ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ(ಜಾತಿ ಗಣತಿ) ನಡೆಸಲು ಸಚಿವ ಸಂಪುಟ ಸಭೆ "ಸರ್ವಾನುಮತದಿಂದ" ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ತಮ್ಮ ನೇತೃತ್ವದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ, ಹೊಸದಾಗಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು 90 ದಿನಗಳ ಗಡುವು ನೀಡಲಾಗಿದೆ ಎಂದು ಹೇಳಿದರು. ಆದರೆ ಸಮೀಕ್ಷೆಯ ವೆಚ್ಚದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ನಾವು ಸಂಪುಟದಲ್ಲಿ ನಿರ್ಧಾರ ತೆಗೆದುಕೊಂಡಿದ್ದೇವೆ. ಹೊಸ ಸಮೀಕ್ಷೆ ನಡೆಸುವುದು ಸರ್ವಾನುಮತದ ನಿರ್ಧಾರವಾಗಿದೆ. ಸರ್ಕಾರವು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದೊಂದಿಗೆ ಸಮಾಲೋಚಿಸಲಿದೆ.... ಹೊಸ ಸಮೀಕ್ಷೆ ಮಾಡಿ ವರದಿ ನೀಡಲು ನಾವು 90 ದಿನಗಳ ಕಾಲಾವಕಾಶ ನೀಡಲಿದ್ದೇವೆ" ಎಂದು ಸಿಎಂ ತಿಳಿಸಿದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆಯ ಸೆಕ್ಷನ್ 11(1) ರ ಪ್ರಕಾರ, ಕೊನೆಯ ಸಮೀಕ್ಷೆ ನಡೆದು ಹತ್ತು ವರ್ಷಗಳು ಕಳೆದಿರುವುದರಿಂದ ರಾಜ್ಯ ಸರ್ಕಾರವೂ ಸಮೀಕ್ಷೆ ನಡೆಸಬೇಕು ಎಂದು ಮುಖ್ಯಮಂತ್ರಿ ಹೇಳಿದರು.
"ಎಲ್ಲಾ ಅಂಶಗಳು ಮತ್ತು ಕಾನೂನನ್ನು ಪರಿಗಣಿಸಿದ ನಂತರ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಿ ಹತ್ತು ವರ್ಷಗಳು ಕಳೆದಿವೆ. ಹಿಂದುಳಿದ ವರ್ಗಗಳ ಆಯೋಗದ ಅಧಿನಿಯಮದ ಪ್ರಕಾರ, ಸಮೀಕ್ಷೆ ನಡೆದು 10 ವರ್ಷದ ನಂತರ ಪರಿಷ್ಕರಣೆಗೆ ಅವಕಾಶವಿದೆ. ಆದ್ದರಿಂದ, ಸಂಪುಟವು ಹೊಸ ಸಮೀಕ್ಷೆ ನಡೆಸಲು ನಿರ್ಧರಿಸಿದೆ; ಮತ್ತು ಕಾಯ್ದೆಯ ಸೆಕ್ಷನ್ 11(2) ರ ಪ್ರಕಾರ ಈ ನಿಟ್ಟಿನಲ್ಲಿ ಆಯೋಗದೊಂದಿಗೆ ಸಮಾಲೋಚಿಸಲು ನಿರ್ಧರಿಸಲಾಗಿದೆ" ಎಂದು ಸಿದ್ದರಾಮಯ್ಯ ತಿಳಿಸಿದರು.
ಕರ್ನಾಟಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಈ ಹಿಂದೆ ಅಡ್ವೊಕೇಟ್ ಜನರಲ್ ಆಗಿದ್ದ ಮಧುಸೂದನ್ ನಾಯಕ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸದಸ್ಯರನ್ನು 2-3 ದಿನಗಳಲ್ಲಿ ನೇಮಿಸಲಾಗುವುದು ಎಂದು ಹೇಳಿದರು.
ಹತ್ತು ವರ್ಷದಲ್ಲಿ ಜನಗಣತಿ ಹೆಚ್ಚಾಗುತ್ತದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಬದಲಾವಣೆಗಳಾಗುತ್ತವೆ. ನಮ್ಮ ಸರ್ಕಾರ ಕಾನೂನು ರೀತಿ ನಿರ್ಧಾರ ಕೈಗೊಂಡಿದೆ. ಹೈಕಮಾಂಡ್ ಸಲಹೆ ನೀಡಿದೆ. ಆದರೆ ಹೈಕಮಾಂಡ್ ನಿರ್ಧಾರಕ್ಕೆ ಮಣಿದಿಲ್ಲ ಎಂದು ಹೇಳಿದರು.
ಕೇಂದ್ರ ಸರ್ಕಾರದ ಮುಂದಿನ ಜನಗಣತಿಯಲ್ಲಿ ಜಾತಿ ಗಣತಿ ನಡೆಸುವ ಪ್ರಶ್ನೆಗೆ ಉತ್ತರಿಸಿದ ಸಿಎಂ, ರಾಜ್ಯದ ಸಮೀಕ್ಷೆಯು ಕೇಂದ್ರಕ್ಕಿಂತ ಭಿನ್ನವಾಗಿರುತ್ತದೆ. ಏಕೆಂದರೆ ಅವರು ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯನ್ನು ಮಾಡುತ್ತಾರೆ ಎಂದು ಎಲ್ಲಿಯೂ ಹೇಳಿಲ್ಲ.
ಬೆಂಗಳೂರಿನ ಕಾಲ್ತುಳಿತ ಪ್ರಕರಣದಿಂದ ಗಮನವನ್ನು ಬೇರೆಡೆ ಸೆಳೆಯಲು ಹೊಸ ಸಮೀಕ್ಷೆಯ ವಿಷಯ ಮುನ್ನೆಲೆಗೆ ತರಲಾಗಿದೆ ಎಂಬ ಬಿಜೆಪಿಯ ಆರೋಪವನ್ನು ಸಿದ್ದರಾಮಯ್ಯ ತಿರಸ್ಕರಿಸಿದರು.
ಮುಸ್ಲಿಂ ಮೀಸಲಾತಿಯನ್ನು ಶೇಕಡಾ 8 ಕ್ಕೆ ಹೆಚ್ಚಿಸುವಂತಹ ಹಿಂದಿನ ಸಮೀಕ್ಷಾ ವರದಿಯಲ್ಲಿ ಮಾಡಲಾದ ಶಿಫಾರಸು ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, "ಹೊಸ ಸಮೀಕ್ಷೆಯ ನಂತರ ಅದನ್ನು ಮರುಪರಿಶೀಲಿಸಲಾಗುವುದು" ಎಂದು ಹೇಳಿದರು.
ಹಿಂದಿನ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯನ್ನು ಮನೆ ಮನೆಗೆ ಹೋಗಿ 54 ಮಾನದಂಡಗಳೊಂದಿಗೆ ನಡೆಸಲಾಯಿತು ಮತ್ತು ವರದಿಯನ್ನು ಸಲ್ಲಿಸಲಾಯಿತು. 2011 ರ ಜನಗಣತಿಯ ಪ್ರಕಾರ ಕರ್ನಾಟಕದ ಜನಸಂಖ್ಯೆ 6.11 ಕೋಟಿ ಆಗಿದ್ದು, 2015 ರ ಹೊತ್ತಿಗೆ, ಇದು 6.35 ಕೋಟಿ ಎಂದು ಅಂದಾಜಿಸಲಾಗಿದೆ. ಅದರಲ್ಲಿ 5.98 ಕೋಟಿಯನ್ನು ಸಮೀಕ್ಷೆ ಮಾಡಲಾಗಿದೆ. ಏಪ್ರಿಲ್ 11 ರಿಂದ ಮೇ 30, 2015 ರ ನಡುವೆ 1.60 ಲಕ್ಷ ಸಿಬ್ಬಂದಿ ಸಮೀಕ್ಷೆ ನಡೆಸಿದ್ದಾರೆ. ಅವರಲ್ಲಿ 1.33 ಲಕ್ಷ ಶಿಕ್ಷಕರು ಸೇರಿದ್ದಾರೆ ಎಂದು ಸಿಎಂ ತಿಳಿಸಿದರು.