ಚಾಮರಾಜನಗರ: ಚಾಮರಾಜನಗರ ತಾಲೂಕಿನ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಬೇಡಗುಳಿ ವಲಯದಲ್ಲಿ ಮಂಗಳವಾರ ಮಹಿಳೆಯೊಬ್ಬರು ಬಲಿಯಾಗಿದ್ದು, ಓರ್ವ ಯುವಕ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತ ಮಹಿಳೆಯನ್ನು ಬೇಡಗುಳಿ ಹಾಡಿಯ ರಂಗಮ್ಮ ಎಂದು ಹಾಗೂ ಗಾಯಗೊಂಡ ಯುವಕನನ್ನು ರಾಮಯ್ಯನ ಪೋಡಿಯ ರವಿ ಎಂದು ಗುರುತಿಸಲಾಗಿದೆ.
ಇಂದು ಬೆಳಗಿನ ಜಾವ ಬಹಿರ್ದೆಸೆಗೆ ಹೋಗಿದ್ದ ರಂಗಮ್ಮ ಅವರ ಮೇಲೆ ಹುಲಿ ದಾಳಿ ನಡೆಸಿ, ಕೊಂದು ಹಾಕಿದೆ.
ಇನ್ನು ಸೋಮವಾರ ರಾತ್ರಿ ಹಾಡಿಗೆ ಮರಳುವಾಗ ರವಿ ಮೇಲೆ ಹುಲಿ ದಾಳಿ ನಡೆಸಿದ್ದು, ಆತನ ಕಿರುಚಾಟ ಕೇಳಿ ಸ್ಥಳೀಯರು ನೆರವಿಗೆ ಧಾವಿಸಿ, ಹುಲಿಯನ್ನು ಓಡಿಸಿದ್ದಾರೆ.
ಹುಲಿ ದಾಳಿಯಿಂದ ರವಿ ಅವರ ತಲೆ, ಕೈ, ಕಾಲಿಗೆ ಗಾಯವಾಗಿದೆ. ಅವರನ್ನು ಚಾಮರಾಜನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅದೃಷ್ಟವಶಾತ್ ರವಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರವಿ ಹಾಗೂ ರಂಗಮ್ಮ ಮೇಲೆ ದಾಳಿ ನಡೆಸಿದ ಹುಲಿ ಒಂದೇ ಆಗಿದ್ದು, ಅದನ್ನು ಕಾರ್ಯಾಚರಣೆ ಮೂಲಕ ಸೆರೆ ಹಿಡಿಯಲಾಗಿದೆ ಎಂದು ಬಿಆರ್ ಟಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿಎಸ್ ಶ್ರೀಪತಿ ಅವರು ತಿಳಿಸಿದ್ದಾರೆ.