ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬುಧವಾರ ಸಂಭವಿಸಿದ ಘೋರ ಕಾಲ್ತುಳಿತ ಘಟನೆಯನ್ನು ನೆನೆದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗುರುವಾರ ಕ್ಯಾಮರಾ ಮುಂದೆ ಕಣ್ಣೀರಿಟ್ಟರು.
ಮೃತರ ಕುಟುಂಬಸ್ಥರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಮಕ್ಕಳ ಸಾವಿನಿಂದ ದು:ಖಿತನಾಗಿದ್ದೇನೆ. ಮೃತರಲ್ಲಿ 15 ವರ್ಷದ ಬಾಲಕ ಇದುದ್ದನ್ನು ನಾನೇ ನೋಡಿದ್ದೇನೆ. 10 ಜನರ ಸಾವನ್ನು ನನ್ನ ಕಣ್ಣಿಂದಲೇ ನೋಡಿದ್ದೇನೆ. ಈ ನೋವನ್ನು ಯಾವುದೇ ಕುಟುಂಬ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಗದ್ಗರಿತರಾದರು.
ಪರಿಸ್ಥಿತಿ ಎಷ್ಟು ಬೇಗ ಹದಗೆಟ್ಟಿತು. ಸ್ಥಳದಲ್ಲಿದ್ದ ಅಧಿಕಾರಿಗಳು ಹೇಗೆ ತಿಳಿಸಿದರು ಎಂಬುದನ್ನು ವಿವರಿಸಿದ ಡಿಕೆ ಶಿವಕುಮಾರ್, 10 ನಿಮಿಷಗಳಲ್ಲಿ ಕಾರ್ಯಕ್ರಮ ಮುಗಿಸುವಂತೆ ಪೊಲೀಸ್ ಕಮಿಷನರ್ ನನಗೆ ಹೇಳಿದರು. ಕಾಲ್ತುಳಿತದಲ್ಲಿ ಸಿಲುಕಿ ಒಂದಿಬ್ಬರು ಮೃತಪಟ್ಟಿದ್ದು, ಕಾರ್ಯಕ್ರಮ ಬೇಗ ಮುಗಿಸುವಂತೆ ಅವರು ಹೇಳಿದ್ದಾಗಿ ತಿಳಿಸಿದರು.
ಸ್ಟೇಡಿಯಂನಲ್ಲಿನ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಅವರು, "ನಾನು ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಮ್ಯಾನೇಜ್ ಮೆಂಟ್ ಅಲ್ಲಿಗೆ ತಲುಪಲು ಸಾಧ್ಯವಾಗಲಿಲ್ಲ. ನಾನು ಅವರನ್ನು ನನ್ನ ಕಾರಿನಲ್ಲಿ ಕರೆದೊಯ್ಯಬೇಕಾಗಿತ್ತು. ನನಗೆ ಕೆಎಸ್‌ಸಿಎಗೆ ಹೋಗಲು ಆಸಕ್ತಿ ಇರಲಿಲ್ಲ. ನನ್ನ ಕಾರಿನಲ್ಲಿ ಅಧ್ಯಕ್ಷ, ಕಾರ್ಯದರ್ಶಿಯನ್ನು ಕರೆದೊಯ್ದೆ. ಯಾವುದೇ ಘೋಷಣೆ ಮಾಡಲು ನಾವು ಅವರಿಗೆ ಅವಕಾಶ ನೀಡಲಿಲ್ಲ. ನಾವು ಎಲ್ಲವನ್ನೂ ತ್ವರಿತಗತಿಯಲ್ಲಿ ಮುಗಿಸಿದ್ದೇವು. ಕೆಎಸ್ ಸಿಎ ಕೂಡಾ ಇದಕ್ಕೆ ಒಪ್ಪಿಗೆ ನೀಡಿತ್ತು ಎಂದರು.
ಬಿಜೆಪಿಯ ಟೀಕೆ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ನಾವು ಆಡಳಿತಾತ್ಮಕ ಪಾಠ ಕಲಿಯಬೇಕು, ಪ್ರತಿಪಕ್ಷಗಳು ಮೃತದೇಹಗಳ ಮೇಲೆ ರಾಜಕೀಯ ಮಾಡಲಿ. ಅವರು ಎಷ್ಟು ಶವಗಳ ಮೇಲೆ ರಾಜಕೀಯ ಮಾಡಿದ್ದಾರೆ ಎಂಬುದನ್ನು ನಾನು ಪಟ್ಟಿ ಮಾಡುತ್ತೇನೆ. ಆದರೆ ಚಿಕ್ಕ ಮಕ್ಕಳನ್ನು ನೋಡಿದರೆ ನೋವಾಗುತ್ತದೆ. ಅವರ ನೋವನ್ನು ನಾನು ನೋಡಿದ್ದೇನೆ" ಎಂದು ಹೇಳಿದರು.