯುವತಿಯರು ತಿಂಡಿ ಸೇವಿಸುತ್ತಿದ್ದ ವೇಳೆ ಅಲ್ಲಿಯೇ ಆಹಾರ ಸೇವಿಸುತ್ತಿದ್ದ ಮೂರು ಪುಂಡರ ಗ್ಯಾಂಗ್ ಅವರನ್ನು ನೋಡಿದೆ. ಬಳಿಕ ಈ ಗ್ಯಾಂಗ್ ತಮ್ಮ ಕಾರಿನಲ್ಲಿ ಯುವತಿಯರನ್ನು ಹಿಂಬಾಲಿಸಿದೆ. ಕೆಲಕ್ಷಣದವರೆಗೂ ಯುವತಿಯರಿಗೆ ಇದು ಗಮನಕ್ಕೆ ಬಂದಿರಲಿಲ್ಲ.
ಯಾವಾಗ ಯುವತಿಯರು ಆಟೋ ಬುಕ್ ಮಾಡಿಕೊಂಡು ತಮ್ಮ ಪಿಜೆಗೆ ತೆರಳಲು ಆರಂಭಿಸಿದರೋ ಆಗ ಮತ್ತೆ ಕಾರಿನಲ್ಲಿ ಅದೇ ಪುಂಡರು ಬರುತ್ತಿರುವುದನ್ನು ನೋಡಿದ್ದಾರೆ. ಕೂಡಲೇ ಈ ಪೈಕಿ ಓರ್ವ ಯುವತಿ ತನ್ನ ಮೊಬೈಲ್ ನಲ್ಲಿ ಪುಂಡರ ಚಲನವಲನವನ್ನು ಸೆರೆ ಹಿಡಿದಿದ್ದಾರೆ.
ವಿಡಿಯೋ ವೈರಲ್
ಯುವತಿಯರನ್ನು ಮೂವರು ಪುರುಷರು ಹಿಂಬಾಲಿಸಿ ಬೆನ್ನಟ್ಟುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಕೆಟ್ಟ ಅನುಭವದಿಂದಾಗಿ ತಮಗೆ ಭೂಮಿ "ನಡುಗಿದ, ಭಯನಕ ಅನುಭವವಾಗಿದೆ ಎಂದು ಯುವತಿಯರು ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ ತಾವು ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದೇವೆ" ಎಂದು ಯುವತಿಯರು ವಿವರಿಸಿದ್ದಾರೆ.
ಯುವತಿಯರು ಪ್ರಯಾಣಿಸುತ್ತಿದ್ದ ಆಟೋ ಚಾಲಕ ಅವರಿಗೆ ಸಹಾಯ ಮಾಡಲು ಆಸಕ್ತಿ ತೋರುತ್ತಿಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ. ಮಹಿಳೆಯರು ಜೆಪಿ ನಗರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಪ್ರಾರಂಭವಾಯಿತು ಮತ್ತು ಅವರು ರಾಪಿಡೋ (ಬೈಕ್ ಟ್ಯಾಕ್ಸಿ ಸೇವೆ) ಹತ್ತಿದ ನಂತರವೂ ಮುಂದುವರೆಯಿತು ಎಂದು ವಿಡಿಯೋಜದಲ್ಲಿ ಹೇಳಿಕೊಂಡಿದ್ದಾರೆ. ಅಂತಿಮವಾಗಿ ಯುವತಿಯರು ಸುರಕ್ಷಿತವಾಗಿ ಮನೆ ತಲುಪಿರುವುದಾಗಿ ಹೇಳಿರುವುದರೊಂದಿಗೆ ವಿಡಿಯೋ ಕೊನೆಯಾಗುತ್ತದೆ.
ಈ ಪೋಸ್ಟ್ ಗೆ ಹಲವು ಮಂದಿ ಕಮೆಂಟ್ ಮಾಡುತ್ತಿದ್ದು, ಹಿಂಬಾಲಿಸುತ್ತಿದ್ದ ಯುವಕರನ್ನು ಹಿಡಿದು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಲವು ಒತ್ತಾಯಿಸುತ್ತಿದ್ದಾರೆ.