ಬೆಂಗಳೂರು: ಐಪಿಎಲ್ 2025ರ ಟೂರ್ನಿಯಲ್ಲಿ ಚಾಂಪಿಯನ್ ಆದ ಬಳಿಕ ಇಂದು ಬೆಂಗಳೂರಿನಲ್ಲಿ ನಡೆದ RCB ಸಂಭ್ರಮಾಚರಣೆಯಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಸರ್ಕಾರವೇ ಹೊಣೆಯಾಗಿದ್ದು, ಇದು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ವಿಪಕ್ಷ ಬಿಜೆಪಿ ಕಿಡಿಕಾರಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಬರೋಬ್ಬರಿ 18 ವರ್ಷಗಳ ಬಳಿಕ ಐಪಿಎಲ್ (IPL) ಟ್ರೋಫಿ ಗೆದ್ದಿದ್ದು, ಆ ಮೂಲಕ ಕೋಟ್ಯಾಂತರ ಆರ್‌ಸಿಬಿ (RCB) ಅಭಿಮಾನಿಗಳ ಕನಸನ್ನು ನನಸು ಮಾಡಿದೆ.
ಇದಕ್ಕಾಗಿ ಇಂದು ಆರ್ ಸಿಬಿ ತಂಡ ಬೆಂಗಳೂರಿನಲ್ಲಿ ಅಭಿಮಾನಿಗಳೊಂದಿಗೆ ಸಂಭ್ರಮಾಚರಣೆ ನಡೆಸಲು ಮುಂದಾಗಿತ್ತು. ಆದರೆ ಈ ಸಂಭ್ರಮಾಚರಣೆಯೇ ಇದೀಗ ದುರಂತಕ್ಕೆ ಎಡೆಮಾಡಿಕೊಟ್ಟಿದೆ.
ಇಂದು ಸಂಜೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾವಿರಾರು ಜನ ಧಾವಿಸಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದಾರೆ. ಇದೇ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದ್ದು, ಇದು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ಕಿಡಿಕಾರಿದೆ.
ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಬಿಜೆಪಿ, 'ಸಂಭ್ರಮದ ಮನೆಯಲ್ಲಿ ಸೂತಕ ಉಂಟಾಗಲು ನೇರ ಕಾರಣ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ. ಈ ಕೊಲೆಗಡುಕ ಸರ್ಕಾರದ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಬೇಕು ಎಂದು ಬಿಜೆಪಿ ಟ್ವೀಟ್ ಮಾಡಿದೆ. ಅಂತೆಯೇ ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ ಪರಿಷತ್ ಸದಸ್ಯ ಸಿಟಿ ರವಿ, 'ಇದು ಪೂರ್ವಸಿದ್ಧತೆಯಿಲ್ಲದ ಸಂಭ್ರಮ, ಸರ್ಕಾರಿ ಪ್ರಾಯೋಜಿತ ಕೊಲೆ. ಈ ಸಾವಿಗೆ ರಾಜ್ಯ ಸರ್ಕಾರವೇ ಹೊಣೆ' ಎಂದು ಆಕ್ರೋಶ ಹಾಕಿದ್ದಾರೆ.
ಅಲ್ಲದೆ, 'ಗೆಲುವಿನ ಸಂಭ್ರಮ ಕ್ರೀಡಾಭಿಮಾನಿಗಳಿಗೆ ಇರುವುದು ಸ್ವಾಭಾವಿಕ. ಆ ಸಂಭ್ರಮದಲ್ಲಿ ರಾಜಕೀಯ ತೆವಲು ತೀರಿಸಿಕೊಳ್ಳಲು ಹೊರಟ ಇವರು, ಪೋಲೀಸರ ಎಚ್ಚರಿಕೆಯನ್ನು ಕಡೆಗಣಿಸಿ, ಅನುಮತಿಯನ್ನೂ ಪಡೆಯದೆ ಎರಡೆರಡು ಕಡೆ ಸಂಭ್ರಮಾಚರಣೆ. ಇವರ ವೈಭವೀಕರಣ ಮಾಡಲು ಹೋಗಿ ಅಮಾಯಕರನ್ನು ಬಲಿ ತೆಗೆದುಕೊಂಡಿದ್ದೀರಿ. ಕ್ರೀಡಾಭಿಮಾನಿಗಳ ಸಾವಿಗೆ ಹೊಣೆ ಯಾರು? ಕೊಲೆಗಾರರು ನೀವೇ. ಗೆಲುವಿನ ಸಂಭ್ರಮವನ್ನು ಸಾವಿನ ಸೂತಕವಾಗಿ ಪರಿವರ್ತಿಸಿದವರು ನೀವು. ಇದು ಆಕಸ್ಮಿಕ ಸಾವಲ್ಲ. ಕಾರ್ಯಕ್ರಮ ಮಾಡುವ ನಿರ್ಧಾರ ತೆಗೆದುಕೊಂಡ ಆಯೋಜಕರೇ ಈ ಸಾವಿಗೆ ನೇರ ಹೊಣೆ ಎಂದು ಕಿಡಿಕಾರಿದ್ದಾರೆ.
ಸರ್ಕಾರದ ವೈಫಲ್ಯ
ಇನ್ನು ಇದೇ ವಿಚಾರವಾಗಿ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, 'ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಐಪಿಎಲ್ ಸಂಭ್ರಮಾಚರಣೆಯ ವೇಳೆ ಕಾಲ್ತುಳಿತಕ್ಕೆ ಸಿಲುಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಕ್ಷೇಮ ವಿಚಾರಿಸಲಾಯಿತು. ಆರ್.ಸಿ.ಬಿ ವಿಜಯೋತ್ಸವದ ಸಂದರ್ಭದಲ್ಲಿ ನಿರೀಕ್ಷೆ ಮೀರಿ ಜನಪ್ರವಾಹ ಹರಿದು ಬಂದ ಹಿನ್ನೆಲೆಯಲ್ಲಿ ಉಂಟಾಗಿರುವ ದುರಂತದಲ್ಲಿ 11 ಮಂದಿಗೂ ಹೆಚ್ಚು ಅಭಿಮಾನಿಗಳು ಪ್ರಾಣ ಕಳೆದುಕೊಂಡಿರುವುದು ಹಾಗೂ ಹಲವರು ಸಾವು ಬದುಕಿನ ನಡುವೆ ಹೋರಾಡುತ್ತಿರುವುದು ಅತ್ಯಂತ ನೋವಿನ ಸಂಗತಿ.
ನೂರಾರು ಸಂಖ್ಯೆಯ ಜನ ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಹೃದಯವಿದ್ರಾವಕ ಘಟನೆ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸುವಂತಾಗಿದೆ. ರಾಜ್ಯ ಸರ್ಕಾರ ಈ ಕೂಡಲೇ ನೊಂದ ಕುಟುಂಬಗಳಿಗೆ ಆತ್ಮವಿಶ್ವಾಸ ತುಂಬಬೇಕು, ಸಾಂತ್ವನ ಹೇಳಬೇಕು ಹಾಗೂ ಸೂಕ್ತ ಪರಿಹಾರ ಘೋಷಿಸಬೇಕು, ಅಸ್ವಸ್ಥತೆಯಿಂದ ಚಿಕಿತ್ಸೆ ಅವಶ್ಯಕತೆ ಇರುವವರಿಗೆ ತಕ್ಷಣ ಸೂಕ್ತ ಚಿಕಿತ್ಸೆ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದಿದ್ದಾರೆ.
ಅಂತೆಯೇ, 'ಆರ್‌ಸಿಬಿ ವಿಜಯದ ನಂತರ ಇಡೀ ರಾಜ್ಯದಲ್ಲಿ ಬೆಂಗಳೂರೂ ಸೇರಿದಂತೆ ಕೆಲ ಪ್ರಮುಖ ನಗರಗಳಲ್ಲಿ ಜನರು ವಿಜಯೋತ್ಸವದಲ್ಲಿ ಮುಳುಗಿದ್ದು ಅಭಿಮಾನಿಗಳ ಸಂಭ್ರಮಾಚರಣೆಯ ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸಲಾಗದ ಸ್ಥಿತಿ ನಿನ್ನೆಯೇ ಉದ್ಬವಿಸಿತ್ತು. ಈ ಹಿನ್ನೆಲೆಯಲ್ಲಿ ಇಂದೇ ಸಂಭ್ರಮಾಚರಣೆ ಆಚರಿಸುವ ಕುರಿತು ಸೇರಬಹುದಾದ ಜನರ ಲೆಕ್ಕಾಚಾರವನ್ನು ಅಂದಾಜಿಸಿ ಸರ್ಕಾರ ವಿವೇಚಿಸಿ ನಿರ್ಧಾರ ತೆಗೆದುಕೊಳ್ಳಬಹುದಾಗಿತ್ತು.
ಆದರೆ ಆ ನಿಟ್ಟಿನಲ್ಲಿ ಮುನ್ನೆಚ್ಚರಿಕೆಯ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಪರಿಸ್ಥಿತಿ ಕೈಮೀರುವ ಹಂತವನ್ನು ಅಂದಾಜಿಸಿ ಮತ್ತೊಂದು ದಿನಾಂಕವನ್ನು ನಿಗದಿಪಡಿಸಬಹುದಾಗಿತ್ತು, ಆದರೆ ಆತುರದ ನಿರ್ಧಾರದಿಂದ ಈ ರೀತಿಯ ದುರ್ಘಟನೆ ಸಂಭವಿಸಿದೆ. ಇದರ ಹೊಣೆ ಯಾರು ಹೊರಬೇಕು? ಎಂಬುದನ್ನು ಸರ್ಕಾರ ವಿವೇಚಿಸಲಿ. ಪರಿಸ್ಥಿತಿಯನ್ನು ವ್ಯವಸ್ಥಿತವಾಗಿ ನಿಭಾಯಿಸಲಾಗದ ವೈಫಲ್ಯದ ಕುರಿತು ನ್ಯಾಯಾಂಗ ತನಿಖೆಗೆ ಒತ್ತಾಯಿಸುವೆ ಎಂದು ಹೇಳಿದ್ದಾರೆ.
ಅಂದಹಾಗೆ ಆರ್‌ಸಿಬಿ ಆಟಗಾರರನ್ನು ನೋಡೋ ಆಸೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಆಗಮಿಸಿದ್ದರು. ಈ ವೇಳೆ ನಿಯತ್ರಂಣ ತಪ್ಪಿದೆ. ನೂಕುನುಗ್ಗಲು ಉಂಟಾಗಿದೆ. ಈ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ, ಬರೋಬ್ಬರಿ 11 ಮಂದಿ ಮೃತಪಟ್ಟಿದ್ದಾರೆ. ಅಭಿಮಾನದ ಹೆಸರಲ್ಲಿ ಭಾರಿ ದುರಂತ ಸಂಭವಿಸಿದ್ದು, ಬೌರಿಂಗ್ ಆಸ್ಪತ್ರೆ ಮಾತ್ರವಲ್ಲ ಮಲ್ಯ ರಸ್ತೆಯ ವೈದೇಹಿ ಆಸ್ಪತ್ರೆಗೂ ಗಾಯಾಳುಗಳನ್ನು ದಾಖಲಿಸಲಾಗಿದೆ. ಸದ್ಯ 7 ಮಂದಿಗೆ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಒಟ್ಟು ಘಟನೆಯಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ. 7 ಮಂದಿ ಬೌರಿಂಗ್ ಆಸ್ಪತ್ರೆಯಲ್ಲಿ ಹಾಗೂ 3 ಮಂದಿ ವೈದೇಹಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.