ಕರಾವಳಿ ಪ್ರದೇಶದಲ್ಲಿ ಕೋಮು ಹಿಂಸಾಚಾರವನ್ನು ನಿಗ್ರಹಿಸುವ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡುವ ಗುರಿಯನ್ನು ಹೊಂದಿರುವ ವಿಶೇಷ ಕಾರ್ಯಪಡೆ ಕಚೇರಿಯನ್ನು ಗೃಹ ಸಚಿವ ಜಿ ಪರಮೇಶ್ವರ ಶುಕ್ರವಾರ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಉದ್ವಿಗ್ನತೆಗೆ ಕಾರಣವಾದ ಇತ್ತೀಚಿನ ಕೊಲೆ ಸೇರಿದಂತೆ ಜಿಲ್ಲೆಯಲ್ಲಿ ಪದೇ ಪದೆ ನಡೆಯುತ್ತಿರುವ ಹಿಂಸಾಚಾರದ ಘಟನೆಗಳಿಂದಾಗಿ ಎಸ್‌ಎಎಫ್ ಅನ್ನು ಸ್ಥಾಪಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಸರ್ಕಾರದ SAF ಅನ್ನು ರಚನೆ ಮಾಡಿದೆ. ಇದು ಕೋಮು ಭಾಷಣ, ಕೋಮು ಸಂಘರ್ಷ ಸೃಷ್ಟಿಸುವವರನ್ನು ಹತ್ತಿಕ್ಕುವ ದಿಸೆಯಲ್ಲಿ ಈ ಕಾರ್ಯಪಡೆ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ಇಂದು ನಡೆದ 16 ನೇ ಹಣಕಾಸು ಆಯೋಗದ ಸಭೆಯಲ್ಲಿ ಭಾಗಿಯಾಗಿದ್ದರು. ಹಣಕಾಸು ಆಯೋಗದ ಅಧ್ಯಕ್ಷ ಡಾ. ಅರವಿಂದ್ ಪನಗಾರಿಯಾ ಅವರೊಂದಿಗಿನ ಮಾತುಕತೆ ವೇಳೆ ಸಿಎಂ, ನ್ಯಾಯಯುತ ತೆರಿಗೆ ವಿಕೇಂದ್ರೀಕರಣಕ್ಕಾಗಿ ಬಲವಾದ ವಾದ ಮಂಡಿಸಿದ್ದಾರೆ. ಕರ್ನಾಟಕದ 8.7% GDP ಪಾಲು ಮತ್ತು ಎರಡನೇ ಅತಿ ಹೆಚ್ಚು GST ಸಂಗ್ರಹವನ್ನು ಒತ್ತಿಹೇಳಿದ ಅವರು, ರಾಜ್ಯವು ನೀಡುವ ಪ್ರತಿ ರೂಪಾಯಿಗೆ ಕೇವಲ 15 ಪೈಸೆ ಮಾತ್ರ ಪಡೆಯುತ್ತದೆ. ತಲಾ ವಿಕೇಂದ್ರೀಕರಣ ಕುಸಿತ, ದೋಷಪೂರಿತ ಆದಾಯ, ಅನುದಾನಗಳು ಮತ್ತು ವಿಶೇಷ ಅನುದಾನಗಳಲ್ಲಿನ ಅನಿರೀಕ್ಷಿತತೆಯನ್ನು ಸರಿಪಡಿಸಲು ಸುಧಾರಣೆಗಳನ್ನು ಕೈಗೊಳ್ಳುವಂತೆ ಆಯೋಗದ ಸಭೆಯಲ್ಲಿ ಸಿಎಂ ಒತ್ತಾಯಿಸಿದ್ದಾರೆ. ಬೆಂಗಳೂರಿನ ₹1.15 ಲಕ್ಷ ಕೋಟಿ ಮೂಲಸೌಕರ್ಯ ಅಗತ್ಯಗಳನ್ನು ಸಿಎಂ ಸಭೆಯಲ್ಲಿ ಒತ್ತಿ ಹೇಳಿದ್ದು, "ಕರ್ನಾಟಕದ ಹಣಕಾಸಿನ ಬಲ ರಾಷ್ಟ್ರೀಯ ಬೆಳವಣಿಗೆಗೆ ಇಂಧನವಾಗಿದೆ. ಬೆಳವಣಿಗೆಗೆ ದಂಡ ವಿಧಿಸಬಾರದು, ಬದಲಾಗಿ ಪ್ರತಿಫಲ ನೀಡಬೇಕು ಎಂದು ಖಚಿತಪಡಿಸಿಕೊಳ್ಳುವ ಸಮಯ ಇದು. ವಿಕೇಂದ್ರೀಕರಣಕ್ಕೆ ಸಮತೋಲಿತ, ಭವಿಷ್ಯ-ದೃಷ್ಟಿಕೋನ ವಿಧಾನವನ್ನು ಅಳವಡಿಸಿಕೊಳ್ಳುವಂತೆ ನಾವು ಆಯೋಗವನ್ನು ಒತ್ತಾಯಿಸುತ್ತೇವೆ" ಎಂದು ಹೇಳಿದ್ದಾರೆ.
ಬಿಜೆಪಿ ಮುಖಂಡ, ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದ ಆರೋಪಿ ಮಾಜಿ ಸಚಿವ ವಿನಯ್ ಕುಲಕರ್ಣಿ ಇಂದು ನ್ಯಾಯಾಲಯದ ಮುಂದೆ ಶರಣಾಗಿದ್ದು, ಕೋರ್ಟ್ ಅವರನ್ನು ಸಿಬಿಐ ವಶಕ್ಕೆ ನೀಡಿ ಆದೇಶ ಹೊರಡಿಸಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಅವರ ಜಾಮೀನನ್ನು ರದ್ದುಪಡಿಸಿ, ಒಂದು ವಾರದೊಳಗೆ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿತ್ತು. 2016 ರ ಜೂನ್ 15 ರಂದು ಯೋಗೀಶ ಗೌಡನನ್ನು ಅವರದ್ದೇ ಮಾಲೀಕತ್ವದ ಜಿಮ್ನಲ್ಲಿ ಭೀಕರವಾಗಿ ಹತ್ಯೆಗೈಯ್ಯಲಾಗಿತ್ತು. ಇದರಲ್ಲಿ ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಕೈವಾಡ ಇದೆ ಎಂದು ಆರೋಪಿಸಿ, ಅವರನ್ನು 2020 ನವೆಂಬರ್ 5 ರಂದು ಸಿಬಿಐ ಬಂಧಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸುಪ್ರೀಂಕೋರ್ಟ್ ವಿನಯ್ ಕುಲಕರ್ಣಿ ಜಾಮೀನು ರದ್ದುಗೊಳಿಸಿ ಆದೇಶಿಸಿತ್ತು.
ಕರ್ನಾಟಕದ ಮಾವು ಬೆಳೆಗಾರರಿಗೆ ತುರ್ತು ಬೆಲೆ ಕೊರತೆ ಪಾವತಿ ಮತ್ತು ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ ಜಾರಿಗೆ ತರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಸದ್ಯದ ಸುಗ್ಗಿಯಲ್ಲಿ ಮಾರುಕಟ್ಟೆ ಬೆಲೆಗಳಲ್ಲಿ ತೀವ್ರ ಕುಸಿತದಿಂದಾಗಿ ಕರ್ನಾಟಕದಾದ್ಯಂತ ಮಾವು ಬೆಳೆಗಾರರು ಎದುರಿಸುತ್ತಿರುವ 'ತೀವ್ರ ಸಂಕಷ್ಟ'ದ ಬಗ್ಗೆ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ರಾಜ್ಯದಲ್ಲಿ ಸುಮಾರು 1.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ ಮತ್ತು ಈ ರಬಿ ಋತುವಿನಲ್ಲಿ ವಿಶೇಷವಾಗಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಗಳಲ್ಲಿ 8 ರಿಂದ 10 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯ ಅಂದಾಜು ಇದೆ'. ಮೇ ನಿಂದ ಜುಲೈವರೆಗಿನ ಸುಗ್ಗಿ ತಿಂಗಳುಗಳಲ್ಲಿ, ಬೆಲೆಯಲ್ಲಿ ಗಣನೀಯ ಏರಿಳಿತಗಳು ಉಂಟಾಗಿವೆ. ಈ ಹಿಂದೆ ಕ್ವಿಂಟಲ್‌ಗೆ 12,000 ರೂ. ಗಳಷ್ಟಿದ್ದ ಮಾರುಕಟ್ಟೆ ಬೆಲೆ ಈಗ ಕ್ವಿಂಟಲ್‌ಗೆ 3,000 ರೂ. ಗೆ ಇಳಿದಿದೆ. ರೈತರು ಕನಿಷ್ಠ ಕೃಷಿ ವೆಚ್ಚವನ್ನು ಪಡೆಯಲು, ಸೂಕ್ತ ಮಧ್ಯಸ್ಥಿಕೆ ಬೆಲೆಯಲ್ಲಿ ಖರೀದಿ ಕಾರ್ಯಾಚರಣೆಗಳನ್ನು ತಕ್ಷಣವೇ ಪ್ರಾರಂಭಿಸಲು ಅಗತ್ಯ ನಿರ್ದೇಶನಗಳನ್ನು ನೀಡಬೇಕೆಂದು ಹೇಳಿದ್ದಾರೆ.
ನಗರದಲ್ಲಿನ ಕಸದ ಸಮಸ್ಯೆ ಬಗೆಹರಿಸುವುದಕ್ಕಾಗಿ ಎಲ್ಲೆಂದರಲ್ಲಿ ಕಸ ಎಸೆದು ಹೋಗುವವರನ್ನು ಹಿಡಿದುಕೊಡಲು ಬಿಬಿಎಂಪಿ ಕ್ರಮ ಕೈಗೊಂಡಿದ್ದು, ವಾಟ್ಸಪ್ ಸಂಖ್ಯೆಯೊಂದನ್ನು ಜನತೆಗೆ ನೀಡಿದೆ. ಕಸ ಎಸೆಯುವವರ ಫೋಟೋ ತೆಗೆದು 9448197197 ಈ ನಂಬರ್‌ಗೆ ಕಳಿಸಿದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪಾಲಿಕೆ ಹೇಳಿದೆ. ಪಾಲಿಕೆಯ 8 ವಲಯಗಳಲ್ಲಿ ಬರುವ ಎಲ್ಲಾ ವಾರ್ಡ್‌ಗಳಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುವುದನ್ನು ಶಾಶ್ವತವಾಗಿ ತಪ್ಪಿಸಲು ಕ್ರಮ ಕೈಗೊಂಡಿದೆ.