ಮಲ್ಲಿಕಾರ್ಜುನ ಖರ್ಗೆ 
ರಾಜ್ಯ

ರಾಜ್ಯದಲ್ಲಿ ಸದ್ಯಕ್ಕೆ ಸಚಿವ ಸಂಪುಟ ಪುನಾರಚನೆ ಇಲ್ಲ: ಮಲ್ಲಿಕಾರ್ಜುನ ಖರ್ಗೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಹಾಗೂ ಜಾತಿ ಸಮೀಕ್ಷೆ ಕುರಿತು ಸಭೆಯಲ್ಲಿ ಚರ್ಚಿಸಿದೆವು. ಕಾಲ್ತುಳಿತದ ಘಟನೆ ಕಾಂಗ್ರೆಸ್ ಸೇರಿದಂತೆ ಎಲ್ಲರನ್ನೂ ಆಘಾತಕ್ಕೀಡುಮಾಡಿದೆ. ಹೀಗಾಗಬಾರದಿತ್ತು.

ಕಲಬುರಗಿ: ರಾಜ್ಯದಲ್ಲಿ ಸದ್ಯಕ್ಕೆ ಸಚಿವ ಸಂಪುಟ ಪುನಾರಚನೆ ಅಥವಾ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಎಐಸಿಸಿ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಹೇಳಿದರು.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಸಚಿವ ಸಂಪುಟ ಪುನಾರಚನೆ ಅಥವಾ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ನಿರ್ಧರಿಸಿದಾಗ ತಿಳಿಸುತ್ತೇವೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಗಳವಾರ ನವದೆಹಲಿಯಲ್ಲಿ ತಮ್ಮನ್ನು ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾದಾಗ ಕರ್ನಾಟಕದಲ್ಲಿನ ಸಚಿವ ಸಂಪುಟ ಪುನಾರಚನೆ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಯಾವುದೇ ಮಾತುಕತೆ ನಡೆಸಿಲ್ಲ ಎಂದು ಸ್ಪಷ್ಪಪಡಿಸಿದರು.

ಬೆಂಗಳೂರು ಕಾಲ್ತುಳಿತ, ಜಾತಿ ಸಮೀಕ್ಷೆ ಬಗ್ಗೆ ಚರ್ಚೆ:

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಹಾಗೂ ಜಾತಿ ಸಮೀಕ್ಷೆ ಕುರಿತು ಸಭೆಯಲ್ಲಿ ಚರ್ಚಿಸಿದೆವು. ಕಾಲ್ತುಳಿತದ ಘಟನೆ ಕಾಂಗ್ರೆಸ್ ಸೇರಿದಂತೆ ಎಲ್ಲರನ್ನೂ ಆಘಾತಕ್ಕೀಡುಮಾಡಿದೆ. ಹೀಗಾಗಬಾರದಿತ್ತು. ಇಂತಹ ಘಟನೆಗಳು ನಡೆಯದಂತೆ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಸೂಚಿಸಿದ್ದೇವೆ. ಪೊಲೀಸ್ ಅಧಿಕಾರಿಗಳ ಅಮಾನತು, ಮ್ಯಾಜಿಸ್ಟ್ರೇಟ್ ತನಿಖೆ ಮತ್ತು ನ್ಯಾಯಾಂಗ ತನಿಖೆಗೆ ಆದೇಶ ಮತ್ತು ನೊಂದವರಿಗೆ ಪರಿಹಾರ ಮತ್ತಿತರ ಕ್ರಮಗಳ ಬಗ್ಗೆ ಸಿಎಂ ಮತ್ತು ಉಪ ಮುಖ್ಯಮಂತ್ರಿ ವಿವರಿಸಿದ್ದಾರೆ ಎಂದು ಹೇಳಿದರು.

ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಿದ್ರಾ? ಕಾಲ್ತುಳಿತದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡಬೇಕು ಎಂಬ ಬಿಜೆಪಿಯ ಬೇಡಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ಪ್ರಯಾಗ್‌ರಾಜ್ ಕುಂಭಮೇಳದ ವೇಳೆ ಕಾಲ್ತುಳಿತ ಸಂಭವಿಸಿದಾಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಿದ್ರಾ? ಎಂದು ಪ್ರಶ್ನಿಸಿದರು. ಕುಂಭಮೇಳದಲ್ಲಿ ಕಾಲ್ತುಳಿತದ ಬಗ್ಗೆ ಪ್ರಶ್ನೆಗಳನ್ನು ಎತ್ತಿದಾಗ ಅವರು ನನ್ನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು ಎಂದು ಖರ್ಗೆ ಹೇಳಿದರು.

ಜಾತಿ ಗಣತಿ ಮರು ಸಮೀಕ್ಷೆ: ಜಾತಿ ಗಣತಿ ಮರು ಸಮೀಕ್ಷೆ ಕುರಿತು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, 10 ವರ್ಷಗಳ ಹಿಂದೆ ಜಾತಿ ಸಮೀಕ್ಷೆ ನಡೆಸಲಾಗಿತ್ತು. ವಿವಿಧ ಸಮುದಾಯಗಳ ಅನೇಕ ಮುಖಂಡರು, ಪ್ರತಿನಿಧಿಗಳು ಮರು ಸಮೀಕ್ಷೆ ನಡೆಸಲು ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದರು. ಕಾಂತರಾಜ್ ಆಯೋಗ ನೀಡಿರುವ ಸಮೀಕ್ಷಾ ವರದಿಯನ್ನು ತಿರಸ್ಕರಿಸದೆ ಮರು ಸಮೀಕ್ಷೆ ನಡೆಸುವಂತೆ ಸಿಎಂ ಹಾಗೂ ಡಿಸಿಎಂಗೆ ಸೂಚಿಸಿದ್ದೇವೆ ಎಂದರು.

ಒಬಿಸಿ ಸೇರಿದಂತೆ ಹಿಂದಿನ ಸಮೀಕ್ಷೆಯಲ್ಲಿ ಸೇರಿಸದ ಜಾತಿಗಳು ಮತ್ತು ಉಪ-ಜಾತಿಗಳನ್ನು ಸೇರಿಸಲು ಮರು ಸಮೀಕ್ಷೆ ಮಾಡಲಾಗುತ್ತದೆ. ಸಮೀಕ್ಷೆ ನಡೆಸುವ ಜನರು ಮನೆ ಮನೆಗೆ ಭೇಟಿ ನೀಡುತ್ತಾರೆ. ಹೊಸ ಮಾಹಿತಿಯನ್ನು ಸೇರಿಸಲಾಗುವುದು ಎಂದು ಎಐಸಿಸಿ ಅಧ್ಯಕ್ಷರು ಹೇಳಿದರು.

ಕಾಂಗ್ರೆಸ್ ಶಾಸಕನ ಮೇಲೆ ಇಡಿ ದಾಳಿ: ಕೂಡ್ಲಿಗಿ ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಮನೆ ಮೇಲೆ ಇಡಿ ದಾಳಿ ಕುರಿತ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ಹಲವು ವರ್ಷಗಳಿಂದ ಇಡಿ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಕೆಲಸ ಮಾಡುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಶಾಸಕರು ಮತ್ತು ಸಂಸದರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ದಾಳಿ ನಡೆಸುವ ಮೂಲಕ ಕಾಂಗ್ರೆಸ್ ಪಕ್ಷ ಒಡೆಯುವುದು ಎನ್‌ಡಿಎಯ ಪ್ರಮುಖ ಉದ್ದೇಶವಾಗಿದೆ. ಆದರೆ ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿರುವುದರಿಂದ ಅದು ಸಾಧ್ಯವಿಲ್ಲ. ಚುನಾವಣಾ ಸಮಯದಲ್ಲಿ ಇಡಿ ಹಲವು ರಾಜಕೀಯ ಪಕ್ಷಗಳ ಮುಖಂಡರ ಮೇಲೆ ದಾಳಿ ನಡೆಸಿದ್ದು, ದಾಳಿ ವೇಳೆ ವಶಪಡಿಸಿಕೊಂಡ ಹಣ ಎಲ್ಲಿ ಹೋಗಿದೆ ಎಂಬುದು ನಮಗೆ ತಿಳಿದಿಲ್ಲ ಎಂದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT