ಬೆಂಗಳೂರು: ಬಹುತೇಕ ಒಂದೂವರೆ ಶತಮಾನದ ಬಳಿಕ ಬೆಂಗಳೂರಿನಲ್ಲಿ ಮತ್ತೊಂದು ಬೃಹತ್ ಉದ್ಯಾನ ನಿರ್ಮಾಣದ ಕಲ್ಪನೆ ಸಾಕಾರವಾಗುತ್ತಿದ್ದು, ಮುಂದಿನ 2.5 ವರ್ಷಗಳಲ್ಲಿ ನಗರದಲ್ಲಿ ಬೃಹತ್ ಜೈವಿಕ ಉದ್ಯಾನ ನಿರ್ಮಾಣ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಸೋಮವಾರ ಹೇಳಿದರು.
ಮಾದಪ್ಪನಹಳ್ಳಿ ನೆಡುತೋಪಿನಲ್ಲಿ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದ ವಶದಲ್ಲಿರುವ ಭೂಮಿಯನ್ನು ಅರಣ್ಯ ಇಲಾಖೆಗೆ ವಿಧ್ಯುಕ್ತವಾಗಿ ಹಿಂಪಡೆಯಲು ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಚಿವರು ಮಾತನಾಡಿದರು.
ಅಧಿಕೃತವಾಗಿ ಈ ಭೂಮಿಯನ್ನು ಅರಣ್ಯ ಇಲಾಖೆಗೆ ಪಡೆಯಲಾಗಿದ್ದು, ಮುಂದಿನ 2 ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ರಿಂದ ಉದ್ಯಾನವನಕ್ಕೆ ಶಂಕುಸ್ಥಾಪನೆ ಮಾಡಿಸಲಾಗುವುದು ಎಂದು ಹೇಳಿದರು.
ಯಲಹಂಕದ ಮಾದಪ್ಪನಹಳ್ಳಿಯಲ್ಲಿ 153 ಎಕರೆ ಜಮೀನಿನಲ್ಲಿ ಜೈವಿಕ ಉದ್ಯಾನವನ ಸ್ಥಾಪನೆಗೆ ಭೂಹಸ್ತಾಂತರದ ಮೂಲಕ ಮೊದಲ ಹೆಜ್ಜೆ ಇಡಲಾಗಿದೆ. ಈ ಪ್ರಕ್ರಿಯೆ ನನ್ನ ಸಮ್ಮುಖದಲ್ಲಿ ಇಂದು ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದು ನನ್ನ ಕನಸಿನ ಯೋಜನೆಯಾಗಿದ್ದು. ಬೆಂಗಳೂರು ಉತ್ತರದ ಜನರಿಗೆ ಹೊಸ “ಶ್ವಾಸತಾಣ” (Lung Space) ಮತ್ತು ಪ್ರಕೃತಿ ಪ್ರವಾಸದ ತಾಣವಾಗಲಿದೆ. ಶುದ್ಧ ವಾತಾವರಣ, ಪರಿಸರ ಸಂರಕ್ಷಣೆ ಹಾಗೂ ಪರಿಸರ ಪ್ರವಾಸೋದ್ಯಮಕ್ಕೆ ಇದು ಉಪಯುಕ್ತವಾಗಲಿದೆ ಎಂದು ತಿಳಿಸಿದರು.
ಪ್ರಸ್ತುತ ಈ 154 ಎಕರೆ ಪ್ರದೇಶದಲ್ಲಿ ನೀಲಗಿರಿಯ ಜೊತೆಗೆ ಹೊನ್ನೆ, ಬೀಟೆ, ಜಾಲಿ, ಕಗ್ಗಲಿ, ಎಲಚಿ, ಚಿಗರೆ, ಹೊಳೆಮತ್ತಿ, ಮತ್ತಿ, ಕರಿಮತ್ತಿ ಮೊದಲಾದ 800 ಮರಗಳಿದ್ದು, ಅವುಗಳನ್ನು ಸಂರಕ್ಷಿಸಲಾಗುವುದು, ಕೆ.ಎಫ್.ಡಿ.ಸಿ. ನೀಲಗಿರಿ ಮರ ಬೆಳೆಸಿದ್ದು, ಆ ಮರಗಳನ್ನೂ ತೆರವು ಮಾಡಿ, ಸ್ಥಳೀಯ ಪ್ರಭೇದದ ಬಿಲ್ವ, ಮಹಾಬಿಲ್ವ, ಹೊನ್ನೆ, ನೇರಳೆ, ಮತ್ತಿ, ಆಲ, ಅರಳಿಯ ಜೊತೆಗೆ ಪಶ್ಚಿಮಘಟ್ಟದಲ್ಲಿ ಬೆಳೆಯುವ ವಿವಿಧ ಪ್ರಭೇದದ ಸಸ್ಯಗಳನ್ನೂ ಬೆಳೆಸಲು ಉದ್ದೇಶಿಸಲಾಗಿದೆ.
ಎಲ್ಲ 154 ಎಕರೆ ಅರಣ್ಯ ಭೂಮಿಗೂ ಕಾಂಪೌಂಡ್ ಹಾಕಲಾಗಿದ್ದು, ಒತ್ತುವರಿ ಆಗದಂತೆ ರಕ್ಷಿಸಲಾಗಿದೆ. ಇಲ್ಲಿಗೆ 4-5 ಕಿ.ಮೀ ದೂರದಲ್ಲಿ ಬಿಡಿಎ ಅಭಿವೃದ್ಧಿಪಡಿಸುತ್ತಿರುವ ಶಿವರಾಮ ಕಾರಂತ ಬಡಾವಣೆಯೂ ಇದೆ. ಇತ್ತ ಸಿಂಗನಾಯಕನಹಳ್ಳಿ ಆರ್.ಟಿ.ಓ ಕಚೇರಿ ಕೂಡಾ ಇದೆ. ಈ ಉದ್ಯಾನವನ ಅಭಿವೃದ್ಧಿ ಆದ ಬಳಿಕ ಇದೊಂದು ಪ್ರೇಕ್ಷಣೀಯ ಸ್ಥಳವಾಗಲಿದೆ ಎಂಬ ಪೂರ್ಣ ವಿಶ್ವಾಸ ನನಗಿದೆ ಎಂದು ಹೇಳಿದರು.
ಮುಂದಿನ ಎರಡೂವರೆ ತಿಂಗಳೊಳಗೆ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ, ಸಾರ್ವಜನಿಕರಿಂ ಪ್ರತಿಕ್ರಿಯೆಗಳ ಪಡೆಯಲಾಗುವುದು. ಯೋಜನೆಯ ಸಿದ್ಧತೆ ಮತ್ತು ಕಾರ್ಯಗತಗೊಳಿಸುವಿಕೆಯನ್ನು ಮೇಲ್ವಿಚಾರಣೆ ಮಾಡಲು ತಜ್ಞರ ತಂಡ ಮತ್ತು ಎಸ್‌ಪಿವಿ ರಚಿಸಲಾಗುವುದು. ಎರಡೂವರೆ ವರ್ಷಗಳಲ್ಲಿ ಉದ್ಯಾನವನ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಈ ಉದ್ಯಾನವನದ ನಿರ್ಮಾಣಕ್ಕೆ ಆರಂಭಿಕವಾಗಿ 20 ಕೋಟಿ ರೂ. ಹಣ ಮಂಜೂರು ಮಾಡಿ ಡಿಪಿಆರ್ ಮತ್ತು ಆರಂಭಿಕ ಕಾಮಗಾರಿ ಆರಂಭಿಸಲಾಗುವುದು. ಜೊತೆಗೆ ಸಾಂಸ್ಥಿಕ ಕಂಪನಿಗಳು ಕೈಜೋಡಿಸಿ ಸಿಎಸ್‌ಆರ್ ನಿಧಿ ನೀಡಿದರೆ, ಮುಂದಿನ 3 ವರ್ಷದೊಳಗೆ ಈ ಉದ್ಯಾನವನ ಪೂರ್ಣಗೊಳಿಸಿ, ಇದೇ ಸರ್ಕಾರದ ಅವಧಿಯಲ್ಲಿ ಉದ್ಘಾಟಿಸುವುದು ನಮ್ಮ ಗುರಿಯಾಗಿದೆ. ಈ ಉದ್ಯಾನವನದ ಸಮೀಪದಲ್ಲೇ ವಿಮಾನ ನಿಲ್ದಾಣವೂ ಇದೆ. ವೈಮಾನಿಕ ಪ್ರದರ್ಶನ ತಾಣವೂ ಇದೆ. ಇಲ್ಲಿ ಉದ್ಯಾನವನ ನಿರ್ಮಾಣ ಮಾಡುವುದರಿಂದ ಪರಿಸರ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಲಭಿಸಲಿದೆ ಎಂದರು.
ವನ್ಯಜೀವಿ ಸಪ್ತಾಹದ ಸಮಾರೋಪದ ದಿನ ಮಾದಪ್ಪನಹಳ್ಳಿಯ 153.39 ಎಕರೆ ಪ್ರದೇಶದ ಬಗ್ಗೆ ತಿಳಿಸಲಾಯಿತು. ಕೂಡಲೇ ಉತ್ತರ ಬೆಂಗಳೂರಿನಲ್ಲಿ ಲಾಲ್ ಬಾಗ್ ರೀತಿ ಒಂದು ಉದ್ಯಾನ ಮಾಡಬೇಕು ಎಂಬ ಆಲೋಚನೆ ಹೊಳೆಯಿತು. ಕೂಡಲೇ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಮಾರೋಪ ಸಮಾರಂಭದಲ್ಲೇ ಇದನ್ನು ಪ್ರಕಟಿಸಿದೆ. ಇದು ನಮ್ಮ ಕನಸಿನ ಯೋಜನೆಯಾಗಿದ್ದು, ಯಲಹಂಕ ಸುತ್ತಮುತ್ತ ಇರುವ ನೂರಾರು ವಸತಿ ಬಡಾವಣೆಗಳ ಜನರಿಗೆ ಇದು ಉತ್ತಮ ಶ್ವಾಸತಾಣ ಮತ್ತು ಜನಾಕರ್ಷಣೆಯ ಕೇಂದ್ರವೂ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.