ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್ಐಟಿ) ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ.
ಮೂರನೇ ದಿನವಾದ ಇಂದು ನಡೆಯುತ್ತಿರುವ ಉತ್ಖನನ ಕಾರ್ಯಾಚರಣೆಯಲ್ಲಿ 6ನೇ ಸ್ಥಳದಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದೆ. ಈ ಬೆಳವಣಿಗೆ ಪ್ರಕರಣಕ್ಕೆ ಒಂದು ಉತ್ತಮ ಮೈಲಿಗಲ್ಲನ್ನು ನೀಡಿದೆ.
ನಾವು ಗುರುತಿಸಿದ ಸ್ಥಳ ಸಂಖ್ಯೆ 6 ರಲ್ಲಿ ಭಾಗಶಃ ಅಸ್ಥಿಪಂಜರದ ಅವಶೇಷಗಳು ಕಂಡುಬಂದಿವೆ ಎಂದು ಎಸ್‌ಐಟಿಯ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಮಾಹಿತಿ ನೀಡಿದೆ.
ಎಸ್ಐಟಿ ದಳ ನೇತ್ರಾವತಿ ನದಿಯ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಸಾಕ್ಷಿ-ದೂರುದಾರರ ಸಮ್ಮುಖದಲ್ಲಿ 6ನೇ ಸ್ಥಳದಲ್ಲಿ ಶೋಧ ಕಾರ್ಯವನ್ನು ಪ್ರಾರಂಭಿಸಿತು.
ಎಸ್‌ಐಟಿಯು ಧರ್ಮಸ್ಥಳದ ಕಾಡುಪ್ರದೇಶದಲ್ಲಿ ಗುರುತಿಸಲಾದ ಪಾಯಿಂಟ್ ನಂಬರ್ 6 ರಲ್ಲಿ ಹಿಟಾಚಿ ಯಂತ್ರವನ್ನು ಬಳಸಿ ಉತ್ಖನನ ಕಾರ್ಯವನ್ನು ಕೈಗೊಂಡಿತು. ಈ ಸ್ಥಳದಲ್ಲಿ ನಡೆದ ಒಂದೂವರೆ ಗಂಟೆಗಳ ತೀವ್ರ ಶೋಧದ ನಂತರ, ಮೂಳೆ ರೀತಿಯ ವಸ್ತು ಪತ್ತೆಯಾಗಿದೆ.
ನಂತರ ಆ ವಸ್ತುವನ್ನು ಎಚ್ಚರಿಕೆಯಿಂದ ಸಂಗ್ರಹಿಸಿ, ಫಾರೆನ್ಸಿಕ್ ವಿಶ್ಲೇಷಣೆಗಾಗಿ ರವಾನಿಸಲಾಗಿದೆ. ಈ ಕಳೇಬರವು ಮಾನವನದ್ದೇ ಎಂಬುದನ್ನು ಖಚಿತಪಡಿಸಲು ಡಿಎನ್‌ಎ ಪರೀಕ್ಷೆ ಸೇರಿದಂತೆ ವೈಜ್ಞಾನಿಕ ವಿಶ್ಲೇಷಣೆ ನಡೆಸಲಾಗುವುದು ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ಇನ್ನೂ ಕೂಡ ತನಿಖೆ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಸಹಾಯವಾಣಿ ಆರಂಭ
ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ಕುರಿತು ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವಂತೆ ನಾಗರಿಕರನ್ನು ಒತ್ತಾಯಿಸಿ ವಿಶೇಷ ತನಿಖಾ ತಂಡ (SIT) ಸಹಾಯವಾಣಿಯನ್ನು ಪ್ರಾರಂಭಿಸಿದೆ.
ನಾಗರಿಕರು ಬೆಳಿಗ್ಗೆ 10 ಗಂಟೆ ಸುಮಾರಿಗೆ ತನಿಖಾ ತಂಡವನ್ನು ಮಂಗಳೂರಿನ ಕದ್ರಿಯ ಮಲ್ಲಿಕಟ್ಟೆಯಲ್ಲಿರುವ ತಪಾಸಣಾ ಬಂಗ್ಲೆಯಲ್ಲಿರುವ ಕಚೇರಿಗೆ ಸಂಪರ್ಕಿಸಬಹುದು ಎಂದು SIT ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ನಾಗರಿಕರು SITಯ ವಾಟ್ಸಾಪ್ ಸಂಖ್ಯೆ 8277986369 ಅಥವಾ ದೂರವಾಣಿ ಸಂಖ್ಯೆ 0824-2005301 ಅಥವಾ sitdps@ksp.gov.in ಗೆ ಇಮೇಲ್ ಮೂಲಕ ಮಾಹಿತಿಯನ್ನು ಹಂಚಿಕೊಳ್ಳಬಹುದು.
ಏತನ್ಮಧ್ಯೆ, ಧರ್ಮಸ್ಥಳ ಗ್ರಾಮದಲ್ಲಿ ಕಾಣೆಯಾದ ತನ್ನ ಮಗಳು ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯ ಭಟ್ ಅವರ ಅಸ್ಥಿಪಂಜರದ ಅವಶೇಷಗಳನ್ನು ಹುಡುಕಲು ಸುಜಾತಾ ಭಟ್ ಅವರ ಕಾನೂನು ಸಲಹೆಗಾರರು ದೂರು ದಾಖಲಿಸಿದ್ದಾರೆ.