ತುಮಕೂರು/ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ತವರು ಜಿಲ್ಲೆ ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವಲ್ಲಿ ಯಶಸ್ವಿಯಾದ ಬೆನ್ನಲ್ಲೇ ಇದೀಗ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ತಮ್ಮ ತವರು ಜಿಲ್ಲೆ ತುಮಕೂರನ್ನು ಬೆಂಗಳೂರು ಉತ್ತರ ಎಂದು ಮರುನಾಮಕರಣ ಮಾಡಲು ಮುಂದಾಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್ ಅವರು, ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರ ವ್ಯಾಪ್ತಿಯು ಈಗಾಗಲೇ ನೆಲಮಂಗಲದವರೆಗೂ ತಲುಪಿದ್ದು, ತುಮಕೂರನ್ನೂ ಸಹ ತಲುಪುವ ಸಾಧ್ಯತೆ ಇದೆ. ನಗರದ ಬೆಳವಣಿಗೆಯನ್ನು ಮನಗಂಡ ಸರ್ಕಾರವು ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿದೆ. ಅದೇ ಮಾದರಿಯಲ್ಲೇ ತುಮಕೂರನ್ನು ಬೆಂಗಳೂರು ಉತ್ತರ ಎಂದು ಹೆಸರಿಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ನಗರದ ಹೊರವಲಯ ಮೈದಾಳ ರಸ್ತೆಯಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ಮಹಿಳೆಯರ ವರ್ಗಗಳ ಸ್ನಾತಕೋತ್ತರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ತುಮಕೂರು ನಗರದ ಸುತ್ತಲಿನ 14 ಗ್ರಾಮ ಪಂಚಾಯಿತಿಗಳನ್ನು ಸೇರಿಸಿ ನಗರವನ್ನು ವಿಸ್ತರಿಸುವ ಪ್ರಸ್ತಾವನೆ ಸಿದ್ಧವಿದ್ದು, ಹಂತ ಹಂತವಾಗಿ ವಿಸ್ತರಣಾ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ತುಮಕೂರು ಎಂಬುದಕ್ಕೂ ಬೆಂಗಳೂರು ನಾರ್ಥ್ ಎಂಬುದಕ್ಕು ತುಂಬಾ ವ್ಯತ್ಯಾಸವಿದೆ. ನ್ಯೂಯಾರ್ಕ್ ನಲ್ಲಿರುವವರಿಗೆ ಬೆಂಗಳೂರು ನಾರ್ಥ್ ಎನ್ನುತ್ತೇವೆ. ತುಮಕೂರು ಅಂದರೆ ಇಲ್ಲೋ ಎಲ್ಲೊ ಇದೆ ಎನ್ನುವ ಹಾಗೆ ಹಾಗತ್ತೆ. ಇದೇ ರೀತಿ ಉಪಮುಖ್ಯಮಂತ್ರಿಗಳು ಒಂದೊಳ್ಳೆ ಕಾನ್ಸೆಪ್ಟ್ ಕೊಟ್ಟಿದ್ದಾರೆ. ರಾಮನಗರ ಬೆಂಗಳೂರು ಸೌತ್ ಎಂದ ಕರಿಯೋಣ ಎಂದು ಹೇಳಿದ್ದಾರೆ. ಇದೇ ರೀತಿ ತುಮಕೂರಲ್ಲೂ ಆದರೆ ಒಳ್ಳೆಯದು ಎಂದು ತಿಳಿಸಿದರು.
ರಾಮನಗರದ ರೀತಿ ನಾವು ಕೂಡ ತುಮಕೂರು ಬಗ್ಗೆಯೂ ಯೋಚನೆ ಮಾಡುತ್ತಿದ್ದೇವೆ. ಈಗಾಗಲೇ ಬೆಂಗಳೂರು ನೆಲಮಂಗಲ ಬಿಟ್ಟು ಈಚೆ ಬಂದಿದೆ. ಇನ್ನೇನು 30 ಕಿ.ಮಿ ಬಂದರೆ ಮುಗಿದು ಹೋಯ್ತು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈಗಾಗಲೇ ಮನೆ ಕಟ್ಟಿಕೊಂಡು ವಾಸವಿರುವ ನಿವಾಸಿಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಅವರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸಮರ್ಪಕ ಕುಡಿಯುವ ನೀರು, ರಸ್ತೆ, ಒಳಚರಂಡಿ ವ್ಯವಸ್ಥೆಯಿಲ್ಲದೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಗರ ವಿಸ್ತರಣೀಕರಣದಿಂದ ನಾಗರಿಕರಿಗೆ ಮೂಲಭೂತ ಸೌಕರ್ಯಗಳು ತಲುಪುತ್ತವೆ ಎಂದರು.
ಏತನ್ಮಧ್ಯೆ, ತುಮಕೂರು ನಗರವನ್ನು ಬೆಂಗಳೂರು ಉತ್ತರ ಎಂದು ಮರುನಾಮಕರಣ ಮಾಡಲು ಕಾರ್ಯಸಾಧ್ಯತಾ ಅಧ್ಯಯನದ ಅಗತ್ಯವಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಇನ್ನ ಪರಮೇಶ್ವರ್ ಅವರ ಈ ಪ್ರಸ್ತಾವನೆ ವಿರುದ್ಧ ಬಿಜೆಪಿ ಕಿಡಿಕಾರಿದೆ. ತುಮಕೂರು ನಗರಕ್ಕೆ ತನ್ನದೇ ಆದ ಗುರುತನ್ನು ನೀಡಲು ವಿಫಲವಾದ ಕಾರಣ ತುಮಕೂರು ನಗರವನ್ನು ಬೆಂಗಳೂರು ಉತ್ತರ ಎಂದು ಮರುನಾಮಕರಣ ಮಾಡುವ ಕಲ್ಪನೆಯನ್ನು ಪ್ರಸ್ತಾಪಿಸಲಾಗುತ್ತಿದೆ ಎಂದು ಬಿಜೆಪಿ ಹಿರಿಯ ನಾಯಕ ಮತ್ತು ಎಂಎಲ್‌ಸಿ ಸಿ.ಟಿ. ರವಿ ಅವರು ಹೇಳಿದ್ದಾರೆ.