ಬೆಂಗಳೂರು: ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳದ ಬಗ್ಗೆ ಮಹಾರಾಷ್ಟ್ರ ಸಿಎಂ ಪತ್ರಕ್ಕೆ, ನಮ್ಮ ಮುಖ್ಯಮಂತ್ರಿಗಳು ಪತ್ರ ಬರೆದ ನಂತರ, ಈ ಬಗ್ಗೆ ಚರ್ಚಿಸಲು ಪ್ರಧಾನಮಂತ್ರಿ ಹಾಗೂ ಕೇಂದ್ರ ಜಲಶಕ್ತಿ ಸಚಿವರ ಭೇಟಿಗೆ ಸಮಯ ಕೇಳುತ್ತೇವೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳ ವಿಚಾರವಾಗಿ ಮಹಾರಾಷ್ಟ್ರ ಸಿಎಂ ಪತ್ರಕ್ಕೆ ನಮ್ಮ ಮುಖ್ಯಮಂತ್ರಿಗಳು ಎರಡು ದಿನಗಳಲ್ಲಿ ಪತ್ರ ಬರೆಯಲಿದ್ದಾರೆ. ನಾನು ನನ್ನ ಅಭಿಪ್ರಾಯವನ್ನು ಈಗಾಗಲೇ ಕಳುಹಿಸಿಕೊಟ್ಟಿದ್ದೇನೆ. ಸಿಎಂ ಬರೆಯುವ ಪತ್ರವನ್ನು ಎಲ್ಲಾ ಸಂಸದರಿಗೆ ಕಳುಹಿಸಿಕೊಡುತ್ತೇನೆ. ನಂತರ ಈ ವಿಚಾರವಾಗಿ ಚರ್ಚಿಸಲು ಪ್ರಧಾನಮಂತ್ರಿ ಹಾಗೂ ಕೇಂದ್ರ ಜಲಶಕ್ತಿ ಸಚಿವರ ಭೇಟಿಗೆ ದಿನಾಂಕ ಕೇಳುತ್ತೇವೆ. ಈ ವಿಚಾರವಾಗಿ ನಾವೆಲ್ಲಾ ಸೇರಿ ಒತ್ತಾಯ ಮಾಡಲೇಬೇಕು" ಎಂದು ಅಭಿಪ್ರಾಯ ಪಟ್ಟರು.
ಮಹಾರಾಷ್ಟ್ರ ಸಿಎಂ ಫಡ್ನವೀಸ್ ಅವರು ಬುದ್ಧಿವಂತರಿದ್ದಾರೆ. ಈ ಹಿಂದೆ ಅವರೇ ಈ ಯೋಜನೆಗೆ ಬೆಂಬಲ ನೀಡಿದ್ದರು. ಈಗ ಅವರು ಯಾಕೆ ಈ ಪತ್ರ ಬರೆದರು ಎಂದು ಅಚ್ಚರಿಯಾಗಿದೆ. ಮಳೆ ಹೆಚ್ಚಾದಾಗ ಪ್ರವಾಹ ಬರುತ್ತದೆ. ಇದನ್ನು ನಿಭಾಯಿಸುವುದು ಅವರ ಕರ್ತವ್ಯ ಎಂದು ಹೇಳಿದರು.
ಈ ವರ್ಷ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಇಲ್ಲಿ ನಡೆಸಲು ತೀರ್ಮಾನಿಸಿದ್ದೇವೆ. ನಮ್ಮ ಸರ್ಕಾರ ಸಮೀಪದಲ್ಲೇ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಜಮೀನು ನಿಗದಿ ಮಾಡಿದೆ. ಈ ಜಾಗದಲ್ಲಿ ಜೂ.27ರಂದು ಶಂಕುಸ್ಥಾಪನೆ ಮಾಡಿ, ನಂತರ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಇಲ್ಲಿ ಆಚರಿಸಲು ಮುಂದಾಗಿದ್ದೇವೆ. ಇಲ್ಲಿ ಕೆಂಪೇಗೌಡರ ಇತಿಹಾಸ ಸಾರುವ ವಸ್ತುಪ್ರದರ್ಶನ ಕೇಂದ್ರ ನಿರ್ಮಾಣ ಮಾಡಲಾಗುವುದು" ಎಂದು ಹೇಳಿದರು.
ಈಗ ಮಂಜೂರಾಗಿರುವ ಜಾಗವನ್ನು ಸಮಾಜ ಕಲ್ಯಾಣ ಇಲಾಖೆ ಜಾಗದ ಜೊತೆ ಬದಲಾಯಿಸಿಕೊಳ್ಳಬೇಕು ಎಂದು ನಮ್ಮ ಸ್ಥಳೀಯ ನಾಯಕರು ಸಲಹೆ ನೀಡಿದ್ದಾರೆ. ಅಧಿಕಾರಿಗಳ ಜತೆ ಇಂದು ಈ ಜಾಗದ ಪರಿಶೀಲನೆ ಮಾಡಿದೆ. ಜಾಗ ಅದಲು ಬದಲು ಮಾಡಿದರೆ, ಪಕ್ಕದಲ್ಲೇ ಈ ದೊಡ್ಡ ಸಭಾಂಗಣ ಇದೆ. ಆಗ ಮತ್ತೊಂದು ಸಭಾಂಗಣ ನಿರ್ಮಾಣ ಮಾಡುವ ಅಗತ್ಯ ಇರುವುದಿಲ್ಲ. ಮುಂದೆ ಇಲ್ಲಿ ರೈಲ್ವೆ ಮಾರ್ಗ ಬರಲಿದ್ದು, ಇಲ್ಲೇ ಒಂದು ನಿಲ್ದಾಣವನ್ನು ಮಾಡಲಾಗುವುದು. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪ ಮಾಡಲಾಗುವುದು. ಸಚಿವ ಸಂಪುಟ ಸಭೆಯಲ್ಲಿ ಅಂತಿಮವಾಗಿ ತೀರ್ಮಾನ ಮಾಡಲಾಗುವುದು" ಎಂದು ತಿಳಿಸಿದರು.
ಬೆಂಗಳೂರು ಬೆಳೆದಿದೆ ಏನು ಮಾಡುತ್ತೀರಿ? ಬೆಂಗಳೂರಿನಲ್ಲಿ ಬೇರೆ ಎಲ್ಲಿ ಜಾಗ ನೀಡುತ್ತೀರಿ? ಗಾಲ್ಫ್ ಕೋರ್ಸ್, ಕಬ್ಬನ್ ಪಾರ್ಕ್, ರೇಸ್ ಕೋರ್ಸ್ ಬಿಡಲು ಯಾರೂ ಸಿದ್ಧರಿಲ್ಲ. ಮತ್ತೆ ಬೇರೆ ಎಲ್ಲಿ ಜಾಗ ಇದೆ? ಮಂತ್ರಿಗಳ ಮನೆ, ನ್ಯಾಯಾಧೀಶರಿಗೆ ಹೊಸ ಮನೆ, ಹೈಕೋರ್ಟ್ ಮಾಡಲು ಬೆಂಗಳೂರು ಮಧ್ಯಭಾಗದಲ್ಲಿ ಜಾಗ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಬೇರೆ ಎಲ್ಲಿ ನೀಡಲು ಸಾಧ್ಯ? ಹೀಗಾಗಿ ಇಲ್ಲಿ ಜಾಗ ನೀಡಿದ್ದೇವೆ" ಎಂದು ತಿಳಿಸಿದರು.
ಕೇಂದ್ರ ಸಚಿವಾಲಯಗಳು ಅಲ್ಲಿರುವ ಕಾರಣ ದೆಹಲಿಗೆ ತೆರಳಬೇಕಾಗುತ್ತದೆ. ಸಧ್ಯಕ್ಕೆ ನನಗೆ ದೆಹಲಿಯಲ್ಲಿ ಯಾವುದೇ ಕಾರ್ಯಕ್ರಮ ಇಲ್ಲ. ಸಿಎಂ ಅವರ ಕಾರ್ಯಕ್ರಮ ಇರಬಹುದು. ಹೈಕಮಾಂಡ್ ನನಗೆ ಭೇಟಿ ಮಾಡಲು ತಿಳಿಸಿದರೆ ನಾನು ಹೋಗುತ್ತೇನೆ. ಆದರೆ ನಾನು ಕೆಲವು ಕೇಂದ್ರ ಸಚಿವರನ್ನು ಭೇಟಿ ಮಾಡಬೇಕಿದ್ದು, ಅವರ ಸಮಯ ನಿಗದಿ ಮಾಡಿದ ನಂತರ ನಾನು ಪ್ರವಾಸ ಮಾಡುತ್ತೇನೆ" ಎಂದು ತಿಳಿಸಿದರು.
ಸರ್ಕಾರಕ್ಕೆ 2 ವರ್ಷ ಪೂರೈಸಿದ ನಂತರ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂಬ ಚರ್ಚೆ ಬಗ್ಗೆ ಕೇಳಿದಾಗ, "ಈ ವಿಚಾರ ಏನಿದ್ದರೂ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳನ್ನೇ ಕೇಳಬೇಕು" ಎಂದರು. ಶೀಘ್ರದಲ್ಲೇ ನಿಗಮ ಮಂಡಳಿಗೆ ನೇಮಕ ಮಾಡುತ್ತೇವೆ. ಈಗಾಗಲೇ ಗ್ಯಾರಂಟಿ ಸಮಿತಿಯಲ್ಲಿ 4 ಸಾವಿರ ಕಾರ್ಯಕರ್ತರಿಗೆ ಅಧಿಕಾರ ನೀಡಿದ್ದೇವೆ. 8 ಸಾವಿರ ಜನ ಕಾರ್ಯಕರ್ತರನ್ನು ಬೇರೆ ಬೇರೆ ಸಮಿತಿ ಸದಸ್ಯರನ್ನಾಗಿ ಮಾಡಿದ್ದೇವೆ. ರಾಜ್ಯ ಮಟ್ಟದಲ್ಲಿ 500-600 ಜನಕ್ಕೆ ಮಾಡಬೇಕಿದೆ. ಈ ಪಟ್ಟಿ ಸಿದ್ಧವಾಗಿದ್ದು, ಸ್ಥಳೀಯ ನಾಯಕರ ಜತೆ ಚರ್ಚಿಸಿ ಪ್ರಕಟಿಸುತ್ತೇವೆ" ಎಂದು ತಿಳಿಸಿದರು.
ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಪತ್ರದ ಬಗ್ಗೆ ಕೇಳಿದಾಗ, "ನನಗೆ ಇನ್ನೂ ಆ ಪತ್ರ ಬಂದಿಲ್ಲ. ಬಂದ ನಂತರ ಪ್ರತಿಕ್ರಿಯೆ ನೀಡುತ್ತೇನೆ. ಬಿಜೆಪಿಯವರು ಯಾವ ರೀತಿ ಆಯ್ಕೆ ಮಾಡಿದ್ದರು ಎಂಬುದು ನನಗೆ ಗೊತ್ತಿದೆ. ಇದನ್ನು ಪರಿಶೀಲನೆ ಮಾಡುತ್ತೇವೆ" ಎಂದು ತಿಳಿಸಿದರು.