ಸುದ್ದಿ ಮುಖ್ಯಾಂಶಗಳು online desk
ರಾಜ್ಯ

News headlines 30-07-2025| ಮತ ವಂಚನೆ: ಚುನಾವಣಾ ಆಯೋಗದ ವಿರುದ್ಧ ಆ.04 ರಂದು ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಪ್ರತಿಭಟನೆ; ಇಂಧನ ಸಚಿವ KJ George ಆಪ್ತರ ಮನೆ ಮೇಲೆ IT ದಾಳಿ; ಯೂರಿಯಾ ಕೊರತೆ: ಮಣ್ಣು ತಿಂದು ರೈತರ ಪ್ರತಿಭಟನೆ

ಉಗ್ರ ನಂಟು: ಬೆಂಗಳೂರಿನಲ್ಲಿ ಮಹಿಳೆಯ ಬಂಧನ

ಉಗ್ರ ಚಟುವಟಿಕೆ ಹಾಗೂ ಉಗ್ರರಿಗೆ ಬೆಂಬಲ ನೀಡಿದ ಆರೋಪದಡಿ ನಗರದಲ್ಲಿ ತಲೆಮರೆಸಿಕೊಂಡಿದ್ದ ಶಂಕಿತ ಮಹಿಳೆಯನ್ನು ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಇಂದು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಜಾರ್ಖಂಡ್ ಮೂಲದ ಶಮಾ ಪರ್ವೀನ್ ಬಂಧಿತ ಮಹಿಳೆಯಾಗಿದ್ದು, ಈಕೆ ಹೆಬ್ಬಾಳದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಹೋದರನ ಮನೆಯಲ್ಲಿ ವಾಸವಿದ್ದರು. ಬೆಂಗಳೂರಿನಲ್ಲಿ ಅಲ್ ಖೈದಾ ಜಾಲವನ್ನು ಬಲಪಡಿಸುವಲ್ಲಿ ಆಕೆಯ ಪಾತ್ರವಿದೆ ಎಂದು ATS ತನಿಖೆ ಬಹಿರಂಗಪಡಿಸಿದೆ. ಆರೋಪಿಯಿಂದ ಡಿಜಿಟಲ್ ಉಪಕರಣಗಳು, ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‌ಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗುಜರಾತ್ ಎಟಿಎಸ್ ಈ ಹಿಂದೆ ಬಂಧನಕ್ಕೊಳಗಾಗಿದ್ದ ವ್ಯಕ್ತಿಗಳಿಂದ ಈಕೆಯ ಸುಳಿವು ದೊರೆತಿದೆ.

ಇಂಧನ ಸಚಿವ KJ George ಆಪ್ತರ ಮನೆ ಮೇಲೆ IT ದಾಳಿ

ಇಂಧನ ಸಚಿವ ಕೆ.ಜೆ ಜಾರ್ಜ್ ಅವರ ಆಪ್ತರ ಮನೆ ಮತ್ತು ಕಚೇರಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಳೆದ ಮೂರು ದಿನಗಳಿಂದ ಐಟಿ ಅಧಿಕಾರಿಗಳು ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿತೇಂದ್ರ ವಿರ್ವಾನಿ ಒಡೆತನದ ಎಂಬೆಸಿ ಗ್ರೂಪ್ ಮತ್ತು ಕೊತಾರಿ ಎಂಬುವವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ರಾಜ್ಯ ಸರ್ಕಾರದ ಟೆಂಡರ್‌ನಲ್ಲಿ ಅವ್ಯವಹಾರದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಇಂಧನ ಸಚಿವ ಕೆ.ಜೆ.ಜಾರ್ಜ್‌ ಸೇರಿ ಬೆಸ್ಕಾಂನ ಕೆಲ ಅಧಿಕಾರಿಗಳ ವಿರುದ್ಧ ಬಿಜೆಪಿ ನಾಯಕರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಈ ದಾಳಿ ನಡೆದಿದೆ.

ಧರ್ಮಸ್ಥಳ ಕೇಸ್: 5 ಸ್ಥಳಗಳಲ್ಲಿ ಅಗೆದರೂ ಸಿಗದ ಅವಶೇಷಗಳು

ಧರ್ಮಸ್ಥಳ ರಹಸ್ಯ ಸಮಾಧಿ ಪ್ರಕರಣದ ತನಿಖೆ ನಿರ್ಣಾಯಕ ಹಂತ ತಲುಪಿದೆ. ಪ್ರಕರಣದ ಸಾಕ್ಷಿ-ದೂರುದಾರನಾಗಿರುವ ವ್ಯಕ್ತಿ ಶವಗಳನ್ನು ಹೂತಿದ್ದ 13 ಸ್ಥಳಗಳನ್ನು ಅಧಿಕಾರಿಗಳಿಗೆ ತೋರಿಸಿದ್ದು ನಿನ್ನೆಯಿಂದ ಸಮಾಧಿ ಅಗೆಯುವ ಕಾರ್ಯ ಶುರುವಾಗಿದೆ. ಇಂದು 5 ಸಮಾಧಿ ಸ್ಥಳಗಳಲ್ಲಿ ಅಗೆಯುವ ಸಮಯದಲ್ಲಿ ಯಾವುದೇ ಮಾನವ ಅವಶೇಷಗಳು ಕಂಡುಬಂದಿಲ್ಲ. ಹೀಗಾಗಿ ಎಸ್‌ಐಟಿ ತನಿಖೆಯನ್ನು ದಿನದ ಮಟ್ಟಿಗೆ ಮುಕ್ತಾಯಗೊಳಿಸಿದೆ. ಇನ್ನು ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ತನಿಖೆ ನಡೆಸುತ್ತಿರುವ SIT ಮುಖ್ಯಸ್ಥ ರಾಜ್ಯದ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಪ್ರಣಬ್ ಮೊಹಾಂತಿ ಕೇಂದ್ರ ಸೇವೆಗೆ ಅರ್ಹತೆ ಪಡೆದ ಡಿಜಿಪಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈಗ ಮುಖ್ಯಸ್ಥರ ಬದಲಾವಣೆಯಾಗಲಿದೆಯೆ? ಎಂಬ ಬಗ್ಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಕಾನೂನು ಪ್ರಕಾರ, ಏನು ಮಾಡಬಹುದು ಎಂಬುದನ್ನು ಪರಿಶೀಲಿಸಲಾಗುತ್ತದೆ, ಕಾನೂನು ಅನುಮತಿಸಿದರೆ ಅವರು ಎಸ್‌ಐಟಿ ಮುಖ್ಯಸ್ಥರಾಗಿ ಮುಂದುವರಿಯಬಹುದು ಎಂದು ತಿಳಿಸಿದ್ದಾರೆ.

ಯೂರಿಯಾ ಸಿಗದೇ ಪರದಾಟ: ಮಣ್ಣು ತಿಂದು ರೈತರ ಪ್ರತಿಭಟನೆ

ಕರ್ನಾಟಕಕ್ಕೆ ಅಗತ್ಯವಿರುವ 1.35 ಲಕ್ಷ ಮೆಟ್ರಿಕ್ ಟನ್ ಯೂರಿಯಾವನ್ನು ಮುಂದಿನ 10 ರಿಂದ 15 ದಿನಗಳಲ್ಲಿ ಪೂರೈಸಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಜೆ ಪಿ ನಡ್ಡಾ ಭರವಸೆ ನೀಡಿದ್ದಾರೆ ಎಂದು ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಬುಧವಾರ ಹೇಳಿದ್ದಾರೆ. ಮತ್ತೊಂದೆಡೆ ರಸಗೊಬ್ಬರ ಪೂರೈಕೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಎಲ್ಲಿಯೂ ರಸಗೊಬ್ಬರ ಸಿಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತನೊಬ್ಬ ಮಣ್ಣು ತಿಂದು ಪ್ರತಿಭಟನೆ ನಡೆಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕುಣಿಕೇರಿ ತಾಂಡಾದ ಚಂದ್ರಪ್ಪ ಮತ್ತು ನೂರಾರು ರೈತರು ಯೂರಿಯಾ ಖರೀದಿಸಲು ಕೊಪ್ಪಳ ಎಪಿಎಂಸಿಯಲ್ಲಿ ಬೆಳಿಗ್ಗೆ 4 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ರಸಗೊಬ್ಬರಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದರು. ಆದರೆ, ಹಲವು ಗಂಟೆಗಳ ಕಾಲ ನಿಂತರೂ ಗೊಬ್ಬರ ಸಿಗದ ಕಾರಣ ಬರಿಗೈಯಲ್ಲಿ ವಾಪಸ್ಸಾಗಬೇಕಾಯಿತು. ಇದರಿಂದ ಸಿಟ್ಟಿಗೆದ್ದ ರೈತರು ಮಣ್ಣು ತಿಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ ವಂಚನೆ: ಚುನಾವಣಾ ಆಯೋಗದ ವಿರುದ್ಧ ಆ.04 ರಂದು ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಪ್ರತಿಭಟನೆ

ಮಹಾರಾಷ್ಟ್ರದಂತೆ ಕರ್ನಾಟಕದ ಒಂದು ಲೋಕಸಭಾ ಕ್ಷೇತ್ರದಲ್ಲೂ ಚುನಾವಣಾ ಆಯೋಗವು ಮತ ವಂಚನೆಗೆ ಅವಕಾಶ ನೀಡಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆಗಸ್ಟ್ 4 ರಂದು ಬೆಂಗಳೂರಿನಲ್ಲಿ ಚುನಾವಣಾ ಆಯೋಗ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಿಂದ ನಗರದಲ್ಲಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯವರೆಗೆ ಈ ಪಾದಯಾತ್ರೆ ನಡೆಯಲಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸಲಿರುವ ಪ್ರತಿಭಟನೆಯನ್ನು "ತಮಾಷೆ" ಎಂದು ಬಣ್ಣಿಸಿರುವ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ, ಚುನಾವಣಾ ಅಕ್ರಮ ನಡೆಯಲು ಸಾಧ್ಯವಾಗಿದ್ದರೆ, ಬಹುಶಃ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುತ್ತಿತ್ತು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಾಕ್ ಭದ್ರತಾ ಪಡೆ ಪ್ರಧಾನ ಕಚೇರಿ ಹೊರಗೆ ಕಾರ್ ಬಾಂಬ್ ಸ್ಫೋಟ; ಕನಿಷ್ಠ 10 ಮಂದಿ ಸಾವು

ಉಚಿತ ಔಷಧ ಯೋಜನೆ: ಕೆಮ್ಮಿನ ಸಿರಪ್ ಸೇವಿಸಿದ್ದ 5 ವರ್ಷದ ಬಾಲಕ ಸಾವು, ಮತ್ತೊಂದು ಮಗು ಸ್ಥಿತಿ ಗಂಭೀರ!

ಪ್ರವಾಹಕ್ಕೆ ಕಲ್ಯಾಣ ಕರ್ನಾಟಕ ತತ್ತರ: ವೈಮಾನಿಕ ಸಮೀಕ್ಷೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದ ಸಿಎಂ

Dharmasthala Case: ತನಿಖೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ SITಗೆ ನಿರ್ದೇಶನ: ಸಚಿವ ಜಿ ಪರಮೇಶ್ವರ

ಜಿಲ್ಲಾ ಉಸ್ತುವಾರಿ ಸಚಿವರನ್ನು ಎಸಿ ಕೋಣೆಯಿಂದ ಹೊರ ಹಾಕಿ, ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡುವಂತೆ ಮಾಡಿ: ಸಿಎಂಗೆ ವಿಜಯೇಂದ್ರ ಆಗ್ರಹ

SCROLL FOR NEXT