ಬೆಂಗಳೂರು: ಕಾಲ್ತುಳಿತ ಘಟನೆಯಲ್ಲಿ ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಪ್ರಶ್ನಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಡಿಎನ್ಎ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿರುವ ಅರ್ಜಿಗಳನ್ನು ಜೂನ್ 10 ರಂದು ವಿಚಾರಣೆ ನಡೆಸುವುದಾಗಿ ಕರ್ನಾಟಕ ಹೈಕೋರ್ಟ್ ಸೋಮವಾರ ತಿಳಿಸಿದೆ.
18 ವರ್ಷಗಳ ಬಳಿಕ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಜೂನ್ 4 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಸಾವಿಗೀಡಾಗಿದ್ದಾರೆ.
ಸೋಮವಾರ, ಆರ್‌ಸಿಬಿ ಮತ್ತು ಡಿಎನ್ಎ ಎಂಟರ್‌ಟೈನ್‌ಮೆಂಟ್ ತಮ್ಮ ವಿರುದ್ಧದ ಎಫ್‌ಐಆರ್‌ಗಳನ್ನು ಪ್ರಶ್ನಿಸಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಾಲೀಕ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಲಿಮಿಟೆಡ್ (ಆರ್‌ಸಿಎಸ್‌ಎಲ್) ಈ ಪ್ರಕರಣದಲ್ಲಿ ತನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ. ಸೀಮಿತ ಪಾಸ್‌ಗಳು ಮಾತ್ರ ಲಭ್ಯವಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಉಚಿತ ಪಾಸ್‌ಗಳಿಗೂ ಸಹ, ಪ್ರವೇಶಕ್ಕೆ ಪೂರ್ವ ನೋಂದಣಿ ಕಡ್ಡಾಯ ಎಂದು ಹೇಳಲಾಗಿತ್ತು ಎಂದು ವಾದಿಸಿದೆ.
ಮಧ್ಯಾಹ್ನ 1.45ಕ್ಕೆ ತೆರೆಯಬೇಕಿದ್ದ ಕ್ರೀಡಾಂಗಣದ ಗೇಟ್‌ಗಳನ್ನು ಮಧ್ಯಾಹ್ನ 3 ಗಂಟೆಗೆ ತೆರೆಯಲಾಗಿದ್ದು, ಇದರಿಂದಾಗಿ ಜನಸಂದಣಿ ಹೆಚ್ಚಾಗಿದೆ ಎಂದು ಅದು ಆರೋಪಿಸಿದೆ.
ಈಮಧ್ಯೆ, ಪೊಲೀಸರ ಜನಸಂದಣಿ ನಿರ್ವಹಣೆಯ ವೈಫಲ್ಯದಿಂದಾಗಿ ಈ ಘಟನೆ ಸಂಭವಿಸಿದೆ. ವಿಧಾನಸೌಧದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಜನಸಂದಣಿ ಹೆಚ್ಚಿದ್ದರೂ, ಕ್ರೀಡಾಂಗಣದಲ್ಲಿ ಸಿಬ್ಬಂದಿ ಕೊರತೆ ಇತ್ತು ಎಂದು ಡಿಎನ್‌ಎ ತನ್ನ ಅರ್ಜಿಯಲ್ಲಿ ತಿಳಿಸಿದೆ.
ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಅರ್ಜಿಗಳನ್ನು ಜೂನ್ 10 ರಂದು ಒಟ್ಟಿಗೆ ವಿಚಾರಣೆ ನಡೆಸುವಂತೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ನ್ಯಾಯಾಲಯವನ್ನು ಕೋರಿದರು.
ಆಕ್ಷೇಪಣೆಗಳನ್ನು ಸಲ್ಲಿಸಲು ಸಮಯ ನೀಡಲು ನ್ಯಾಯಾಲಯ ಒಪ್ಪಿಕೊಂಡಿತು.